ಆಂಧ್ರಕ್ಕೆ 3 ರಾಜಧಾನಿ: ವೈಎಸ್‌ಆರ್‌ ಕಾಂಗ್ರೆಸ್‌ ಪ್ರಣಾಳಿಕೆ

| Published : Apr 28 2024, 01:19 AM IST / Updated: Apr 28 2024, 05:09 AM IST

ಆಂಧ್ರಕ್ಕೆ 3 ರಾಜಧಾನಿ: ವೈಎಸ್‌ಆರ್‌ ಕಾಂಗ್ರೆಸ್‌ ಪ್ರಣಾಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಮರಾವತಿ, ಕರ್ನೂಲ್‌, ವಿಶಾಖಪಟ್ಟಣಕ್ಕೆ ರಾಜಧಾನಿ ಪಟ್ಟ ನೀಡುವುದಾಗಿ ಜಗನ್‌ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಪಿಂಚಣಿ ₹500, ಅಮ್ಮಾ ವೋಡಿ ಕಂತು ₹2000 ಹೆಚ್ಚಳ ಮಾಡುವ ಕುರಿತು ಸಹ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.

ಅಮರಾವತಿ: ಚುನಾವಣೆಗೆ ಕೇವಲ 20 ದಿನಗಳಿರುವಂತೆ ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ರಾಜ್ಯದ ಆಡಳಿತವನ್ನು ಸುಗಮಗೊಳಿಸುವ ದೃಷ್ಟಿಯಿಂದ ಮೂರು ರಾಜಧಾನಿಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಪ್ರಕಟಿಸಿದೆ. ಜೊತೆಗೆ ಪಿಂಚಣಿಗಳನ್ನು ಹೆಚ್ಚಿಸುವ ಮೂಲಕ ಮಹಿಳೆಯರು ಮತ್ತು ಬಡವರನ್ನು ಒಲಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.

ಪ್ರಸ್ತುತ ರಾಜಧಾನಿಯಾಗಿರುವ ಅಮರಾವತಿಯನ್ನು ಶಾಸಕಾಂಗಕ್ಕೂ, ಬಂದರು ನಗರಿ ವಿಶಾಖಪಟ್ಟಣವನ್ನು ಕಾರ್ಯಾಂಗಕ್ಕೂ, ರಾಜ್ಯದ ಮತ್ತೊಂದು ಬದಿಯಲ್ಲಿರುವ ಕರ್ನೂಲ್‌ ನಗರವನ್ನೂ ನ್ಯಾಯಾಂಗಕ್ಕೆ ರಾಜಧಾನಿಯನ್ನಾಗಿ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.

ಹಾಗೆಯೇ ಪ್ರಸ್ತುತ 3 ಸಾವಿರ ರು. ಇರುವ ಕಲ್ಯಾಣ ಯೋಜನೆ ಪಿಂಚಣಿಯನ್ನು 2028ರ ಜನವರಿಯಿಂದ 3,250ಕ್ಕೂ, 2029ರ ಜನವರಿಯಿಂದ 3,500ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ. ಜೊತೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಮಹಿಳೆಯರಿಗೆ ನೀಡುವ ‘ಅಮ್ಮಾ ವೋಡಿ’ ಪ್ರೋತ್ಸಾಹ ಧನವನ್ನು 2 ಸಾವಿರ ರು. ಹೆಚ್ಚಿಸಿ ವಾರ್ಷಿಕ 17 ಸಾವಿರ ರು. ನೀಡಲಾಗುವುದು ಎಂದು ಭರ್ಜರಿ ಕೊಡುಗೆ ಘೋಷಿಸಿದೆ.

ಪ್ರಸ್ತುತ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುವ ಜೊತೆಗೆ ವಿಶಾಖಪಟ್ಟಣವನ್ನು ಕೈಗಾರಿಕಾ ಹಬ್‌ ಮಾಡಿ ರಾಜ್ಯಕ್ಕೆ ಆದಾಯ ತಂದುಕೊಡಬಲ್ಲ ನಗರವನ್ನಾಗಿ ಪರಿವರ್ತಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ಮೇ 13ರಂದು ನಡೆಯಲಿವೆ.