ಮಾಜಿ ಎಬಿವಿಪಿ ಸದಸ್ಯನಿಂದ ಮೋದಿಗೆ 3ನೇ ಸಲ ಸವಾಲು!

| Published : Mar 25 2024, 12:57 AM IST / Updated: Mar 25 2024, 12:48 PM IST

ಸಾರಾಂಶ

ಉತ್ತರಪ್ರದೇಶದ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಭೂಮಿಹಾರ್‌ ಸಮುದಾಯದ ನಾಯಕ ಅಜಯ್‌ ರಾಯ್‌ ಅವರಿಗೆ ವಾರಾಣಸಿ ಕ್ಷೇತ್ರದಿಂದ 3ನೇ ಬಾರಿ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದೆ.

ವಾರಾಣಸಿ: ಉತ್ತರಪ್ರದೇಶದ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಭೂಮಿಹಾರ್‌ ಸಮುದಾಯದ ನಾಯಕ ಅಜಯ್‌ ರಾಯ್‌ ಅವರಿಗೆ ವಾರಾಣಸಿ ಕ್ಷೇತ್ರದಿಂದ 3ನೇ ಬಾರಿ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದೆ.

ಇದರೊಂದಿಗೆ ಒಂದು ಕಾಲದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಸದಸ್ಯನಾಗಿದ್ದ ರಾಯ್‌ ಅವರು, ವಾರಾಣಸಿಯ ಹಾಲಿ ಸಂಸದ ಆಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೂರನೇ ಬಾರಿಗೆ ಕಣಕ್ಕೆ ಇಳಿದಂತಾಗಿದೆ.

ಯಾರು ಈ ಅಜಯ್‌ ರಾಯ್‌?
ಅಜಯ್‌ ರಾಯ್‌ 90ರ ದಶಕದಿಂದಲೂ ಉತ್ತರ ಪ್ರದೇಶದಲ್ಲಿ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಆರ್‌ಎಸ್‌ಎಸ್‌ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ತಮ್ಮ ರಾಜಕೀಯ ಪಯಣವನ್ನು ಆರಂಭಿಸಿ 1996ರಲ್ಲಿ ಮೊದಲ ಬಾರಿಗೆ ಕೊಲಾಸ್ಲ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾದರು. 

ಅವರು ಕೊಲಾಸ್ಲ ಕ್ಷೇತ್ರದಿಂದ ಸತತ 3 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದರು. ಆದರೆ 2009ರಲ್ಲಿ ಅವರಿಗೆ ಬಿಜೆಪಿ ವಾರಾಣಸಿಯಲ್ಲಿ ಲೋಕಸಭಾ ಕ್ಷೇತ್ರದ ಟಿಕೆಟ್‌ ನಿರಾಕರಿಸಿತು. 

ಆಗ ಪಕ್ಷ ತೊರೆದು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿಯ ಹಿರಿಯ ಧುರೀಣ ಮುರಳಿ ಮನೋಹರ್‌ ಜೋಶಿ ವಿರುದ್ಧ ಸೋತರು. ಆದರೂ ಪ್ರಬಲ ಸ್ಪರ್ಧೆ ಒಡ್ಡಿ ಬಿಜೆಪಿಗೆ ಎಚ್ಚರಿಕೆ ಸಂದೇಶ ನೀಡಿದ್ದರು. 

ನಂತರ 2012ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಪಿಂಡ್ರಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಆಮೇಲೆ 2014ರಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ವಾರಾಣಸಿಯಲ್ಲಿ ಸ್ಪರ್ಧಿಸಿದರು. 

ಆಗಿನಿಂದಲೂ ರಾಯ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, 2019ರಲ್ಲೂ ಸೋತರು. ಈಗ ಮೂರನೇ ಬಾರಿಗೆ ಮತ್ತೊಮ್ಮೆ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. 

ಅಜಯ್‌ ರಾಯ್‌ ಪ್ರಭಾವವೇನು?
ಅಜಯ್‌ ರಾಯ್ ಪ್ರಬಲ ಭೂಮಿಹಾರ್‌ ಸಮುದಾಯದವರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್‌ 2023ರಲ್ಲಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದೆ. 

ಅವರು ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಯ ಎರಡು ಚರಣಗಳಲ್ಲೂ ಉತ್ತರ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುವಂತೆ ನಿರ್ವಹಣೆ ಮಾಡಿದ ಖ್ಯಾತಿಯಿದೆ. 

ಈ ಹಿನ್ನೆಲೆಯಲ್ಲಿ ಪ್ರಧಾನಿ ವಿರುದ್ಧ ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ತಳಮಟ್ಟದಿಂದ ಕಾಂಗ್ರೆಸ್‌ ಪಕ್ಷವು ಉತ್ತರ ಪ್ರದೇಶದಲ್ಲಿ ತನ್ನ ಮತಗಳಿಕೆಯನ್ನು ಪುನಶ್ಚೇತನ ಮಾಡಿಕೊಳ್ಳುವ ಲೆಕ್ಕಾಚಾರವನ್ನು ಹೊಂದಿದೆ.