ಟ್ರಂಪ್‌- ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಜೆಲೆನ್ಸ್ಕಿ‘ಶಾಂತಿ ಸಂಧಾನ’ ಸಭೆ ವಿಫಲ

| N/A | Published : Mar 02 2025, 01:19 AM IST / Updated: Mar 02 2025, 06:04 AM IST

ಸಾರಾಂಶ

  ಜೆಲೆನ್ಸ್ಕಿಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಶುಕ್ರವಾರ ಶ್ವೇತಭವನದಲ್ಲಿ ರಷ್ಯಾ-ಉಕ್ರೇನ್‌ ಸಮರಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆ ವಿಫಲವಾಗಿದೆ.  

ವಾಷಿಂಗ್ಟನ್‌: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಶುಕ್ರವಾರ ಶ್ವೇತಭವನದಲ್ಲಿ ರಷ್ಯಾ-ಉಕ್ರೇನ್‌ ಸಮರಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆ ವಿಫಲವಾಗಿದೆ. ‘ತಕ್ಷಣದ ಕದನ ವಿರಾಮ ಬಯಸುವೆ’ ಎಂಬ ಟ್ರಂಪ್ ಬೇಡಿಕೆಯನ್ನು ಜೆಲೆನ್ಸ್ಕಿ ತಿರಸ್ಕರಿಸಿದ್ದು, ಯುದ್ಧ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಶ್ವೇತಭವನದಲ್ಲಿ ಇಬ್ಬರ ನಡುವೆಯೂ ಯುದ್ಧಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಜೋರು ಜಗಳ ನಡೆದಿತ್ತು. ಬಳಿಕ ಮಾತನಾಡಿದ ಟ್ರಂಪ್‌, ‘ರಷ್ಯಾ ಮತ್ತು ಉಕ್ರೇನ್ ನಡುವೆ ತಕ್ಷಣದ ಕದನ ವಿರಾಮ ಘೋಷಣೆ ಆಗಬೇಕು ಎಂಬದು ನನ್ನ ಬಯಕೆ. ಒಂದೋ ಶಾಂತಿ ಸ್ಥಾಪಿಸಬೇಕು. ಇಲ್ಲದಿದ್ದರೆ ಅವರು (ಉಕ್ರೇನ್‌) ಅಮೆರಿಕದ ಬೆಂಬಲವನ್ನು ಕಳೆದುಕೊಳ್ಳುತ್ತಾರೆ’ ಎಂದರು.

ಆದರೆ ಇದೇ ವೇಳೆ, ‘ಅವರು (ಜೆಲೆನ್ಸ್ಕಿ) ಶಾಂತಿ ಸ್ಥಾಪಿಸಲು ಬಯಸಿದ ವ್ಯಕ್ತಿ ಅಲ್ಲ’ ಎಂದೂ ಹೇಳಿದ ಟ್ರಂಪ್‌, ’ಆದರೆ 3 ವರ್ಷಗಳ ಹಿಂದೆ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಾಂತಿ ಒಪ್ಪಂದಕ್ಕೆ ಸಿದ್ಧರಾಗಿದ್ದಾರೆ ಎಂದು ನಾನು ನಂಬುತ್ತೇನೆ’ ಎಂದರು.

ಯುದ್ಧ ನಿಲ್ಲಿಸಲ್ಲ- ಜೆಲೆನ್ಸ್ಕಿ:

