ಸಾರಾಂಶ
ನವದೆಹಲಿ: ನೋಯ್ಡಾದಲ್ಲಿ ಬೀದಿ ನಾಯಿಗಳಿಗೆ ರಸ್ತೆಯಲ್ಲಿ ಅಹಾರ ಹಾಕುವುದನ್ನು ನಿಷೇಧಿಸಿದ್ದರೂ ಊಟ ನೀಡಿದವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ‘ಬೀದಿಯಲ್ಲಿ ಊಟ ಹಾಕುವ ಬದಲು ನಿಮ್ಮ ಮನೆಯಲ್ಲಿ ಏಕೆ ಆಹಾರ ನೀಡಬಾರದು?’ ಎಂದು ತರಾಟೆಗೆ ತೆಗೆದುಕೊಂಡಿದೆ.
ನೋಯ್ಡಾದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಕ್ಕಾಗಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ನೀವು ನಿಮ್ಮ ಮನೆಗಳಲ್ಲಿ ಏಕೆ ಊಟ ನೀಡಬಾರದು? ನಿಮ್ಮನ್ನು ತಡೆದವರು ಯಾರು? ಪ್ರತಿಯೊಂದು ಓಣಿ ಮತ್ತು ರಸ್ತೆಯನ್ನು ನಿಮ್ಮಂಥ ದೊಡ್ಡ ಹೃದಯದ ಜನರಿಗೆ ಮಾತ್ರ ತೆರೆದಿಡಬೇಕೆ? ಮನುಷ್ಯರಿಗೆ ಓಡಾಡಲು ಸ್ಥಳವೇ ಇಲ್ಲವೇ? ಪ್ರಾಣಿಗಳಿಗೆ ಸ್ಥಳ ಮೀಸಲೇ?’ ಎಂದು ಕಿಡಿಕಾರಿತು.
ಇದೇ ವೇಳೆ ಬೀದಿ ನಾಯಿಗಳ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ , ‘ಬೈಕ್ ಸವಾರರು , ವಾಕಿಂಗ್ ಮಾಡುವವರು, ಸ್ಲೈಕ್ಲಿಂಗ್ ಮಾಡುವವರು ಹೆಚ್ಚು ಅಪಾಯದಲ್ಲಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು,