ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಲ್ಲಿದ್ದ ದಾಖಲೆಗಳನ್ನು ಎತ್ತಿಕೊಂಡು ಹೋಗಿದ್ದಾರೆ.

 ಕೋಲ್ಕತಾ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಚುನಾವಣಾ ತಂತ್ರಗಾರಿಕೆಗೆ ಹೆಸರಾಗಿರುವ ‘ಐ ಪ್ಯಾಕ್‌’ ಸಂಸ್ಥೆ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಕೋಲ್ಕತಾದಲ್ಲಿ ಐಪ್ಯಾಕ್‌ ಮುಖ್ಯಸ್ಥನ ಮನೆಯ ಮೇಲೆ ದಾಳಿ ನಡೆದಾಗ ಅಲ್ಲಿಗೆ ಏಕಾಏಕಿ ನಾಟಕೀಯವಾಗಿ ನುಗ್ಗಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಲ್ಲಿದ್ದ ದಾಖಲೆಗಳನ್ನು ಎತ್ತಿಕೊಂಡು ಹೋಗಿದ್ದಾರೆ.

ಈ ಘಟನೆ ಟಿಎಂಸಿ ಮತ್ತು ಇ.ಡಿ. ನಡುವೆ ಭಾರೀ ವಾಕ್ಸಮರ ಮತ್ತು ಕಾನೂನು ಜಟಾಪಟಿಗೆ ಕಾರಣವಾಗಿದೆ. ‘ಇದು ರಾಜಕೀಯಪ್ರೇರಿತ ದಾಳಿ. ಟಿಎಂಸಿಯ ಚುನಾವಣಾ ದಾಖಲೆ ಕದಿಯಲು ಇ.ಡಿ. ದಾಳಿ ನಡೆಸಿದೆ. ಇದರ ವಿರುದ್ಧ ಶುಕ್ರವಾರ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಮಮತಾ ಘೋಷಿಸಿದ್ದಾರೆ. ಆದರೆ ಈ ಆರೋಪವನ್ನು ಕೇಂದ್ರೀಯ ತನಿಖಾ ಸಂಸ್ಥೆ ತಳ್ಳಿ ಹಾಕಿದೆ. ಜೊತೆಗೆ, ಕರ್ತವ್ಯಕ್ಕೆ ಅಡ್ಡಿ ಮತ್ತು ಸಾಕ್ಷ್ಯ ನಾಶ ಆರೋಪದಡಿ ಮಮತಾ ಮತ್ತು ಪೊಲೀಸರ ವಿರುದ್ಧ ಇ.ಡಿ. ಹೈಕೋರ್ಟ್‌ ಮೆಟ್ಟಿಲೇರಿದೆ. ಮತ್ತೊಂದೆಡೆ ಐ ಪ್ಯಾಕ್‌ ಸಂಸ್ಥೆ ಮುಖ್ಯಸ್ಥ ಕೂಡ ಇ.ಡಿ. ವಿರುದ್ಧ ದೂರು ದಾಖಲಿಸಿದ್ದಾರೆ.

ಇ.ಡಿ ರೇಡ್‌:

ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆಯ ಪ್ರಕರಣ ಸಂಬಂಧ ಗುರುವಾರ ಬೆಳಗಿನ ಜಾವ ಸಾಲ್ಟ್‌ ಲೇಕ್‌ನಲ್ಲಿರುವ ‘ಐ ಪ್ಯಾಕ್‌’ ಎಂಬ ರಾಜಕೀಯ ಸಲಹಾ ಸಂಸ್ಥೆ ಮತ್ತದರ ಮುಖ್ಯಸ್ಥ ಪ್ರತೀಕ್‌ ಜೈನ್‌ ಅವರ ಕೋಲ್ಕತಾ ಮತ್ತು ದೆಹಲಿ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಮಧ್ಯಾಹ್ನದವರೆಗೂ ಯಾವುದೇ ತೊಂದರೆ ಇಲ್ಲದೆ ದಾಳಿ ಮುಂದುವರೆದಿತ್ತು.

ಹೈಡ್ರಾಮಾ:

ಈ ನಡುವೆ ಗುರುವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಇ.ಡಿ. ದಾಳಿ ನಡೆಸುತ್ತಿದ್ದ ಪ್ರತೀಕ್‌ ಜೈನ್‌ ಮನೆಗೆ ಬಂಗಾಳ ಪೊಲೀಸರು, ಪಕ್ಷದ ಕಾರ್ಯಕರ್ತರ ಜತೆ ನುಗ್ಗಿದ ಮಮತಾ ಅಲ್ಲಿದ್ದ ಕೆಲವೊಂದು ಕಡತಗಳನ್ನು ಎತ್ತಿಕೊಂಡು ಹೊರಗೆ ಬಂದರು. ಈ ವೇಳೆ ಪ್ರತಿಕ್ರಿಯೆ ನೀಡಿದ ದೀದಿ ‘ಇದು ರಾಜಕೀಯ ದ್ವೇಷದ ದಾಳಿ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇ.ಡಿ. ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಪಕ್ಷದ ಮಾಹಿತಿ, ಅಭ್ಯರ್ಥಿಗಳ ಪಟ್ಟಿ, ಆಂತರಿಕ ಚುನಾವಣಾ ರಣತಂತ್ರದ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಹೀಗಾಗಿ ಅಲ್ಲಿದ್ದ ಪಕ್ಷದ ಚುನಾವಣೆಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನಾನು ಮರಳಿ ತಂದಿದ್ದೇನೆ’ ಎಂದರು.

