ಸಾರಾಂಶ
ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಗೆರು ಇಷಿಬಾ ಅವರು ಶನಿವಾರ ಜಪಾನ್ ರಾಜಧಾನಿ ಟೋಕಿಯೋದಿಂದ 300 ಕಿ.ಮೀ. ದೂರದಲ್ಲಿರುವ ಸೆಂಡೈವರೆಗೆ ಬುಲೆಟ್ ರೈಲಿನ ಮೂಲಕ ಪ್ರಯಾಣ ಮಾಡಿದರು.
ಈ ಬಳಿಕ ಜಪಾನ್‌ನಲ್ಲಿ ಬುಲೆಟ್ ರೈಲಿನ ತರಬೇತಿ ಪಡೆಯುತ್ತಿರುವ ಭಾರತೀಯ ಚಾಲಕರ ಜತೆ ಮೋದಿ ಅವರು ಮಾತುಕತೆ ನಡೆಸಿದರು. ಇದೇ ವೇಳೆ ಆಲ್ಫಾ-ಎಕ್ಸ್ ಮಾದರಿಯ ಬುಲೆಟ್ ರೈಲನ್ನು ವೀಕ್ಷಿಸಿದರು. ಬಳಿಕ ತಮ್ಮ ಅನುಭವವನ್ನು ಉಭಯ ನಾಯಕರು ಎಕ್ಸ್ ಮೂಲಕ ಹಂಚಿಕೊಂಡು ಸಂತಸ ಹೊರಹಾಕಿದರು.
ಭಾರತದಲ್ಲಿ ಜಪಾನ್ ಸಹಯೋಗದಲ್ಲಿ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಮಾರ್ಗ ನಿರ್ಮಾಣ ಆಗುತ್ತಿದ್ದು, ಈ ನಿಮಿತ್ತ ಭಾರತದ ಚಾಲಕರು ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಜಪಾನ್‌ನ ಸೆಂಡೈ ಸೆಮಿಕಂಡಕ್ಟರ್ ಘಟಕಕ್ಕೆ ಮೋದಿ ಭೇಟಿ
ಟೋಕಿಯೋ : ತಂತ್ರಜ್ಞಾನ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಪರಸ್ಪರ ಸಹಕಾರ ಹೆಚ್ಚಿಸಲು ಉಭಯ ದೇಶಗಳ ಪ್ರಧಾನಮಂತ್ರಿಗಳು ಶುಕ್ರವಾರ ನಿರ್ಧರಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಜಪಾನ್‌ನ ಮಿಯಾಗಿ ಪ್ರಾಂತ್ಯದ ಸೆಂಡೈನಲ್ಲಿರುವ ಟೋಕಿಯೋ ಎಲೆಕ್ಟ್ರಾನ್ ಮಿಯಾಗಿ ಲಿಮಿಟೆಡ್ ಸೆಮಿಕಂಡಕ್ಟರ್ ಘಟಕಕ್ಕೆ ಭೇಟಿ ನೀಡಿದರು.
ಜಪಾನ್ ಪ್ರಧಾನಿ ಶಿಗೆರು ಇಶಿಬಾ ಅವರೊಂದಿಗೆ ರಾಜಧಾನಿ ಟೋಕಿಯೊದಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಸೆಂಡೈಗೆ ಬುಲೆಟ್ ರೈಲಿನಲ್ಲಿ ಮೋದಿ ಪ್ರಯಾಣಿಸಿದರು. ಉಭಯ ನಾಯಕರ ಈ ಭೇಟಿಯು ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸೆಮಿಕಂಡಕ್ಟರ್ ತಯಾರಿಕೆಗೆ ಇನ್ನಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ.‘ಈ ಭೇಟಿಗಾಗಿ ಪ್ರಧಾನಿ ಮೋದಿಯವರು ಇಶಿಬಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಜಪಾನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಸಿದ್ಧವಾಗಿರುವುದಾಗಿ ಪುನರುಚ್ಚರಿಸಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತ-ಜಪಾನ್ ಪಾಲುದಾರಿಕೆ ಸಹಕಾರಕ್ಕೆ ಮೋದಿ ಕರೆ
ಟೋಕಿಯೋ : ಶನಿವಾರ ಜಪಾನ್ ಪ್ರವಾಸ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಜಪಾನ್‌ನ 16 ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾಗಿ, ಭಾರತ-ಜಪಾನ್ ಪಾಲುದಾರಿಕೆಯನ್ನು ಬಲಪಡಿಸಲು ಹೆಚ್ಚಿನ ಸಹಕಾರ ನೀಡುವಂತೆ ಕರೆ ನೀಡಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ, ‘ಇಂದು ಟೋಕಿಯೊದಲ್ಲಿ, ಜಪಾನ್‌ನ 16 ಪ್ರಾಂತ್ಯಗಳ ರಾಜ್ಯಪಾಲರೊಡನೆ ಮಾತುಕತೆ ನಡೆಸಿದೆ. ಭಾರತ-ಜಪಾನ್ ಸ್ನೇಹದ ಪ್ರಮುಖ ಆಧಾರಸ್ತಂಭವೆಂದರೆ ರಾಜ್ಯ-ಪ್ರಾಂತ್ಯ ಸಹಕಾರ. ವ್ಯಾಪಾರ, ನಾವೀನ್ಯತೆ, ಉದ್ಯಮಶೀಲತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ನೀಡಲು ವಿಶಾಲ ವ್ಯಾಪ್ತಿಯಿದೆ. ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಮತ್ತು ಎಐನಂತಹ ಭವಿಷ್ಯದ ವಲಯಗಳು ಸಹ ಪ್ರಯೋಜನಕಾರಿಯಾಗಬಹುದು’ ಎಂದಿದ್ದಾರೆ.