‘ಬೆಳ್ಳೂರು ಗ್ರಾಮದ 60.18 ಎಕರೆ ಜಮೀನು ಮುಸ್ಲಿಮರಿಗೆ ಸೇರಿದ್ದು’

| Published : Oct 31 2024, 12:55 AM IST

‘ಬೆಳ್ಳೂರು ಗ್ರಾಮದ 60.18 ಎಕರೆ ಜಮೀನು ಮುಸ್ಲಿಮರಿಗೆ ಸೇರಿದ್ದು’
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೇ ತಾಲೂಕಿನ ಬೆಳ್ಳೂರು ಗ್ರಾಮದ ವ್ಯಾಪ್ತಿಯಲ್ಲಿ 60.18 ಎಕರೆ ಜಮೀನನ್ನು ಪಹಣಿ ಮಾಡಿಸಲು ಕ್ರಮ ವಹಿಸುವಂತೆ ಬೆಳ್ಳೂರಿನ ಮಸ್ಲಿಂ ಸಮುದಾಯದವರು ಬರೆದಿರುವ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ/ನಾಗಮಂಗಲ

ರಾಜ್ಯದ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೇ ತಾಲೂಕಿನ ಬೆಳ್ಳೂರು ಗ್ರಾಮದ ವ್ಯಾಪ್ತಿಯಲ್ಲಿ 60.18 ಎಕರೆ ಜಮೀನನ್ನು ಪಹಣಿ ಮಾಡಿಸಲು ಕ್ರಮ ವಹಿಸುವಂತೆ ಬೆಳ್ಳೂರಿನ ಮಸ್ಲಿಂ ಸಮುದಾಯದವರು ಬರೆದಿರುವ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಳ್ಳೂರು ಗ್ರಾಮದ ಸರ್ವೇ ನಂ.472ರಲ್ಲಿ 20 ಎಕರೆ ಜಮೀನು ಮಸೀದಿಗೆ, 34 ಎಕರೆ 12 ಗುಂಟೆ ಸೂಫಿ ಸಂತರಿಗೆ ಹಾಗೂ ಸ.ನಂ.73ರಲ್ಲಿ 6.06 ಎಕರೆ ಜಮೀನನ್ನು ಖಬರಸ್ಥಾನ್‌ಗೆ ಪಹಣಿ ಮಾಡಿಸಲು ಕ್ರಮ ವಹಿಸುವಂತೆ ಜಾಮೀಯಾ ಮಸೀದಿ ಮ್ಯಾನೇಜಿಂಗ್‌ ಕಮಿಟಿಗೆ ಪತ್ರ ಬರೆಯಲಾಗಿದೆ.

ಬೆಳ್ಳೂರು ಗ್ರಾಮದ ಸರ್ವೇ ನಂ.472ರಲ್ಲಿ 20 ಎಕರೆ ಜಮೀನು ಮೈಸೂರು ಸರ್ಕಾರದ ಆದೇಶ ಸಂಖ್ಯೆ: ಆರ್.2661-2-ಎಲ್‌ಆರ್ 189-32-2 ನವಂಬರ್- 23 ದಿನಾಂಕ 3 ನವಂಬರ್ 1932ರಂತೆ ಮೈಸೂರು ಸರ್ಕಾರವು ಮಸೀದಿಗೆ ನೀಡುವಂತೆ ಆದೇಶ ಮಾಡಿ ಸ್ಕೆಚ್ ಕೂಡ ಆಗಿರುತ್ತದೆ.

ಸರ್ವೇ ನಂ.472ರಲ್ಲಿ 34 ಎಕರೆ 12 ಗುಂಟೆ ಜಮೀನು ಸರ್ಕಾರಿ ಆದೇಶ ಸಂಖ್ಯೆ: ಜಿಡಿಆರ್10/39-40ರಂತೆ ದಿನಾಂಕ 22-11-1940 ರಂತೆ ಮೈಸೂರು ಸರ್ಕಾರವು ಸೂಫಿ ಸಂತರಿಗೆ ನೀಡಲು ಆದೇಶ ಮಾಡಿ ಸ್ಕೆಚ್ ಕೂಡ ಆಗಿದೆ. ಅದೇ ರೀತಿ ಸರ್ವೇ ನಂ.73ರಲ್ಲಿ 6.06 ಎಕರೆ ಜಮೀನು ಮೈಸೂರು ಸರ್ಕಾರದ ಆದೇಶ ಸಂಖ್ಯೆ: ಆರ್ 9876-ಎಲ್‌ಆರ್-14-20-16 ದಿನಾಂಕ 5 ಮಾರ್ಚ್ 1921ರಂತೆ ಮೈಸೂರು ಸರ್ಕಾರವು ಖಬರಸ್ಥಾನ್‌ಗೆ ನೀಡುವಂತೆ ಆದೇಶ ಮಾಡಿ ಸ್ಕೆಚ್ ಆಗಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಜಮೀನುಗಳನ್ನು ಪಹಣಿ ಮಾಡಲು ಕ್ರಮ ವಹಿಸುವಂತೆ ಕಳೆದ ಜೂ.25ರಂದು ಬೆಳ್ಳೂರು ಟೌನ್‌ನ ಜಾಮಿಯಾ ಮಸೀದಿ ಮ್ಯಾನೇಜಿಂಗ್‌ ಕಮಿಟಿಗೆ ಬೆಳ್ಳೂರಿನ ಖಲೀಂ, ಇರ್ಫಾನ್‌ಪಾಷ, ಜಮಾಯತ್ ಮತ್ತು ಖಾಸೀಂ ಅಫ್ಜಾ ಎಂಬುವರು ಸಹಿ ಮಾಡಿ ಬರೆದಿರುವ ಪತ್ರ ವೈರಲ್ ಆಗಿದೆ. ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದ ಸಕ್ಕರೆ ನಾಡು ಮಂಡ್ಯಕ್ಕೂ ಕಾಲಿಟ್ಟಿತೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

ಜಮೀನನ್ನು ಪಹಣಿ ಮಾಡಿಕೊಡುವಂತೆ ಬೆಳ್ಳೂರಿನ ಜಾಮಿಯಾ ಮಸೀದಿ ಆಡಳಿತ ಮಂಡಳಿಯಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಯಾವುದೇ ಪತ್ರ ಬರೆದಿಲ್ಲ ಎನ್ನಲಾಗಿದ್ದು, ವೈರಲ್ ಆಗಿರುವ ಪತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಾಗಲಿ, ಜಾಮಿಯಾ ಮಸೀದಿ ಆಡಳಿತ ಮಂಡಳಿಯವರಾಗಲಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದರೆ, ವೈರಲ್ ಆಗಿರುವ ಈ ಪತ್ರವನ್ನು ಯಾವ ಉದ್ದೇಶಕ್ಕಾಗಿ ಬರೆಯಲಾಗಿದೆ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ.