‘2047ಕ್ಕೆ ವಿಕಸಿತ ಭಾರತ ನಿರ್ಮಾಣ ಆಗಲು ಬಾಕಿ ಇರುವ ಕೆಲಸಗಳನ್ನು ಬೇಗ ಮುಗಿಸಬೇಕು’ ಎಂದು ತಮ್ಮ ಮಂತ್ರಿಮಂಡಲದ ಎಲ್ಲ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಅಲ್ಲದೆ, ಮಧ್ಯಪ್ರಾಚ್ಯ ಕದನದ ಪರಿಣಾಮ ಜನರ ಮೇಲೆ ಹೆಚ್ಚು ಆಗದಂತೆ ಕ್ರಮಗಳನ್ನು ಕೈಗೊಳ್ಳಬೇಕು
ನವದೆಹಲಿ: ‘2047ಕ್ಕೆ ವಿಕಸಿತ ಭಾರತ ನಿರ್ಮಾಣ ಆಗಲು ಬಾಕಿ ಇರುವ ಕೆಲಸಗಳನ್ನು ಬೇಗ ಮುಗಿಸಬೇಕು’ ಎಂದು ತಮ್ಮ ಮಂತ್ರಿಮಂಡಲದ ಎಲ್ಲ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಅಲ್ಲದೆ, ಮಧ್ಯಪ್ರಾಚ್ಯ ಕದನದ ಪರಿಣಾಮ ಜನರ ಮೇಲೆ ಹೆಚ್ಚು ಆಗದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ತಾಕೀತು ಮಾಡಿದ್ದಾರೆ.
ಗುರುವಾರ 5 ದೇಶಗಳ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಸಂಜೆ 5 ಗಂಟೆಯಿಂದ 4.5 ಗಂಟೆ ಕಾಲ ಸೇವಾ ತೀರ್ಥದಲ್ಲಿ ತಮ್ಮ ಮಂತ್ರಿಮಂಡಲದ ಎಲ್ಲ ಸಚಿವರ ಸಭೆ ನಡೆಸಿದ ಮೋದಿ ಮಧ್ಯಪ್ರಾಚ್ಯ ಬಿಕ್ಕಟ್ಟು, ಅದರಿಂದ ಆಗುತ್ತಿರುವ ಸಂಭಾವ್ಯ ಪರಿಣಾಮ, ವಿಕಸಿತ ಭಾರತ ನಿರ್ಮಾಣಕ್ಕೆ ಇರುವ ಸವಾಲು ಸೇರಿ ಹತ್ತು ಹಲವಾರು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ವಿಕಸಿತ ಭಾರತ ಬರೀ ಘೋಷಣೆ ಬೇಡ:
ಈ ವೇಳೆ, ‘20467ಕ್ಕೆ ವಿಕಸಿತ ಭಾರತ ಗುರಿ ತಲುಪಲು ಬಾಕಿ ಇರುವ ಎಲ್ಲ ಕೆಲಸಗಳನ್ನು ಬೇಗ ಮುಗಿಸಬೇಕು. ವಿಕಸಿತ ಭಾರತ ಎಂಬುದು ಬರೀ ಘೋಷಣೆ ಆಗಬಾರದು. ಗುರಿ ತಲುಪಬೇಕು’ ಎಂದು ಸಚಿವರಿಗೆ ಮೋದಿ ತಾಕೀತು ಮಾಡಿದರು.
ಇದಲ್ಲದೆ, ತಮ್ಮ 3ನೇ ಅವಧಿಯ ಸರ್ಕಾರಕ್ಕೆ ಈಗ 2 ವರ್ಷ ತುಂಬುತ್ತಿದ್ದು, ಎಲ್ಲಿ ಅಂದುಕೊಂಡ ಕೆಲಸಗಳು ಬಾಕಿ ಇವೆ ಎಂಬುದನ್ನು ಗುರುತಿಸಬೇಕು ಎಂದು ಸಚಿವರಿಗೆ ಸೂಚಿಸಿದರು ಎದು ಅವು ತಿಳಿಸಿವೆ.
ಜನರ ಮೇಲೆ ಪರಿಣಾಮ ಬೇಡ:
‘ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಬಗ್ಗೆ ಮಾತನಾಡಿದ ಮೋದಿ, ಇದನ್ನು ಹೇಗೆ ನಿಭಾಯಿಸಬೇಕು, ಯಾವ ಪರ್ಯಾಯ ಮಾರ್ಗಗಳಿಂದ ತೈಲ ತರಿಸಿಕೊಳ್ಳಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಿದರು. ಯುದ್ಧದ ಪರಿಣಾಮ ಜನರ ಮೇಲೆ ಹೆಚ್ಚು ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು’ ಎಂದು ಮೂಲಗಳು ಹೇಳಿವೆ.