ಆದರೆ ಟ್ರಂಪ್‌ ಆಗ್ರಹಕ್ಕೆ ಮಾತುಕತೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ ತಿರುಗೇಟು ನೀಡಿದ ಜೆಲೆನ್ಸ್ಕಿ, ‘ಉಕ್ರೇನ್ ವಿರುದ್ಧ ಮತ್ತೆ ದಾಳಿ ಮಾಡುವುದಿಲ್ಲ ಎಂದು ರಷ್ಯಾ ಭದ್ರತಾ ಖಾತರಿ ನೀಡಬೇಕು. ಅಲ್ಲಿಯವರೆಗೆ ರಷ್ಯಾ ಜತೆ ಶಾಂತಿ ಮಾತುಕತೆ ನಡೆಸುವುದಿಲ್ಲ’ ಎಂದರು.‘ಪುಟಿನ್ ಯುದ್ಧವನ್ನು ಕೊನೆಗೊಳಿಸಲು ಸಿದ್ಧರಾಗಿದ್ದಾರೆ ಎಂದು ಟ್ರಂಪ್‌ ಹೇಳುತ್ತಿದ್ದಾರೆ. ಆದರೆ ರಷ್ಯಾದ ಬಗೆಗಿನ ಉಕ್ರೇನ್ ಮನೋಭಾವವನ್ನು ಒಂದು ಪೈಸೆಯಷ್ಟೂ ಬದಲಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಜೆಲೆನ್ಸ್ಕಿ ಹೇಳಿದರು.

ಟ್ರಂಪ್ ಜತೆಗಿನ ಜಟಾಪಟಿ ಬಗ್ಗೆ ಮಾತನಾಡಿದ ಅವರು, ‘ಈ ಜಗಳ ಎರಡೂ ಕಡೆಯವರಿಗೆ ಒಳ್ಳೆಯದಲ್ಲ’ ಎಂದರು.

ಮೊನ್ನೆಯ ಸಭೆಯಲ್ಲಿ ಟ್ರಂಪ್‌-ಜೆಲೆನ್ಸ್ಕಿ ಜಗಳ!

ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧ ತೀವ್ರಗೊಂಡಿರುವ ನಡುವೆಯೇ ಶ್ವೇತ​ಭ​ವ​ನಕ್ಕೆ ಶುಕ್ರ​ವಾರ ಬಂದಿದ್ದ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವ​ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರಾ​ನೇರ ತರಾ​ಟೆಗೆ ತೆಗೆ​ದು​ಕೊಂಡಿದ್ದರು. ‘ಯುದ್ಧ ತಣಿ​ಸಲು ಉಕ್ರೇನ್‌ ರಾಜಿ ಮಾಡಿ​ಕೊ​ಳ್ಳ​ಬೇಕು ಇಲ್ಲದಿದ್ದರೆ ನಮ್ಮ ಸಂಬಂಧ ಮುರಿದು ಬೀಳುತ್ತದೆ. ಸಮರ ನಿಲ್ಲಿ​ಸದೇ 3ನೇ ವಿಶ್ವ ಯುದ್ಧದ ಜತೆ ಚೆಲ್ಲಾಟ ಆಡು​ತ್ತಿ​ದ್ದೀ​ರಾ’’ ಎಂದು ಟ್ರಂಪ್‌ ಕೂಗಾ​ಡಿ​ದ್ದರು.

ಅಲ್ಲದೆ, ‘ನಿ​ಮಗೆ ಇಷ್ಟುಸಹಾಯ ಮಾಡಿದ ದೇಶಕ್ಕೆ ಕೃತ​ಜ್ಞತೆ ಸಲ್ಲಿ​ಸದೇ ಕೃತ​ಘ್ನ​ರಾ​ಗಿ​ದ್ದೀ​ರಿ’ ಎಂದು ಚಾಟಿ ಬೀಸಿ​ದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಜೆಲೆನ್‌ಸ್ಕಿ, ‘ಕದನವಿರಾಮ ಉಲ್ಲಂಘಿಸಿದ್ದೇ ಪುಟಿನ್‌. ಆತ ಒಬ್ಬ ಉಗ್ರ. ವಿನಾಕಾರಣ ನಮ್ಮ ಮೇಲೆ ಕೂಗಾಟ ಸರಿಯಲ್ಲ. ನಿಮಗೆ ಕೃತಜ್ಞರಾಗಿದ್ದೇವೆ’ ಎಂದಿದ್ದರು.

ಟ್ರಂಪ್‌ಗೆ ಸಡ್ಡು ಹೊಡೆದ ಜೆಲೆನ್ಸ್ಕಿಸಿಂಹ: ಉಕ್ರೇನಿಗರ ಪ್ರಶಂಸೆ

ಕೀವ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಉಕ್ರೇನ್‌-ರಷ್ಯಾ ಯುದ್ಧಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬೈದರೂ, ಧೃತಿಗೆಡದೇ ತಿರುಗೇಟು ನೀಡಿದ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ ಅವರನ್ನು ಉಕ್ರೇನಿ ಜನರು ‘ಸಿಂಹ’ ಎಂದು ಹಾಡಿ ಹೊಗಳಿದ್ದಾರೆ.‘ಜೆಲೆನ್ಸ್ಕಿ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯ ಟೀಕೆಯ ನಡುವೆಯೂ ತಮ್ಮ ನಿಲುವನ್ನು ದೃಢವಾಗಿ ಕಾಯ್ದುಕೊಂಡರು ಹಾಗೂ ತಮ್ಮ ದೇಶದ ಘನತೆ ಮತ್ತು ಹಿತಾಸಕ್ತಿಗಳ ಪರ ವಾದ ಮಾಡಿದರು. ಅವರ ಕಾರ್ಯಕ್ಷಮತೆಗೆ ನಮ್ಮ ಬೆಂಬಲವಿದೆ. ಏಕೆಂದರೆ ಅವರು ಸಿಂಹದಂತೆ ಹೋರಾಡಿದರು’ ಎಂದರು.ಈ ನಡುವೆ ಕೆಲವು ರಷ್ಯಾ ಹಾಗೂ ಅಮೆರಿಕ ವಿರೋಧಿ ನಿಲುವು ಹೊಂದಿರುವ ಯುರೋಪ್‌ ಒಕ್ಕೂಟದ ಮುಖ್ಯಸ್ಥೆ ಉರ್ಸುಲವ್ವಾನ್‌ ಡರ್‌ ಲೆಯೆನ್‌ ಕೂಡ ಜೆಲೆನ್ಸ್ಕಿನಿಲುವನ್ನು ಬೆಂಬಲಿಸಿದ್ದಾರೆ.

ಪುಣ್ಯ, ಜೆಲೆನ್ಸ್ಕಿಗೆ ಟ್ರಂಪ್‌ ಹೊಡೆಯಲಿಲ್ಲ: ರಷ್ಯಾ ಪ್ರತಿಕ್ರಿಯೆ

ಮಾಸ್ಕೋ: ‘ಪುಣ್ಯ, ಜೆಲೆನ್ಸ್ಕಿಅವರಿಗೆ ಟ್ರಂಪ್‌ ಗಾಗೂ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೊಡೆಯಲಿಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಡುವೆ ಶ್ವೇತಭವನದಲ್ಲಿ ನಡೆದ ಜಗಳದ ಬಗ್ಗೆ ರಷ್ಯಾ ಪ್ರತಿಕ್ರಿಯಿಸಿದೆ.ರಷ್ಯಾ ವಿದೇಶಾಂಗ ವಕ್ತಾರೆ ಮಾರಿಯಾ ಝಕರೋವಾ ಟೆಲಿಗ್ರಾಂ ಚಾನೆಲ್‌ನಲ್ಲಿ ಮಾತನಾಡಿ, ‘ಜೆಲೆನ್ಸ್ಕಿ ಒಬ್ಬ ಸುಳ್ಳುಗಾರ. ಅವರನ್ನು ಟ್ರಂಪ್‌ ಹಾಗೂ ವ್ಯಾನ್ಸ್‌ ಹೊಡೆಯದಿದ್ದುದೇ ಪುಣ್ಯ. ಅವರ ತಾಳ್ಮೆ ಮೆಚ್ಚತಕ್ಕದ್ದು’ ಎಂದಿದ್ದಾರೆ.ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಮಾತನಾಡಿ, ‘ಜೆಲೆನ್ಸ್ಕಿಗೆ ಅವರ ನಿಜವಾದ ಮುಖವನ್ನು ಟ್ರಂಪ್‌ ತೋರಿಸಿದ್ದಾರೆ’ ಎಂದಿದ್ದಾರೆ.

ಸೌಹಾರ್ದ ಮಾತುಕತೆಗೆ ‘ಕಿಡಿ’ ಹೊತ್ತಿಸಿದ್ದು ಉಪಾಧ್ಯಕ್ಷ ವ್ಯಾನ್ಸ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ ನಡುವೆ ಆರಂಭದ 30 ನಿಮಿಷ ಸೌಹಾರ್ದಯುತವಾಗೇ ಮಾತುಕತೆ ನಡೆದಿತ್ತು. ಆದರೆ ಟ್ರಂಪ್ ಮತ್ತು ಇತರ ವಿಶ್ವ ನಾಯಕರ ನಡುವಿನ ಶ್ವೇತಭವನದ ಸಭೆಗಳಲ್ಲಿ ಹೆಚ್ಚಾಗಿ ಮೌನವಾಗಿರುತ್ತಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಧ್ಯಪ್ರವೇಶವು, ಮಾತುಕತೆಗೆ ‘ಬೆಂಕಿ’ ಹಚ್ಚಿತು ಎಂದು ವರದಿಯಾಗಿದೆ.ಮಾತುಕತೆ ವೇಳೆ ವ್ಯಾನ್ಸ್‌ ಮಧ್ಯಪ್ರವೇಶಿಸಿ, ‘ಹಿಂದಿನ ಅಧ್ಯಕ್ಷ (ಬೈಡೆನ್) ಅವರ ನಿಲುವು ಯುದ್ಧಕ್ಕೆ ಕಾರಣವಾಯಿತು. ಬೈಡೆನ್ ಉಕ್ರೇನನ್ನು ಬೆಂಬಲಿಸಿದ ಪರಿಣಾಮ ರಷ್ಯಾ ಸಿಟ್ಟಿಗೆದ್ದು ಯುದ್ಧ ಆಂಭಿಸಿತು.ಈಗ ನಮ್ಮ ಸರ್ಕಾರ ರಾಜತಾಂತ್ರಿಕತೆ ಮೂಲಕ ಯುದ್ಧದ ಅಂತ್ಯ ಬಯಸುತ್ತದೆ’ ಎಂದರು.ಆಗ ಕೆರಳಿದ ಜೆಲೆನ್ಸ್ಕಿ, ‘2015ರಲ್ಲಿ ಕದನವಿರಾಮ ಮುರಿದಿದ್ದೇ ರಷ್ಯಾ ಅಧ್ಯಕ್ಷ ಪುಟಿನ್‌. ಆತ ರಷ್ಯಾದ ಅನೇಕ ಪ್ರದೇಶ ಆಕ್ರಮಿಸಿಕೊಂಡ. ನಿಮಗೆ ಇತಿಹಾಸ ಗೊತ್ತಾ?’ ಎಂದು ಕೂಗಾಡಿದರು. ಆಗ ಟ್ರಂಪ್ ಹಾಗೂ ವ್ಯಾನ್ಸ್‌ ಅವರು ಜೆಲೆನ್ಸ್ಕಿ ಮೇಲೆ ಮುಗಿಬಿದ್ದರು.

ಊಟ ಮಾಡದೇ ಹೋದ ಜಲೆನ್ಸ್ಕಿ, ಉಕ್ರೇನಿ ನಿಯೋಗ!

