ಸಂಗಮ ನೀರು ಕಲುಷಿತವಲ್ಲ, ಆಚಮನಕ್ಕೆ ಯೋಗ್ಯ : ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

| N/A | Published : Feb 20 2025, 12:47 AM IST / Updated: Feb 20 2025, 05:46 AM IST

ಸಾರಾಂಶ

ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ನ ಹಲವು ಸ್ಥಳಗಳ ನದಿಗಳಲ್ಲಿ ಮಲದ ಬ್ಯಾಕ್ಟೀರಿಯಾ ಅಧಿಕ ಮಟ್ಟದಲ್ಲಿ ಇರುವ ವರದಿಯನ್ನು ತಳ್ಳಿಹಾಕಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ‘ಸಂಗಮದ ನೀರು ಸ್ನಾನ ಹಾಗೂ ಆಚಮನಕ್ಕೆ ಯೋಗ್ಯ’ ಎಂದಿದ್ದಾರೆ.

ಲಖನೌ: ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ನ ಹಲವು ಸ್ಥಳಗಳ ನದಿಗಳಲ್ಲಿ ಮಲದ ಬ್ಯಾಕ್ಟೀರಿಯಾ ಅಧಿಕ ಮಟ್ಟದಲ್ಲಿ ಇರುವ ವರದಿಯನ್ನು ತಳ್ಳಿಹಾಕಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ‘ಸಂಗಮದ ನೀರು ಸ್ನಾನ ಹಾಗೂ ಆಚಮನಕ್ಕೆ ಯೋಗ್ಯ’ ಎಂದಿದ್ದಾರೆ.

‘ನದಿಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಕಾಲಿಫಾರ್ಮ್ ಅಧಿಕ ಪ್ರಮಾಣದಲ್ಲಿದ್ದು, ಸಂಸ್ಕರಿಸದ ಚರಂಡಿ ನೀರನ್ನು ಗಂಗಾ ಹಾಗೂ ಯಮುನಾ ನದಿಗಳಿಗೆ ಬಿಡಲಾಗುತ್ತಿದೆ’ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ಸಲ್ಲಿಸಿತ್ತು. ಅದರಲ್ಲಿ, ಜ.12 ಹಾಗೂ 13ರಂದು ಪರೀಕ್ಷೆಗೊಳಪಡಿಸಲಾದ ನೀರಿನ ಮಾದರಿಯು ಸ್ನಾನಕ್ಕೂ ಯೋಗ್ಯವಲ್ಲ ಎಂದು ತಿಳಿಸಲಾಗಿತ್ತು.

ವಿಧಾನಸಭೆಯಲ್ಲಿ ಬುಧವಾರ ಮಾತನಾಡಿ ಇದನ್ನು ತಿರಸ್ಕರಿಸಿದ ಯೋಗಿ, ‘ಪ್ರಯಾಗರಾಜ್‌ನಲ್ಲಿ ಈಗಾಗಲೇ 56.25 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ನಾವು ಸನಾತನ ಧರ್ಮ, ಗಂಗಾ ಮಾತೆ, ಭಾರತ ಅಥವಾ ಮಹಾ ಕುಂಭದ ವಿರುದ್ಧ ಯಾವುದೇ ಆಧಾರರಹಿತ ಆರೋಪಗಳನ್ನು ಮಾಡಿದಾಗ ಅಥವಾ ನಕಲಿ ವೀಡಿಯೊಗಳನ್ನು ತೋರಿಸಿದಾಗ, ಅದು ಈ 56 ಕೋಟಿ ಜನರ ನಂಬಿಕೆಯೊಂದಿಗೆ ಆಟವಾಡಿದಂತಾಗುತ್ತದೆ. ನದಿಗೆ ಮಲ ಸೇರದಂತೆ ಸಾಕಷ್ಟು ಕ್ರಮ ಜರುಗಿಸಲಾಗಿದೆ’ ಎಂದರು.

ಇದೇ ವೇಳೆ ಮೃತ್ಯುಕುಂಭ ಎಂಬ ಮಮತಾ ಹೇಳಿಕೆ ಖಂಡಿಸಿದ ಅವರು, ‘ಸನಾತನ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಪರಾಧವಾಗಿದ್ದರೆ, ನಮ್ಮ ಸರ್ಕಾರ ಆ ಅಪರಾಧವನ್ನು ಮಾಡುತ್ತಲೇ ಇರುತ್ತದೆ’ ಎಂದು ಕಿಡಿಕಾರಿದರು.

