ಸಾರಾಂಶ
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಆ ಸ್ಥಾನದಲ್ಲಿ ಮುಂದುವರಿಸಬಾರದು ಎಂದು ಪಣತೊಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನೆರವು ಪಡೆಯಲು ಮುಂದಾಗಿದ್ದಾರೆ.
ಯತ್ನಾಳ ಅವರ ಬಣದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿರುವ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮೊದಲಿನಿಂದಲೂ ದೇವೇಂದ್ರ ಫಡ್ನವೀಸ್ ಅವರ ಜತೆ ನಂಟಿದೆ. ಹಿಂದೆ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸುವ ವೇಳೆಯೂ ಫಡ್ನವೀಸ್ ಅವರ ನಂಟು ಕೆಲಸ ಮಾಡಿತ್ತು. ಈಗಲೂ ಅವರ ಮೂಲಕವೇ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವನ್ನು ಯತ್ನಾಳ ಬಣ ಮಾಡುತ್ತಿದೆ ಎನ್ನಲಾಗಿದೆ. ಆದರೆ, ಫಡ್ನವೀಸ್ ಅವರ ಸಂಪರ್ಕ ಈ ವಿಷಯದಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಮಾತ್ರ ಖಚಿತವಿಲ್ಲ.
ಯತ್ನಾಳ ಮತ್ತು ಜಾರಕಿಹೊಳಿ ಅವರು ಮೊದಲಿನಿಂದಲೂ ವಿಜಯೇಂದ್ರ ವಿರುದ್ಧ ಕಿಡಿ ಕಾರುತ್ತಲೇ ಬಂದಿದ್ದಾರೆ. ಅವರೊಂದಿಗೆ ಈಗ ಇನ್ನೂ ಕೆಲವು ನಾಯಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಎಲ್ಲರ ಗುರಿ ಈಗ ವಿಜಯೇಂದ್ರ ಅವರನ್ನು ಮತ್ತೊಮ್ಮೆ ರಾಜ್ಯಾಧ್ಯಕ್ಷರನ್ನಾಗಿ ಮಾಡಬಾರದು ಎಂಬುದೇ ಆಗಿದೆ. ಪಕ್ಷದ ವರಿಷ್ಠರು ವಿಜಯೇಂದ್ರ ಅವರನ್ನೇ ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಇರುವುದರಿಂದ ಯತ್ನಾಳ ಬಣದ ಮುಖಂಡರು ತಮ್ಮ ಪ್ರಯತ್ನವನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಿದ್ದಾರೆ.