ಇ.ಡಿ. ಕಿಡಿ:

ಆದರೆ ಮಮತಾ ಆರೋಪ ತಳ್ಳಿಹಾಕಿದ ಜಾರಿ ನಿರ್ದೇಶನಾಲಯ, ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ ಸಂಬಂಧ ದಾಳಿ ನಡೆಸಿದ್ದೇವೆ. ಟಿಎಂಸಿ ಪಕ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಶೋಧ ನಡೆಸಿಲ್ಲ’ ಎಂದಿದೆ. ಜೊತೆಗೆ ಜೈನ್ ಮನೆಗೆ ನುಗ್ಗಿ ಮಮತಾ, ಪೊಲೀಸರು ಮತ್ತು ಅವರ ಪಕ್ಷದ ಕಾರ್ಯಕರ್ತರು ಮಹತ್ವದ ದಾಖಲೆಗಳನ್ನು ಬಲವಂತವಾಗಿ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದೆ.

ಬಿಜೆಪಿ ಅಸಮಾಧಾನ:

ಇ.ಡಿ. ದಾಳಿ ವೇಳೆ ಮಮತಾರ ಉಪಸ್ಥಿತಿಯ ಬಗ್ಗೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ನಗರ ಪೊಲೀಸ್‌ ಕಮಿಷನರ್‌ ಜತೆ ಸಿಎಂ ಅಲ್ಲಿಗೆ ಹೋಗಿದ್ದು ಅನೈತಿಕ ಮತ್ತು ಸಂವಿಧಾನಬಾಹಿರ. ಇದು ಕೇಂದ್ರೀಯ ಸಂಸ್ಥೆಯ ತನಿಖೆಯಲ್ಲಿ ನೇರ ಹಸ್ತಕ್ಷೇಪ’ ಎಂದಿದ್ದಾರೆ.

ಏನಿದು ರಾದ್ಧಾಂತ?

1. ಚುನಾವಣಾ ತಂತ್ರಗಾರ ಸೇವೆಯನ್ನು ‘ಐಪ್ಯಾಕ್‌’ ಸಂಸ್ಥೆ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಒದಗಿಸುತ್ತಿದೆ

2. ಕಲ್ಲಿದ್ದಲು ಹಗರಣದ ಅಕ್ರಮ ಹಣ ವರ್ಗಾವಣೆ ಸಂಬಂಧ ಐಪ್ಯಾಕ್‌ ಮೇಲೆ ಜಾರಿ ನಿರ್ದೇಶನಾಲಯ ದಾಳಿ

3. ಕೋಲ್ಕತಾದಲ್ಲಿ ಐಪ್ಯಾಕ್ ಮುಖ್ಯಸ್ಥನ ಮನೆಯಲ್ಲಿ ಶೋಧ. ಅಲ್ಲಿಗೆ ಪೊಲೀಸರ ಜತೆ ಧಾವಿಸಿದ ಮಮತಾ

4. ಇ.ಡಿ. ರೇಡ್‌ ನಡೆಯುತ್ತಿರುವ ಮನೆಯಿಂದ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೊರಬಂದ ಮುಖ್ಯಮಂತ್ರಿ

5. ಕಂಡುಕೇಳರಿಯದ ಬೆಳವಣಿಗೆ. ಬಿಜೆಪಿಯಿಂದ ಆಕ್ರೋಶ. ಮಮತಾ ಬ್ಯಾನರ್ಜಿ ಪಕ್ಷದಿಂದ ತೀವ್ರ ತಿರುಗೇಟು

6. ಇಂದು ಪ್ರತಿಭಟನೆಗೆ ಮಮತಾ ಕರೆ. ಸಿಎಂರಿಂದ ಕರ್ತವ್ಯಕ್ಕೆ ಅಡ್ಡಿ ಎಂದು ಕೋರ್ಟ್‌ ಮೆಟ್ಟಿಲೇರಿದ ಇ.ಡಿ.

ಮಮತಾ ವಾದವೇನು?

ಇ.ಡಿ. ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಪಕ್ಷದ ಮಾಹಿತಿ, ಅಭ್ಯರ್ಥಿಗಳ ಪಟ್ಟಿ, ಆಂತರಿಕ ಚುನಾವಣಾ ರಣತಂತ್ರದ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಹೀಗಾಗಿ ಅಲ್ಲಿದ್ದ ಪಕ್ಷದ ಚುನಾವಣೆಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನಾನು ಮರಳಿ ತಂದಿದ್ದೇನೆ. ಮೋದಿ ಅವರು ಅಮಿತ್‌ ಶಾ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. - ಮಮತಾ ಬ್ಯಾನರ್ಜಿ, ಬಂಗಾಳ ಸಿಎಂ