ಸಾರಾಂಶ
ತಿರುವನಂತಪುರಂ: ಮದ್ಯದ ಅಂಗಡಿಗಳೆಂದರೆ ಮಹಿಳೆಯರು ದೂರ ದೂರ. ಇನ್ನು ಮದ್ಯ ಮಾರಾಟ ಮಳಿಗೆಗಳಲ್ಲಿ ಅವರನ್ನು ಕಾಣುವುದೂ ಕಷ್ಟ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಕೇರಳದ ಸರ್ಕಾರಿ ಸ್ವಾಮ್ಯದ ಮದ್ಯದ ಮಳಿಗೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ.
ಕೇರಳದಲ್ಲಿ ಸರ್ಕಾರವೇ ಮದ್ಯ ಮಾರಾಟ ಮಳಿಗೆಗಳನ್ನು ನಿರ್ವಹಿಸುತ್ತದೆ. ಅದರ ಹೊಣೆ ಕೇರಳ ರಾಜ್ಯ ಪಾನೀಯ ನಿಗಮ ನಿಯಮಿತ(ಬಿಇವಿಸಿಒ)ಯದ್ದು. ಅದರಲ್ಲಿ ಇದೀಗ ಶೇ.50ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿಗಳಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಲಿಕ್ಕರ್ ಮಳಿಗೆಗಳಲ್ಲಿ ಕೆಲಸ ನಿರ್ವಹಿಸಿರುವುದು ದೇಶದಲ್ಲಿ ಕೇರಳವೇ ಮೊದಲು.
ಆರಂಭದಲ್ಲಿ ಬಿಇವಿಸಿಒ ಮಳಿಗೆಗಳಲ್ಲಿ ಕೆಲಸ ಮಾಡುವುದು ಮಹಿಳೆಯರಿಗೆ ಸವಾಲಿನ ಕೆಲಸವಾಗಿತ್ತು. ಕೌಟುಂಬಿಕ ವಿರೋಧಗಳು ಎದುರಾಗಿತ್ತು. ಆದರೆ ಅದೆಲ್ಲವನ್ನೂ ನಿಭಾಯಿಸಿ ಮಹಿಳೆಯರಿಗೆ ಮದ್ಯದ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇರಳದ ಸ್ತ್ರೀಯರು ಲಿಕ್ಕರ್ ಮಳಿಗೆಗಳಲ್ಲಿ ಹೆಚ್ಚೆಚ್ಚು ಕೆಲಸಕ್ಕೆ ತೊಡಗಿಸಿಕೊಂಡಿರುವುದರ ಪರಿಣಾಮ ಬಿಇವಿಸಿಒನಲ್ಲಿ ಕೆಲಸ ಗಿಟ್ಟಿಸಿಳ್ಳಲು ಮಹಿಳೆಯರು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ತೋರುತ್ತಿದ್ದಾರೆ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ.