ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ

| Published : Jul 15 2025, 11:45 PM IST

ಸಾರಾಂಶ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಖಮ್ಮರುನ್ನಿಸಾ ಬನಾರಸಿ ಎಂಬ ಬಾಲಕಿ ಮೇಲೆ ಏಕಾಏಕಿ ಎರಗಿದ ಎರಡು ನಾಯಿಗಳು ರಸ್ತೆಯಲ್ಲಿ ಎಳೆದಾಡಿವೆ. ಅಲ್ಲದೆ, ಕಾಲಿಗೆ ಅಲ್ಲಲ್ಲಿ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಅವಳು ಕಿರುಚಾಡಿದ್ದರಿಂದ ಬಿಟ್ಟು ಓಡಿ ಹೋಗಿವೆ.

ಹುಬ್ಬಳ್ಳಿ: ಬಾಲಕಿ ಮೇಲೆ ಬೀದಿ ನಾಯಿಗಳು ಮಾರಣಾಂತಿಕ ದಾಳಿ ನಡೆಸಿದ ಘಟನೆ ಇಲ್ಲಿನ ಶಿಮ್ಲಾನಗರದಲ್ಲಿ ಮಂಗಳವಾರ ನಡೆದಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಖಮ್ಮರುನ್ನಿಸಾ ಬನಾರಸಿ ಎಂಬ ಬಾಲಕಿ ಮೇಲೆ ಏಕಾಏಕಿ ಎರಗಿದ ಎರಡು ನಾಯಿಗಳು ರಸ್ತೆಯಲ್ಲಿ ಎಳೆದಾಡಿವೆ. ಅಲ್ಲದೆ, ಕಾಲಿಗೆ ಅಲ್ಲಲ್ಲಿ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಅವಳು ಕಿರುಚಾಡಿದ್ದರಿಂದ ಬಿಟ್ಟು ಓಡಿ ಹೋಗಿವೆ. ನಾಯಿಗಳ ದಾಳಿಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಾಯಿಗಳ ಉಪಟಳ ಹೆಚ್ಚಾಗಿದ್ದು, ಪಾಲಿಕೆ ಕಡಿವಾಣ ಹಾಕುವಂತೆ ಜನತೆ ಆಗ್ರಹಿಸಿದ್ದಾರೆ.

ಪಾಲಿಕೆಯ ಎಐಎಂಐಎಂನ ಸದಸ್ಯ ನಜೀರ್‌ ಹೊನ್ಯಾಳ ಮಾತನಾಡಿ, ಬೀದಿ ನಾಯಿಗಳ ಹಾವಳಿ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಬಾರಿಯೂ ಚರ್ಚೆಯಾಗುತ್ತದೆ. ಆದರೆ, ಕ್ರಮವಾಗುವುದಿಲ್ಲ. ಪದೇ ಪದೇ ಬೀದಿ ನಾಯಿಗಳು ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇವೆ. ಇನ್ನಾದರೂ ಪಾಲಿಕೆ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಸಾಕ್ಷಿ ಹೇಳಲು ಮುಂದಾಗಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳ ದಾಳಿ

ಹುಬ್ಬಳ್ಳಿ:

ಇಲ್ಲಿನ ಮಂಟೂರು ರಸ್ತೆ ಅರಳಿಕಟ್ಟಿ ಓಣಿಯಲ್ಲಿ ಕಳೆದ ಬುಧವಾರ ಎರಡು ಗುಂಪುಗಳ ಮಧ್ಯೆ ನಡೆದಿದ್ದ ಹೊಡೆದಾಟ ಪ್ರಕರಣದಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ಮಹಿಳೆ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ಸೆಟ್ಲಮೆಂಟ್‌ನ ಮಾವುಬಿ ಬಿಜಾಪುರ ಎಂದು ಗುರುತಿಸಲಾಗಿದೆ. ಸದ್ಯ ಇವರನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಟೂರ ರಸ್ತೆಯ ಮೌಲಾಲಿ ದರ್ಗಾದ ಬಳಿ ತೆರಳುತ್ತಿದ್ದಾಗ ಬೈಕ್‌ ಮೇಲೆ ಬಂದ ಇಬ್ಬರು ಮುಸುಕುಧಾರಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?: ಗಡಿಪಾರಾಗಿರುವ ದಾವೂದ್‌ನ ಸಹಚರರು ಹಾಗೂ ಶ್ಯಾಮ್ ಜಾಧವ ಕುಟುಂಬದವರ ನಡುವೆ ಕಳೆದ ಬುಧ‍ವಾರ ಹೊಡೆದಾಟ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 22 ಜನರನ್ನು ಬಂಧಿಸಿದ್ದಾರೆ. ಅಂದು ಘಟನೆ ನಡೆದ ಸ್ಥಳದಲ್ಲೇ ಮಾವುಬಿ ಬಿಜಾಪುರ ಇದ್ದರು. ಗಲಾಟೆಯಲ್ಲಿ ಮಾವುಬಿ ಕಾಲಿಗೂ ಪೆಟ್ಟಾಗಿತ್ತು. ಈ ಹಿನ್ನೆಲೆ ಪೊಲೀಸ್ ಠಾಣೆಗೆ ತೆರಳಿದ್ದ ಮಾವುಬಿಗೆ ಸಾಕ್ಷಿಯಾಗುವಂತೆ ಪೊಲೀಸರು ಹೇಳಿದ್ದರು. ಇದೇ ಕಾರಣದಿಂದ ಹಲ್ಲೆ ನಡೆದಿರಬಹುದು ಎಂದು ಮಹಿಳೆ ಸಂಶಯ ವ್ಯಕ್ತಪಡಿಸಿದ್ದಾರೆ.