ಸಾರಾಂಶ
ಮಧ್ಯಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕಿ ಉಮಾ ಭಾರತಿಯವರು ಲಂಚ ಸ್ವೀಕರಿಸುವ ವೇಳೆ ಕರ್ನಾಟಕದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಬಂಧಿಸಿದ್ದಾರೆ ಎಂಬ ನಕಲಿ ವಿಡಿಯೋ ಸೃಷ್ಟಿಸಿ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೋಪಾಲ್: ಮಧ್ಯಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕಿ ಉಮಾ ಭಾರತಿಯವರು ಲಂಚ ಸ್ವೀಕರಿಸುವ ವೇಳೆ ಕರ್ನಾಟಕದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಬಂಧಿಸಿದ್ದಾರೆ ಎಂಬ ನಕಲಿ ವಿಡಿಯೋ ಸೃಷ್ಟಿಸಿ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ಉಮಾ ಅವರ ಆಪ್ತ ಸಹಾಯಕ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉಮಾ ಭಾರತಿ ಮತ್ತು ರೂಪಾ ಮೌದ್ಗಿಲ್ ಅವರಿಗೆ ಸಂಬಂಧಿಸಿದಂತೆ ಯುಟ್ಯೂಬ್‌ವೊಂದರಲ್ಲಿ 40 ಸೆಕೆಂಡ್‌ನ ವಿಡಿಯೋವೊಂದು ಅಪ್ಲೋಡ್ ಆಗಿದೆ. ಅದರಲ್ಲಿ ಬಿಜೆಪಿ ನಾಯಕಿ ಉಮಾ ಭಾರತಿ ಅವರು ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದಾಗ ರೂಪಾ ಮೌದ್ಗಿಲ್ ಅವರು ಮಾರುವೇಷದಲ್ಲಿ ಉಮಾ ಭಾರತಿ ಅವರ ಮನೆಗೆ ಹೋಗಿ ಅವರನ್ನು ಬಂಧಿಸಿದ್ದಾರೆಂದು ತೋರಿಸುವ ಮತ್ತು ಆ ಸಂಬಂಧ ಹಿನ್ನೆಲೆ ಧ್ವನಿ ನೀಡಿದ ವಿಡಿಯೋ ಸೃಷ್ಟಿಸಲಾಗಿತ್ತು.
ದಶಕಗಳ ಹಿಂದೆ ಬೇರೊಂದು ಪ್ರಕರಣದಲ್ಲಿ ಉಮಾ ಭಾರತಿ ಅವರನ್ನು ರೂಪಾ ಕರ್ನಾಟಕದಲ್ಲಿ ಬಂಧಿಸಿ ಸುದ್ದಿಯಾಗಿದ್ದರು.