ಸಭೆಯಲ್ಲಿ ಇಂಧನ, ಕೃಷಿ, ರಸಗೊಬ್ಬರ, ವಾಯುಯಾನ, ಸಾಗಣೆ ಮತ್ತು ಲಾಜಿಸ್ಟಿಕ್ಸ್‌ನಂತಹ ಕ್ಷೇತ್ರಗಳು ಕೇಂದ್ರೀಕೃತ ಗಮನವನ್ನು ಪಡೆದವು.
ಅರ್ಧ ಡಜನ್‌ಗೂ ಹೆಚ್ಚು ಸಚಿವಾಲಯಗಳು ಸಭೆಯಲ್ಲಿ ಪ್ರಸ್ತುತಿಗಳನ್ನು ನೀಡಿದ್ದು, 9 ಸಚಿವಾಲಯಗಳು ತಮ್ಮ ಕಾರ್ಯಕ್ಷಮತೆ ಮತ್ತು ಭವಿಷ್ಯದ ಮಾರ್ಗಸೂಚಿಯ ಕುರಿತು ವಿವರವಾದ ವಿವರಣೆಗಳನ್ನು ನೀಡಿದವು. ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ಮತ್ತು ನೀತಿ ಆಯೋಗ ಕೂಡ ಪ್ರಸ್ತುತಿಗಳನ್ನು ನೀಡಿದರು.
ಹೆಚ್ಚುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಆರ್ಥಿಕ ಕಳವಳಗಳು ಹೆಚ್ಚುತ್ತಿರುವ ನಡುವೆ ಈ ಸಭೆ ಮಹತ್ವದ್ದಾಗಿದೆ. ಯುದ್ಧವು ಜಾಗತಿಕ ಕಚ್ಚಾ ತೈಲ ಬೆಲೆಗಳನ್ನು ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಿಸಿದೆ, ಇದು ಭಾರತದಲ್ಲಿ ಹಣದುಬ್ಬರದ ಮೇಲೆ ಒತ್ತಡ ಸೃಷ್ಟಿಸಿದೆ. ಹೀಗಾಗಿ ಇಂಧನ ಬಳಕೆ, ಚಿನ್ನದ ಖರೀದಿ ಮತ್ತು ವಿದೇಶ ಪ್ರಯಾಣವನ್ನು ಕಡಿಮೆ ಮಾಡುವಂತೆ ಪ್ರಧಾನಿ ಇತ್ತೀಚೆಗೆ ಜನರಿಗೆ ಮನವಿ ಮಾಡಿದ್ದರು.
ಬಾಕಿ ಕೆಲಸ ಬೇಗ ಮುಗಿಸಿ
5 ದೇಶಗಳ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಮೋದಿ ಮಂತ್ರಿ ಪರಿಷತ್ ಸಭೆ
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ
ಮಧ್ಯಪ್ರಾಚ್ಯ ಯುದ್ಧದ ಬಗ್ಗೆ ಸುದೀರ್ಘ 4 ತಾಸುಗಳ ಕಾಲ ಸಮಾಲೋಚನೆ
ಯುದ್ಧದಿಂದ ದೇಶದ ಮೇಲೆ ಅದ ಪರಿಣಾಮ, ತಡೆಗೆ ಕೈಗೊಂಡ ಕ್ರಮ ಚರ್ಚೆ
ಇಂಧನ, ಕೃಷಿ, ರಸಗೊಬ್ಬರ, ವಿಮಾನ, ಸಾಗಣೆ ಕ್ಷೇತ್ರದ ಬಗ್ಗೆ ಪರಿಶೀಲನೆ
ಜನರಿಗೆ ಯುದ್ಧ ಪರಿಣಾಮ ಆಗದಂತೆ ಕ್ರಮ ವಹಿಸಲು ಸಚಿವರಿಗೆ ಸೂಚನೆ
2047ರ ವಿಕಸಿತ ಭಾರತ ನಿರ್ಮಾಣಕ್ಕೆ ಬಾಕಿ ಉಳಿದ ಕೆಲಸ ಪೂರ್ಣಕ್ಕೆ ಸಲಹೆ


