ಸಾರಾಂಶ
ಅಮರಾವತಿ : ಈ ಹಿಂದಿನ ಜಗನ್ಮೋಹನ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಮಾರುಕಟ್ಟೆ ದರಕ್ಕಿಂತ ಕಡಿಮೆ ದುಡ್ಡಿನಲ್ಲಿ ಕಲಬೆರಕೆ ತುಪ್ಪವನ್ನು ಖರೀದಿಸಿ ತಿರುಪತಿ ಲಡ್ಡುಗೆ ಬಳಸುತ್ತಿತ್ತು ಹಾಗೂ ವೆಂಕಟೇಶ್ವರ ದೇಗುಲದ ಪಾವಿತ್ರ್ಯವನ್ನೇ ಹಾಳು ಮಾಡಿತ್ತು. ಆದರೆ ನಾವು ಈ ಪರಿಪಾಠಕ್ಕೆ ಮಂಗಳ ಹಾಡಿ ಕರ್ನಾಟಕದ ಶುದ್ಧ ನಂದಿನಿ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಲು ಕ್ರಮ ಜರುಗಿಸಿದ್ದೇವೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಅಂಶ ಪತ್ತೆಯಾದ ಬಗ್ಗೆ ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜಗನ್ ಸರ್ಕಾರ ಇದ್ದಾಗ ಮಾರುಕಟ್ಟೆಯಲ್ಲಿ 1 ಕೇಜಿ ತುಪ್ಪದ ಬೆಲೆ 500 ರು. ಇತ್ತು. ಆದರೆ ಜಗನ್ ಸರ್ಕಾರ ಕೇಜಿಗೆ 320 ರು.ನಂತೆ ತುಪ್ಪ ಖರೀದಿಸಿತು.
ಕಡಿಮೆ ದರದ ಈ ತುಪ್ಪ ಕಲಬೆರಕೆ ಹಾಗೂ ಕಳಪೆ ಮಟ್ಟದ್ದಾಗಿತ್ತು. ಜನರ ಭಾವನೆಗಳ ಜತೆ ಆಟವಾಡಿದ ಹಾಗೂ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ತಂದ ಇಂಥ ವ್ಯಕ್ತಿಗಳನ್ನು ನಾನು ಸುಮ್ಮನೇ ಬಿಡಬೇಕೇ?’ ಎಂದು ಪ್ರಶ್ನಿಸಿದರು.
ವರದಿಗೆ ಸೂಚನೆ:
ಈ ನಡುವೆ, ಲಡ್ಡು ವಿವಾದದ ಬಗ್ಗೆ ನಾಯ್ಡು ಉನ್ನತ ಮಟ್ಟದ ಸಭೆ ನಡೆಸಿ, ಕಲಬೆರಕೆ ಪ್ರಸಾದದ ಬಗ್ಗೆ ಸಮಗ್ರ ವರದಿ ತಯಾರಿಸಿ ಸಂಜೆಯೊಳಗೆ ಸಲ್ಲಿಸುವಂತೆ ಅವರು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದಾರೆ.