ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನ ಗೋದಾಮು ನಿರ್ಮಾಣಕ್ಕೆ ನಬಾರ್ಡ್ ವತಿಯಿಂದ ವಾರ್ಷಿಕ ಶೇಕಡ 1% ಬಡ್ಡಿ ದರದಲ್ಲಿ 25 ಲಕ್ಷ ರು. ಸಾಲ ಕೊಡಿಸುವುದಾಗಿ ಶಾಸಕ ಸಿಎನ್ ಬಾಲಕೃಷ್ಣ ಭರವಸೆ ನೀಡಿದರು.ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹೊಸ ಸಾಲ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ಹೊಸ ಸಾಲದ ಚೆಕ್ ವಿತರಿಸಿ ಮಾತನಾಡಿದರು. ಈಗಾಗಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2065 ರೈತರಿಗೆ ಸುಮಾರು 12 ಕೋಟಿ 16 ಲಕ್ಷ ಸಾಲ ವಿತರಿಸಲಾಗಿದ್ದು, ಈಗ ಹೊಸದಾಗಿ 128 ಶೇರುದಾರ ರೈತರಿಗೆ 37 ಲಕ್ಷ ರು. ಹೊಸ ಸಾಲ ವಿತರಣೆ ಮಾಡಲಾಗಿದೆ . ಇದರ ಜೊತೆಗೆ ಈಗಾಗಲೇ 46 ಮಹಿಳಾ ಸ್ವಸಹಾಯ ಸಂಘಗಳಿಗೆ 62 ಲಕ್ಷ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೋಬಳಿ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಪಬ್ಲಿಕ್ ಶಾಲೆ ಕಟ್ಟಡ ಸೇರಿದಂತೆ ವಿವಿಧ ಇಲಾಖೆಗಳ ಹೊಸ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದರ ಜೊತೆಗೆ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 10 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಿಸಲಾಗಿದೆ ಎಂದರು.
ಗ್ರಾಮದ ಪುರಾಣ ಪ್ರಸಿದ್ಧ ಚಂದ್ರಮೌಳೇಶ್ವರ ದೇವಾಲಯದ ಬಳಿ ಇರುವ ಸಮುದಾಯ ಭವನ ನವೀಕರಣಕ್ಕೆ ಮುಂಬರುವ ಆರ್ಥಿಕ ವರ್ಷದಲ್ಲಿ 5 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ತಾಲೂಕಿನಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಿರುವದಾಗಿ ತಿಳಿಸಿದರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಲ್ಲಿನ ವಾಟರ್‌ಮನ್‌ಗಳು ನೀರಿನ ಟ್ಯಾಂಕ್ ಕ್ಲೀನಿಂಗ್ ಗೆ ಆದ್ಯತೆ ನೀಡಬೇಕು. ಇದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವುದನ್ನು ತಡೆಗಟ್ಟಬಹುದು ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ತಿಳಿಸುವುದಾಗಿ ಹೇಳಿದರು.ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಜಂಬೂರು, ಪಿ ದಾಸಾಪುರ, ಚೌಡೇನಹಳ್ಳಿ, ಕಲ್ಕೆರೆ, ದೇವಿಗೆರೆ, ರಾಯಸಮುದ್ರ ಕಾವಲು ಕೆರೆ ಈಗಾಗಲೇ ತುಂಬಿದ್ದು ನುಗ್ಗೇಹಳ್ಳಿ ಹಿರೇಕೆರೆಗೆ ಸುಮಾರು 2 ತಿಂಗಳುಗಳ ಕಾಲ ಕೆರೆಗೆ ನೀರು ಹರಿಸಿ ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಅಧ್ಯಕ್ಷ ಎಚ್ ಬಿ ರಂಗಸ್ವಾಮಿ( ಅಣ್ಣಯ್ಯ) ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ ಕುಮಾರ್, ಉಪಾಧ್ಯಕ್ಷೆ ಜಂಬೂರು ಮಾಯಮ್ಮ, ನಿರ್ದೇಶಕರುಗಳಾದ ದೊರೆಸ್ವಾಮಿ, ಪಟೇಲ್ ಕುಮಾರ್, ಗೌರಮ್ಮ ತೋಪೇಗೌಡ, ವಿಕ್ಟರ್, ಹುಲಿಕೆರೆ ಸಂಪತ್ ಕುಮಾರ್, ಕಾರೇಕೆರೆ ಪ್ರಕಾಶ್, ಕೋಮಲ ಕುಮಾರಸ್ವಾಮಿ, ಮಹೇಶ್, ಚಂದ್ರಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ನಟರಾಜ್, ಹೊನ್ನೇಗೌಡ, ಎನ್ ಎಸ್ ಮಂಜುನಾಥ್, ಹಿರಿಯಣ್ಣಗೌಡ, ರಾಮೇಗೌಡ, ಮುಖಂಡರಾದ ತೋಟಿ ನಾಗರಾಜ್, ಪುಟ್ಟಸ್ವಾಮಿ, ಜೆ.ಡಿ.ಶಂಕರ್, ಜೆಸಿ ಕುಮಾರ್, ನಾರಾಯಣಪ್ಪ, ಧರಣಿ ಕುಮಾರ್, ಜಂಬೂರು ರಮೇಶ್, ಮೊಹಮ್ಮದ್ ಜಾವಿದ್, ಪಟೇಲ್ ಮುನ್ನ, ಬಸವನಪುರ ಪ್ರಕಾಶ್, ಮುದ್ದನಹಳ್ಳಿ ಅಣ್ಣಯ್ಯ, ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್ ಕೆ ಅಭಿಲಾಶ್, ಕಾರ್ಯನಿರ್ವಹಣಾಧಿಕಾರಿ ಡಿ.ವಿನಯ್, ಸೇರಿದಂತೆ ಕೃಷಿ ಪತ್ತಿನ ಸಿಬ್ಬಂದಿ ವರ್ಗ ಹಾಗೂ ರೈತರು ಹಾಜರಿದ್ದರು.