ಎಂಬಿಬಿಎಸ್‌ ಸೀಟ್‌ ಪಡೆದ ರೋಣದ ವಿದ್ಯಾರ್ಥಿಗೆ ಕೊಪ್ಪಳದ ವ್ಯಕ್ತಿಯಿಂದ ₹ 60 ಸಾವಿರ ನೆರವು

| Published : Oct 14 2023, 01:01 AM IST

ಎಂಬಿಬಿಎಸ್‌ ಸೀಟ್‌ ಪಡೆದ ರೋಣದ ವಿದ್ಯಾರ್ಥಿಗೆ ಕೊಪ್ಪಳದ ವ್ಯಕ್ತಿಯಿಂದ ₹ 60 ಸಾವಿರ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ನೀಟ್ ಪರೀಕ್ಷೆಯಲ್ಲಿ 556 ಅಂಕ ಪಡೆದು ಚಿಕ್ಕಮಗಳೂರ ಸರ್ಕಾರಿ ಎಂ.ಬಿ.ಬಿ.ಎಸ್ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಪಡೆದ ರೋಣ ಪಟ್ಟಣದ ಬಡ ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕೊಪ್ಪಳ ಪಟ್ಟಣದ ಚಾರ್ಟರ್ಡ್ ಅಕೌಂಟೆಂಟ್‌ ಸಂಜಯ ವಿರೂಪಾಕ್ಷಪ್ಪ ಕೊತಬಾಳ ಅವರು ₹ 60 ಸಾವಿರ ಆರ್ಥಿಕ ನೆರವು ನೀಡಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕೊಪ್ಪಳದ ಚಾರ್ಟರ್ಡ್ ಅಕೌಂಟೆಂಟ್‌ ಸಂಜಯಗೆ ಪ್ರಶಂಸೆಯ ಮಹಾಪೂರರೋಣ:ನೀಟ್ ಪರೀಕ್ಷೆಯಲ್ಲಿ 556 ಅಂಕ ಪಡೆದು ಚಿಕ್ಕಮಗಳೂರ ಸರ್ಕಾರಿ ಎಂ.ಬಿ.ಬಿ.ಎಸ್ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಪಡೆದ ರೋಣ ಪಟ್ಟಣದ ಬಡ ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕೊಪ್ಪಳ ಪಟ್ಟಣದ ಚಾರ್ಟರ್ಡ್ ಅಕೌಂಟೆಂಟ್‌ ಸಂಜಯ ವಿರೂಪಾಕ್ಷಪ್ಪ ಕೊತಬಾಳ ಅವರು ₹ 60 ಸಾವಿರ ಆರ್ಥಿಕ ನೆರವು ನೀಡಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನ ಅವರ ತಂದೆ ಬಸವರಾಜ ಗದಗಿನ ಅವರು ನಿತ್ಯ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದು, ಮಗನ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕಷ್ಟ ಪಟ್ಟು ಕಲಿಕೆಗೆ ಅನುಕೂಲ ಮಾಡುತ್ತಾ ಬಂದಿದ್ದಾರೆ.‌ ತಂದೆಯ ಆಸೆಯಂತೆ ಮಗ ಗವಿಸಿದ್ದಪ್ಪ ತೀವ್ರ ಪರಿಶ್ರಮ ಪಟ್ಟು ಎಂಬಿಬಿಎಸ್ ಸೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಮಗನಿಗೆ ಉನ್ನತ ಶಿಕ್ಷಣಕ್ಕೆ ಕಳುಹಿಸಲು ತಂದೆಗೆ ಆರ್ಥಿಕ ಸಂಕಷ್ಟ ಎದುರಾಯಿತು. ಇದರಿಂದ ತೀವ್ರ ಚಿಂತಾಕ್ರಾಂತರಾಗಿದ್ದರು. ಈ ಮಧ್ಯೆ ಮಗನಿಗೆ ಎಂಬಿಬಿಎಸ್. ಸೀಟ್ ಲಭಿಸಿದ ನಿಮಿತ್ತ ಮಗ ಗವಿಸಿದ್ದಪ್ಪನೊಂದಿಗೆ ಕೊಪ್ಪಳದ ಗವಿಮಠಕ್ಕೆ ಶ್ರೀಗಳ ದರ್ಶನಕ್ಕೆಂದು ತೆರಳಿದರು. ಈ ಸಂದರ್ಭದಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದು, ತಮಗೆ ಎದುರಾದ ಸಂಕಷ್ಟವನ್ನು ಶ್ರೀಗಳ ಬಳಿ ಹೇಳತೊಡಗಿದ್ದರು. ಅದೇ ಸಂದರ್ಭದಲ್ಲಿ ಆಕಸ್ಮಾತಾಗಿ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಕೊಪ್ಪಳ ಪಟ್ಟಣದ ಚಾರ್ಟರ್ಡ್‌ ಅಕೌಂಟೆಂಟ್ ಸಂಜಯ ಕೊತಬಾಳ ಅವರಿಗೆ ವಿದ್ಯಾರ್ಥಿಯ ಕುಟುಂಬದ ಎದುರಿಸುತ್ತಿರುವ ಸಂಕಷ್ಟ ತಿಳಿಯುತ್ತದೆ. ತಕ್ಷಣವೇ ಶ್ರೀಗಳ ಎದುರಲ್ಲಿಯೇ ಸಂಜಯ ಕೊತಬಾಳ ಅವರು, ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ವಾಗ್ದಾನ ಮಾಡಿದರು. ಅದರಂತೆ ₹ 60 ಸಾವಿರ ರು.ಗಳ ಚೆಕ್‌ನ್ನು ನೀಡಿದ್ದಲ್ಲದೇ, ಇನ್ನೂ ಏನಾದರೂ ಹಣದ ಅವಶ್ಯಕತೆ ಇದ್ದಲ್ಲಿ ಕೊಡುವುದಾಗಿ ಭರವಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಾನಿ ಸಂಜಯ ಕೊತಬಾಳ ಅವರಲ್ಲಿನ ಶಿಕ್ಷಣ ಪ್ರೇಮ‌ ಮತ್ತು ಉದಾರ ವ್ಯಕ್ತಿತ್ವಕ್ಕೆ ರೋಣ ಪಟ್ಟಣ ಸೇರಿದಂತೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮಗನಿಗೆ ಗವಿಸಿದ್ದಪ್ಪ ಎಂದು ಹೆಸರು ಇಟ್ಟಿದ್ದಕ್ಕೂ ಸಾರ್ಥಕವಾಗಿದೆ, ಸಾಕ್ಷಾತ್ ಗವಿಸಿದ್ದೇಶ್ವರನೇ ದಾನಿ ಸಂಜಯ ಕೊತಬಾಳ ಅವರ ರೂಪದಲ್ಲಿ ಬಂದು ನಮ್ಮನಕುಟುಂಬಕ್ಕೆ ಆಶೀರ್ವಾದ ಮಾಡಿದ್ದಾನೆ ಎಂದು ತಂದೆ ಬಸವರಾಜ ಗದಗಿನ ಅವರು ದಾನಿಗೆ ಧನ್ಯತೆ ಹೇಳುತ್ತಾ, ಕಣ್ಣಂಚಲ್ಲಿ ಆನಂದ ಬಾಷ್ಪ ಸುರಿಸಿದರು.ವೀರಭದ್ರೇಶ್ವರ ಸಮಿತಿಯಿಂದ ಸನ್ಮಾನ: ಎಂ.ಬಿ.ಬಿ.ಎಸ್ ಸೀಟ್ ಪಡೆದ ರೋಣ ಪಟ್ಟಣದ ಪ್ರತಿಭಾನ್ವಿತ ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನ ಅವರಿಗೆ ಪಟ್ಟಣದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ಗುರುವಾರ ಸಂಜೆ ವೀರಭದ್ರೇಶ್ವರ ಮಹಾಮನೆಯಲ್ಲಿ ಸನ್ಮಾನ ಜರುಗಿತು. ಈ ವೇಳೆ ಭರಮಗೌಡ್ರ ಲಿಂಗನಗೌಡ್ರ, ಆನಂದ ಚಂಗಳಿ, ಅಪ್ಪಣ್ಣ ಗೌಡಪ್ಪಗೌಡರ, ರಾಜು ಕೆಂಚರೆಡ್ಡಿ, ಬಸವರಾಜ ಧರ್ಮಾಯತ, ವಿರೂಪಾಕ್ಷಪ್ಪ ಶಿರೋಳ, ಮುತ್ತಣ್ಣ ಜಕ್ಕಲಿ, ಬಸವರಾಜ ಕೊಳ್ಳಿಯವರ, ವೀರೇಶ ಬಳ್ಳೊಳ್ಳಿ, ಭದ್ರಪ್ಪ ಸವಡಿ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.