ಸಾರಾಂಶ
ಟಿಯಾನ್‌ಜಿನ್ (ಚೀನಾ) : ಉಕ್ರೇನ್-ರಷ್ಯಾ ನಡುವಿನ ಯುದ್ಧ ನಿಲ್ಲಿಸುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉಕ್ರೇನಿ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿಗೆ ಭರವಸೆ ನೀಡಿದ್ದಾರೆ.
ಭಾನುವಾರ ಚೀನಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ. ಇದಕ್ಕೂ ಮುಂಚೆ ಇಬ್ಬರ ಫೋನ್ ಸಂಭಾಷಣೆ ನಡೆದಿದೆ. ಇದು ಇತ್ತೀಚಿನ ದಿನದಲ್ಲಿ ಉಭಯ ನಾಯಕರ 2ನೇ ಫೋನ್ ಮಾತುಕತೆ.
‘ಜೆಲೆನ್ಸ್ಕಿಅವರೇ ಫೋನ್ ಮಾಡಿದ್ದರು. ಉಕ್ರೇನ್‌ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಕುರಿತು ತಮ್ಮ ದೃಷ್ಟಿಕೋನ ಹಂಚಿಕೊಂಡರು. ಇದಕ್ಕೆ ಉತ್ತರಿಸಿದ ಮೋದಿ ಸಂಘರ್ಷದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತದ ದೃಢ ಮತ್ತು ಸ್ಥಿರವಾದ ನಿಲುವನ್ನು ಪುನರುಚ್ಚರಿಸಿದರು’ ಎಂದು ಭಾರತ ಸರ್ಕಾರ ಹೇಳಿದೆ.
‘ಉಭಯ ನಾಯಕರು ಭಾರತ-ಉಕ್ರೇನ್ ದ್ವಿಪಕ್ಷೀಯ ಪಾಲುದಾರಿಕೆಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಪರಸ್ಪರ ಆಸಕ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು’ ಎಂದು ಅದು ಹೇಳಿದೆ.
ಉಕ್ರೇನ್ ಸಮರಕ್ಕೆ ಮೋದಿ ಕಾರಣವಲ್ಲ: ಅಮೆರಿಕ ಯೆಹೂದಿ ಸಮಿತಿ
ನ್ಯೂಯಾರ್ಕ್ : ಉಕ್ರೇನ್-ರಷ್ಯಾ ಯುದ್ಧಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಪೀಟರ್ ನವರೊ ನೀಡಿದ ಹೇಳಿಕೆಯನ್ನು ಅಮೆರಿಕದ ಯಹೂದಿ ಸಮಿತಿ ಖಂಡಿಸಿದೆ. ‘ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ನವದೆಹಲಿ ಜವಾಬ್ದಾರಿಯಲ್ಲ. ಅಮೆರಿಕ-ಭಾರತ ಸಂಬಂಧ ಮರುಸ್ಥಾಪನೆ ಅಗತ್ಯ’ ಎಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಮಿತಿ, ‘ಇಂಧನ ಹಸಿವಿನಿಂದ ಬಳಲುತ್ತಿರುವ ಭಾರತವು ರಷ್ಯಾದ ತೈಲವನ್ನು ಅವಲಂಬಿಸಿರುವುದಕ್ಕೆ ನಾವು ವಿಷಾದಿಸುತ್ತೇವೆ. ಹಾಗಂತ ಪುಟಿನ್ ಅವರ ಯುದ್ಧ ಅಪರಾಧಗಳಿಗೆ ಭಾರತ ಹೊಣೆ ಅಲ್ಲ’ ಎಂದಿದೆ.ಇದೇ ವೇಳೆ, ‘ಭಾರತದ ಮೇಲೆ ಅಮೆರಿಕ ಅಧಿಕಾರಿಗಳು ಮಾಡಿರುವ ಟೀಕೆ ಆಘಾತ ತಂದಿದೆ. ಭಾರತವು ಅಮೆರಿಕದ ಅಮೂಲ್ಯ ಪಾಲುದಾರ ದೇಶ ಇದು ಈ ಮಹತ್ವದ ಸಂಬಂಧವನ್ನು ಮರುಹೊಂದಿಸುವ ಸಮಯ’ ಎಂದೂ ಹೇಳಿದೆ.