ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಪಟ್ಟಣದ ಶಿರಡಿ ಸಾಯಿ ಮಂದಿರದ 17ನೇ ವಾರ್ಷಿಕೋತ್ಸವ ನಿಮಿತ್ತ ಜ.21 ರಿಂದ 30 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಕೊನೆಯ ದಿನ ಐವರು ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಸಾಯಿ ಸೇವಾ ಪರಿವಾರದ ಅಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು. ಅವರು ಬುಧವಾರ ಪಟ್ಟಣದ ಚರಮೂರ್ತಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಯಿ ಸೇವಾ ಪರಿವಾರದಿಂದ ಜ.21 ರಂದು ಸಿ.ಎಲ್.ಇ ಸಂಸ್ಥೆ ಸಹಯೋಗದಲ್ಲಿ ಸುವರ್ಣ ಮಹೋತ್ಸವ ಕಟ್ಟಡದಲ್ಲಿ ಇನ್ಫೋಸಿಸ್, ಏಕಸ್, ಟಾಟಾ ಸೇರಿ ಹಲವು ಕಂಪನಿಗಳ ಉಪಸ್ಥಿತಿಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕ್ಕೊಳ್ಳಲಾಗಿದೆ ಎಂದರು.ಜ. 24, 25 ಮತ್ತು 27 ರಂದು ಸ್ವಚ್ಛ ಚಿಕ್ಕೋಡಿ ಅಭಿಯಾನ ಪುರಸಭೆ ಹಾಗೂ ಸಿ.ಎಲ್.ಇ. ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದೆ. 24, 25 ರಂದು ಕೆ.ಎಲ್.ಇ. ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ಸಾರ್ವಜನಿಕ ಆಸ್ಪತ್ರೆ ಚಿಕ್ಕೋಡಿ ಹಾಗೂ ಸಾಯಿ ಸೇವಾ ಪರಿವಾರದ ಸಂಯುಕ್ತ ಆಶ್ರಯದಲ್ಲಿ ಚಿಕ್ಕೋಡಿ ಕೆ.ಎಲ್.ಇ. ಆಸ್ಪತ್ರೆಯಲ್ಲ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಬಿ.ಪಿ,ಇ.ಸಿ.ಜಿ, ರಕ್ತ ತಪಾಸಣೆ, ಶುಗರ ಟೆಸ್ಟ್ ಉಚಿತವಾಗಿ ಮಡಲಾಗುವುದು. ಕಣ್ಣಿನ ಪೊರೆಯ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು.ಜ.26 ರಂದು ಸಿ.ಎಲ್.ಇ. ಸಂಸ್ಥೆಯ ಆವರಣದಲ್ಲಿ ಲೆಜಿಮ್ ಮತ್ತು ಕರಬಲ್ ಪ್ರದರ್ಶನ ನಡೆಯುವುದು. ಜ.27ರ ಸಂಜೆ 5ಕ್ಕೆ ಸಂಪ್ರೋಕ್ಷಣಾ ವಿಧಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾಂಭವಾಗುತ್ತವೆ. 28ರ ಬೆಳಗ್ಗೆ 7ಕ್ಕೆ ಧ್ವಜಾರೋಹಣ ಸಂಪಾದನ ಚರಮೂರ್ತಿ ಮಠದ ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿದೆ. 8.30ಕ್ಕೆ ಲೋಕ ಕಲ್ಯಾಣಕ್ಕಾಗಿ ಸೌರ ಯಾಗ, ನಂತರ 9ಕ್ಕೆ ನಗರದ ಶಾಲಾ ಮಕ್ಕಳಿಂದ ತಂದೆ ತಾಯಿಗಳ ಪಾದಪೂಜೆ, ಸಂಜೆ 5ಕ್ಕೆ ಶಾಲಾ ಮಕ್ಕಳಿಂದ ನೃತ್ಯ ಕಲಾ ಪ್ರದರ್ಶನ ಕಾರ್ಯಕ್ರಮ ನಡೆಯುವುದು.
ಜ.29ರ ಬೆಳಗ್ಗೆ 8 ಗಂಟೆಗೆ ಮಂಡಲ ಪೂಜೆ, 11 ಗಂಟೆಗೆ ಮಹಿಳೆಯರಿಂದ ಲಲಿತ ಸಹಸ್ರ ನಾಮ ಪಠಣ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನಡೆಯುವುದ. 12-30ಕ್ಕೆ ಭಾರತೀಯ ಸಂಸ್ಕಾರ ಮತ್ತು ಮಹಿಳೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯುವುದು. ಇದರಲ್ಲಿ ಉಪನ್ಯಾಸಕರಾಗಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಅಕ್ಷಯಾ ಗೊಖಲೆ ಆಗಮಿಸುತ್ತಿದ್ದಾರೆ. ಹುಲಿಕಲ್ ನಟರಾಜ ಇವರಿಂದ ಪವಾಡ ಬಯಲು ಕಾರ್ಯಕ್ರಮ ನಡೆಯುವುದು. 4 ಗಂಟೆಗೆ ನಗರದ ಮಹಿಳೆಯರಿಂದ ಮಹಿಳೆಯರಿಗಾಗಿ ಆಹಾರಮೇಳ ಆಯೋಜಿಸಲಾಗಿದೆ ಎಂದರು.ಜ.30ರ ಬೆಳಗ್ಗೆ 8ಕ್ಕೆ 5 ಜನ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ, ಬಳಿಕ ಚಿಕ್ಕೋಡಿಯ ಹಿರಿಯ ನಾಗರಿಕರಿಗೆ ಸತ್ಕಾರ, ಮಧ್ಯಾಹ್ನ 12 ಗಂಟೆಯಿಂದ ಮಹಾಪ್ರಸಾದ, ಸಾಯಂಕಾಲ 6 ಗಂಟೆಗೆ ಚಿಕ್ಕೋಡಿ ಜನತೆಯ ಮನೋರಂಜನೆ ಕಾರ್ಯಕ್ರಮ ಇರಲಿದೆ ಎಂದು ಮಹೇಶ ಹಿರೇಮಠ ಹಾಗ ಜಗದೀಶ ಕವಟಗಿಮಠ ಹೇಳಿದರು. ಆದಿನಾಥ ಶೆಟ್ಟಿ, ರಾಜು ಹಿರೇಮಠ, ಅಶೋಕ ಪಾಟಕ, ಪ್ರವೀಣ ಕಾಂಬಳೆ,ಸಂಜಯ ಅರಗೆ, ಸಂಜಯ ಕವಟಗಿಮಠ, ಸಿದ್ದಪ್ಪ ಡಂಗೇರ ಇದ್ದರು.