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ಶ್ವೇತಭವನದಲ್ಲಿ ಜಗಳ ಮಾಡಿಕೊಂಡ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ ಹಾಗೂ ಅವರ ನಿಯೋಗವು ಊಟ ಮಾಡದೇ ಶ್ವೇತಭವನದಿಂದ ಹೊರನಡೆದ ಪ್ರಸಂಗ ನಡೆಯಿತು. ಹೀಗಾಗಿ ಸಂಪ್ರದಾಯದಂತೆ ಶ್ವೇತಭವನದ ಅತಿಥಿಗಳಿಗೆ ಸಿದ್ಧಪಡಿಸಿದ್ದ ಅಡುಗೆಯೆಲ್ಲ ವ್ಯರ್ಥವಾಯಿತು.ಶ್ವೇತಭವನದಲ್ಲಿ ಟ್ರಂಪ್‌-ಜೆಲೆನ್ಸ್ಕಿನಡುವೆ ಜಗಳ ಏರ್ಪಟ್ಟ ಕಾರಣ ಮಾತುಕತೆ ಅರ್ಧಕ್ಕೇ ನಿಂತಿತು. ನಂತರ ಟ್ರಂಪ್‌ ಅವರು ತಮ್ಮ ಆಪ್ತರ ಜತೆ ಮುಂದೇನು ಮಾಡಬೇಕೆಂದು ಸಭೆ ಆರಂಭಿಸಿದರು. ಅತ್ತ ಜೆಲೆನ್ಸ್ಕಿಹಾಗೂ ಅವರ ತಂಡ ಅತಿಥಿಗಳ ವಿಭಾಗದಲ್ಲಿ ಆಸೀನವಾಗಿತ್ತು. ಅಲ್ಲದೆ, ಜಗಳದ ಹೊರತಾಗ್ಯೂ ಮಾತುಕತೆ ಮುಂದುವರಿಸುವ ಇರಾದೆ ವ್ಯಕ್ತಪಡಿಸಿತು.ಆದರೆ ಇದಕ್ಕೆ ಒಪ್ಪದ ಟ್ರಂಪ್‌, ‘ಉಕ್ರೇನ್‌ ತಂಡ ನಿರ್ಗಮಿಸಲು ಅಡ್ಡಿಯಿಲ್ಲ’ ಎಂದು ತಮ್ಮ ಆಪ್ತರ ಮೂಲಕ ಸಂದೇಶ ಕಳಿಸಿದರು. ಇದರಿಂದ ಕ್ರುದ್ಧರಾದ ಜೆಲೆನ್ಸ್ಕಿಹಾಗೂ ಅವರ ನಿಯೋಗ ಕೋಪದಿಂದ ಶ್ವೇತಭವನದಿಂದ ಹೊರನಡೆಯಿತು.ಆಗ ಅವರಿಗಾಗಿ ಸಿದ್ಧಪಡಿಸಿದ್ದ ಊಟ ಹಾಗೇ ಉಳಿದು ವ್ಯರ್ಥವಾಯಿತು.

ಜೆಲೆನ್ಸ್ಕಿರೀತಿ ಟ್ರಂಪ್‌ ಎದುರು ದನಿ ಎತ್ತಿ: ಮೋದಿಗೆ ಆಪ್‌ ಆಗ್ರಹ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಜೆಲೆನ್‌ಸ್ಕಿ ಅವರ ನಡುವಿನ ವಾಕ್ಸಮರವನ್ನು ಉಲ್ಲೇಖಿಸಿರುವ ಆಪ್ ಸಂಸದ ಸಂಜಯ್‌ ಸಿಂಗ್‌, ‘ನೀವೂ ಜೆಲೆನ್ಸ್ಕಿ ರೀತಿ ದನಿ ಎತ್ತಬೇಕು’ ಎಂದು ಆಗ್ರಹಿಸಿದ್ದಾರೆ. ‘ನೀವು ಜೆಲೆನ್‌ಸ್ಕಿ ರೀತಿ ಟ್ರಂಪ್‌ ಅವರನ್ನು ಪ್ರಶ್ನೆ ಮಾಡಿ. ಅಕ್ರಮ ವಲಸಿಗರ ಗಡೀಪಾರು ಪ್ರಕ್ರಿಯೆಯಲ್ಲಿ ಕಾಲಿಗೆ ಕೋಳ ಹಾಕುವುದನ್ನು ಪ್ರಶ್ನಿಸಿ. ಟ್ರಂಪ್‌ ಅವರ ಕೈಗೊಂಬೆಯಾಗಬಾರದು’ ಎಂದು ಟ್ವೀಟ್‌ ಮಾಡಿದ್ದಾರೆ.

ಜೆಲೆನ್ಸ್ಕಿ-ಟ್ರಂಪ್‌ ಜಗಳದ ವೇಳೆ ತಲೆತಗ್ಗಿಸಿ ಕೂತ ಉಕ್ರೇನಿ ದೂತೆ!

ವಾಷಿಂಗ್ಟನ್: ಒಂದು ಕಡೆ ಅಮೆರಿಕ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಜೋರು ಜಗಳ ನಡೆವ ವೇಳೆ ಅಮೆರಿಕದಲ್ಲಿನ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ತಲೆತಗ್ಗಿಸಿ ಹಣೆಗೆ ಕೈಹಚ್ಚಿ ಕೂತ ಪ್ರಸಂಗ ನಡೆಯಿತು. ಅವರು ಹೀಗೆ ಕೂತ 12 ಸೆಕೆಂಡಿನ ವಿಡಿಯೋ ವೈರಲ್‌ ಆಗಿದೆ.ಈ ಘಟನೆಯಿಂದ ಮಾರ್ಕರೋವಾ ಮುಜುಗರಕ್ಕೆ ಒಳಗಾಗಿದ್ದು ಸ್ಪಷ್ಟವಾಗಿತ್ತು. ಇದಕ್ಕೆ ವ್ಯಂಗ್ತವಾಡಿರುವ ಶ್ವೇತಭವನ ಉಪ ಮುಖ್ಯಸ್ಥ ಡಾನ್ ಸ್ಕ್ಯಾವಿನೊ, ‘ಜೆಲೆನ್ಸ್ಕಿ ತಮ್ಮ ದೇಶಕ್ಕೇ ವಿಪತ್ತು ಎಂದು ಉಕ್ರೇನಿಯನ್ ರಾಯಭಾರಿ ಅರ್ಥಮಾಡಿಕೊಂಡಿದ್ದಾರೆ’ ಎಂದಿದ್ದಾರೆ.

ಯುದ್ಧ ನಿಲ್ಲುವವರೆಗೆ ಸೂಟ್‌ ಧರಿಸಲ್ಲ: ಜೆಲೆನ್‌ಸ್ಕಿ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಬಿರುಸಿನ ಮಾತುಕತೆ ವೇಳೆ, ತಮ್ಮ ಟ್ರೇಡ್‌ಮಾರ್ಕ್‌ ಬಟ್ಟೆಯಾದ ಟೀಶರ್ಟ್‌ ಹಾಗೂ ಪ್ಯಾಂಟ್‌ ಅನ್ನು ಜೆಲೆನ್ಸ್ಕಿ ಧರಿಸಿದ್ದರು. ಅವರು ವಿದೇಶಿ ಗಣ್ಯರು ಹೆಚ್ಚಾಗಿ ಧರಿಸುವ ಸೂಟ್‌ ಧರಿಸಿರಲಿಲ್ಲ. ಇದು ಚರ್ಚೆಗೆ ಗ್ರಾಸ ಆಯಿತು.‘ಅಮೆರಿಕ ಅಧ್ಯಕ್ಷೀಯ ಕಚೇರಿಗೆ ಭೇಟಿ ನೀಡಿದಾಗ ಗಣ್ಯರು ಸೂಟ್‌ ಧರಿಸುವ ಸಂಪ್ರದಾಯವಿದೆ. ನೀವೇಕೆ ಧರಿಸಿಲ್ಲ?’ ಎಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಹಾಗೂ ಅಲ್ಲಿದ್ದ ಕೆಲ ಪತ್ರಕರ್ತರು ಪ್ರಶ್ನಿಸಿದರು. ಆಗ ಗರಂ ಆದ ಜೆಲೆನ್ಸ್ಕಿ, ‘ನಾನು ಸೂಟ್‌ ಧರಿಸದಿದ್ದರೆ ನಿಮಗೇನು ಸಮಸ್ಯೆ?’ ಎಂದು ಖಾರವಾಗಿ ಪ್ರಶ್ನಿಸಿ, ‘ರಷ್ಯಾ-ಉಕ್ರೇನ್‌ ಸಮರ ನಿಲ್ಲುವವರೆಗೂ ನಾನು ಸೂಟ್‌ ಧರಿಸಲ್ಲ’ ಎಂದು ತಿರುಗೇಟು ನೀಡಿದರು.