ಫೆ.26ರಂದು ಮುಕ್ತಾಯಗೊಳ್ಳಲಿರುವ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಆಗಮಿಸಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.

ಅಧಿಕ ಟಿಕೆಟ್‌ ವಿತರಿಸಿದ್ದೇಕೆ?: ರೈಲ್ವೆಗೆ ಹೈಕೋರ್ಟ್‌ ಕ್ಲಾಸ್‌

ನವದೆಹಲಿ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಲು ಜನ ಸಾಗರೋಪಾದಿಯಲ್ಲಿ ನೆರೆದಿದ್ದ ವೇಳೆ ದೆಹಲಿ ರೈಲು ನಿಲ್ದಾಣದಲ್ಲಿ 18 ಜನರನ್ನು ಬಲಿಪಡೆದ ಭೀಕರ ಕಾಲ್ತುಳಿತದ ಸಂಬಂಧ ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈ ಕೋರ್ಟ್‌, ಕಾಲ್ತುಳಿತಕ್ಕೆ ಪ್ರಮುಖ ಕಾರಣ ಎನ್ನಲಾಗಿರುವ ಅಧಿಕ ಟಿಕೆಟ್‌ ವಿತರಿಣೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದೆ.

‘ಇಂತಹ ಅಹಿತಕರ ಘಟನೆಗಳನ್ನು ತಡೆಯಲು ಕ್ರಮಗಳು ಹಾಗೂ ಪ್ರತಿ ಕೋಚ್‌ನಲ್ಲಿ ಎಷ್ಟು ಜನರಿರಬಹುದೆಂದು ನಿಗದಿಪಡಿಸಬೇಕು. ಅದರ ಉಲ್ಲಂಘನೆಯಾದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸುವ ರೈಲ್ವೆ ಕಾಯ್ದೆ ಸೆಕ್ಷನ್‌ ಅನ್ನು ಜಾರಿಗೆ ತರಬೇಕು’ ಎಂದು ಸಲ್ಲಿಕೆ ಆಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾ। ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾ। ತುಷಾರ್‌ ರಾವ್‌ ಅವರ ವಿಭಾಗೀಯ ಪೀಠ ಬುಧವಾರ ಕೈಗೆತ್ತಿಕೊಂಡಿತು.ಈ ವೇಳೆ ಕೇಂದ್ರ ಹಾಗೂ ರೈಲ್ವೆ ಇಲಾಖೆಯ ಮೇಲೆ ಹರಿಹಾಯ್ದ ಅವರು, ‘ರೈಲಿನಲ್ಲಿ ಹಿಡಿಸದಷ್ಟು ಪ್ರಯಾಣಿಕರಿಗೆ ಟಿಕೆಟ್‌ ವಿತರಿಸಿದ್ದು ಏಕೆ?’ ಎಂದು ಪ್ರಶ್ನಿಸಿದರು. ಜೊತೆಗೆ, ಕೋಚ್‌ನಲ್ಲಿ ಇರಬಹುದಾದ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಿದ ಕಾನೂನು ಜಾರಿಗೆ ಕ್ರಮ ತೆಗೆದುಕೊಂಡ ಬಗ್ಗೆ ಹಾಗೂ ಅದನ್ನು ಉಲ್ಲಂಘಿಸಿದವರಿಗೆ ವಿಧಿಸಲಾಗುವ ದಂಡದ ಬಗ್ಗೆ ವಿಚಾರಿಸಿದರು.

ಅಂತೆಯೇ, ‘ರೈಲ್ವೆ ಆಡಳಿತವು ಒಂದು ಬೋಗಿಯಲ್ಲಿ ಇರಬಹುದಾದಂತಹ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಿ ಅದನ್ನು ಕೋಚ್‌ಗಳ ಹೊರಗೆ ಪ್ರದರ್ಶಿಸಬೇಕು. ಈ ಸರಳವಾದ ನಿಯಮವನ್ನು ಸರಿಯಾಗಿ ಜಾರಿಗೊಳಿಸಿದರೆ ಕಾಲ್ತುಳಿತದಂತಹ ಘಟನೆಗಳನ್ನು ತಡೆಯಬಹುದು’ ಎಂದು ಸೂಚಿಸಿದರು. ಈ ಕುರಿತ ಮುಂದಿನ ವಿಚಾರಣೆಯನ್ನು ಮಾ.26ರಂದು ನಡೆಸುವುದಾಗಿ ಪೀಠ ತಿಳಿಸಿದರು.

ಮಹಾಕುಂಭದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ: ಅವಿಮುಕ್ತೇಶ್ವರಾನಂದ ಟೀಕೆ

ಪ್ರಯಾಗರಾಜ್‌: ಮಹಾಕುಂಭಮೇಳವನ್ನು ಮೃತ್ಯುಕುಂಭ ಎಂದು ಕರೆದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಉತ್ತರಾಖಂಡದ ಜ್ಯೋತಿಷ್‌ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಗಳು ಬೆಂಬಲ ಸೂಚಿಸಿದ್ದು, ಕುಂಭಮೇಳಕ್ಕೆ ಸರಿಯಾದ ಯೋಜನೆ ತಯಾರಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಿರಲಿಲ್ಲ ಎಂದು ಟೀಕಿಸಿದ್ದಾರೆ.‘300 ಕಿ.ಮೀ. ಸಂಚಾರ ದಟ್ಟಣೆಯಿದ್ದು, ಜನ ತಮ್ಮ ಸಾಮಾನುಗಳನ್ನೆತ್ತಿಕೊಂಡು 25ರಿಂದ 30 ಕಿ.ಮೀ. ಕಾಲ್ನಡಿಯಲ್ಲೇ ಕ್ರಮಿಸಬೇಕಾಯಿತು. ಇದು ಅವ್ಯವಸ್ಥೆಯಲ್ಲದೆ ಇನ್ನೇನು? ಸ್ನಾನಕ್ಕೆ ಪೂರೈಸಲಾಗುತ್ತಿದ್ದ ನೀರಿಗೆ ಚರಂಡಿ ನೀರು ಬೆರಕೆಯಾಗುತ್ತಿತ್ತು. ಇದು ಮೀಯಲು ಯೋಗ್ಯವಲ್ಲ ಎಂದು ವಿಜ್ಞಾನಿಗಳೇ ಹೇಳಿದರೂ ಭಕ್ತರು ಅದರಲ್ಲೇ ಸ್ನಾನ ಮಾಡುವಂತೆ ಮಾಡಲಾಯಿತು’ ಎಂದು ಸ್ವಾಮಿಗಳು ಕಿಡಿ ಕಾರಿದ್ದಾರೆ.

ಜೊತೆಗೆ, ‘12 ವರ್ಷ ಹಿಂದೆಯೇ ಮಹಾಕುಂಭ ನಡೆಯಲಿದೆ ಎಂದು ತಿಳಿದಿದ್ದರೂ ಸರಿಯಾದ ವ್ಯವಸ್ಥೆಗಳನ್ನು ಏಕೆ ಮಾಡಿಕೊಳ್ಳಲಿಲ್ಲ? ಜನಸಂದಣಿ ನಿರ್ವಹಣೆ ಹಾಗೂ ಆತಿಥ್ಯ ವ್ಯವಸ್ಥೆಗಳು ಸರಿಯಿರಲಿಲ್ಲ. ಜನರು ಸತ್ತಾಗಲೂ ಅದನ್ನು ಮುಚ್ಚಿಟ್ಟು ಮಹಾಪಾಪ ಮಾಡಿದರು’ ಎಂದು ಆರೋಪಿಸಿದರು.

ಕೈದಿಗಳಿಗೂ ಪುಣ್ಯಸ್ನಾನ ಅವಕಾಶ!

ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಪವಿತ್ರ ಜಲದಲ್ಲಿ ಪುಣ್ಯಸ್ನಾನ ಮಾಡಲು ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜೈಲುಗಳಲ್ಲಿರುವ ಕೈದಿಗಳಿಗೂ ಅವಕಾಶ ಕಲ್ಪಿಸಿದೆ.

ರಾಜ್ಯದ ಒಟ್ಟು 75 ಜೈಲುಗಳಲ್ಲಿರುವ 90 ಸಾವಿರ ಕೈದಿಗಳಿಗೆ ತ್ರಿವೇಣಿ ಸಂಗಮದ ನೀರು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಫೆ.21ರಂದು ಬೆಳಿಗ್ಗೆ 9:30ರಿಂದ 10:30ರ ತನಕ ಈ ವ್ಯವಸ್ಥೆ ಇರಲಿದೆ ಎಂದು ಉತ್ತರ ಪ್ರದೇಶ ಜೈಲು ಇಲಾಖೆ ಮಾಹಿತಿ ನೀಡಿದೆ.