ಹರ್ಯಾಣದಲ್ಲಿ ಕಟ್ಟಡ ಕಾಮಗಾರಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವ ಇಸ್ರೇಲ್‌ ಸಂಸ್ಥೆಗಳು, 6 ದಿನಗಳ ಕಾಲ ನಡೆಯಲಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಲು ದೇಶಾದ್ಯಂತ ಯುಜನರು ಆಗಮಿಸುತ್ತಿದ್ದಾರೆ. ಆಕರ್ಷಕ ಸಂಬಳದಿಂದ ಪ್ರಭಾವಿತರಾಗುತ್ತಿರುವ ಭಾರತೀಯರು ಅಲ್ಲಿಗೆ ದಾಂಗುಡಿ ಇಡುತ್ತಿದ್ದಾರೆ.

ರೋಹ್ಟಕ್‌ (ಹರ್ಯಾಣ): ಯುದ್ಧಪೀಡಿತ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಾರ್ಮಿಕರ ಕೊರತೆಯುಂಟಾದ ಪರಿಣಾಮ ಭಾರತದಿಂದ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಬಂದಿರುವ ಇಸ್ರೇಲಿ ಕಂಪನಿಗಳ ಉದ್ಯೋಗ ಮೇಳಕ್ಕೆ ಸಾವಿರಾರು ಯುವಜನರು ಮುಗಿಬಿದ್ದು ಬರುತ್ತಿದ್ದಾರೆ.

ಅಂದಹಾಗೆ ಇಲ್ಲಿ ನೇಮಕವಾದ ಕಟ್ಟಡ ಕಾರ್ಮಿಕರಿಗೆ ಮಾಸಿಕ ಸಂಬಳವಾಗಿ ‘ಆಕರ್ಷಕ’ 1.34 ಲಕ್ಷ ರು.ವರೆಗೆ ಹಣ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 

ಹೀಗಾಗಿ ಭಾರಿ ಸಂಖ್ಯೆಯಲ್ಲಿ ಯುವಕರು ನೇಮಕಾತಿಗೆ ದಾಂಗುಡಿ ಇಡುತ್ತಿದ್ದಾರೆ.ಇಸ್ರೇಲಿ ಸಂಸ್ಥೆಗಳು ಭಾರತದಿಂದ ಹತ್ತು ಸಾವಿರ ಕಾರ್ಮಿಕರಿಗೆ ಉದ್ಯೋಗ ನಿಡುವ ಸಂಬಂಧ ಒಪ್ಪಂದ ಮಾಡಿಕೊಂಡಿದ್ದವು. 

ಈ ಹಿನ್ನೆಲೆಯಲ್ಲಿ ಸೂಕ್ತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಹರ್‍ಯಾಣದ ರೋಹ್ಟಕ್‌ನಲ್ಲಿ ಬುಧವಾರದಿಂದ ಆರು ದಿನಗಳ ಕಾಲ ಉದ್ಯೋಗ ಮೇಳ ನಡೆಸುತ್ತಿದೆ. 

ಹರ್‍ಯಾಣವೂ ಸೇರಿದಂತೆ ಪಕ್ಕದ ಪಂಜಾಬ್‌, ರಾಜಸ್ಥಾನ, ಉತ್ತರಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಯುವಜನರು ಉದ್ಯೋಗ ಪರ್ವದಲ್ಲಿ ಭಾಗಿಯಾಗಿ ತಮ್ಮ ಕುಶಲತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕಾರ್ಮಿಕ ಇಲಾಖಾ ಮೂಲಗಳು, ‘ಕೇಂದ್ರ ಸರ್ಕಾರದೊಂದಿಗೆ ಒಪ್ಪಂದವಾಗಿರುವಂತೆ ಭಾರತದಿಂದ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ, ಪೇಂಟಿಂಗ್‌ ಮತ್ತು ಬೇಸಾಯ ಕೆಲಸಗಳಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ. 

ಇದಕ್ಕಾಗಿ ಭಾರತದಾದ್ಯಂತ ಯುವಜನರು ಇಸ್ರೇಲ್‌ನಲ್ಲಿ ತಲೆದೋರಿರುವ ಯುದ್ಧಪೀಡಿತ ಸನ್ನಿವೇಶವನ್ನೂ ಲೆಕ್ಕಿಸದೆ ಹೆಚ್ಚಿನ ಸಂಬಳದ ಆಕರ್ಷಣೆಯಿಂದ ಉದ್ಯೋಗ ಮೇಳಕ್ಕೆ ಹಾಜರಾಗುತ್ತಿದ್ದಾರೆ.

ಇದೀಗ 10 ಸಾವಿರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಂದವಾಗಿದ್ದರೂ, ಸದ್ಯದಲ್ಲೇ ಅದು 30 ಸಾವಿರಕ್ಕೆ ವಿಸ್ತರಣೆಯಾಗುವ ಸಾಧ್ಯತೆ ಇದೆ. 

ಉದ್ಯೋಗ ನೇಮಕಾತಿಯನ್ನು ಹರ್‍ಯಾಣದ ರೋಹ್ಟಕ್‌ನಲ್ಲಿ ಮಾಡುತ್ತಿರುವುದರಿಂದ ಹರ್‍ಯಾಣ ರಾಜ್ಯದವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ’ ಎಂದು ತಿಳಿಸಿವೆ.