ಸಾರಾಂಶ
ಪ್ರಥಮ ಬಹುಮಾನ ವಿಜೇತ ತಂಡಕ್ಕೆ 5 ಲಕ್ಷ ರು. ಹಾಗೂ ಪ್ರಶಸ್ತಿ ಪತ್ರ ದೊರೆಯಲಿದೆ. ಅಲ್ಲದೆ ಈ ತಂಡ ಬಹರೇನ್‌ನ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ತುಳುನಾಡಿನ ಸಾಂಪ್ರದಾಯಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಹುಲಿ ಕುಣಿತದ 9ನೇ ವರ್ಷದ ‘ಪಿಲಿನಲಿಕೆ’ ಹುಲಿ ವೇಷ ಸ್ಪರ್ಧೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಅ.12ರಂದು ಬೆಳಗ್ಗೆ 10ರಿಂದ ನಡೆಯಲಿದೆ. ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.ಪಿಲಿನಲಿಕೆಯಲ್ಲಿ ಈ ಬಾರಿ ಪ್ರತಿಷ್ಠಿತ 11 ತಂಡಗಳು ಭಾಗವಹಿಸಲಿವೆ. ಪ್ರತಿವರ್ಷದಂತೆ ವಿವಿಧೆಡೆಗಳಿಂದ ಸಹಸ್ರಾರು ಮಂದಿ ವೀಕ್ಷಿಸಲಿದ್ದಾರೆ ಎಂದು ‘ಪಿಲಿನಲಿಕೆ’ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.18 ಲಕ್ಷ ರು. ಬಹುಮಾನ:
ಹುಲಿ ವೇಷದ ಸಂಪ್ರದಾಯ ಹಾಗೂ ಮೂಲ ಸೊಗಡನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಪ್ರತಿವರ್ಷ ಈ ಪಿಲಿನಲಿಕೆ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಒಟ್ಟು 18 ಲಕ್ಷ ರು. ಬಹುಮಾನ ನಿಗದಿಗೊಳಿಸಲಾಗಿದೆ ಎಂದರು.ಪ್ರಥಮ ಬಹುಮಾನ ವಿಜೇತ ತಂಡಕ್ಕೆ 5 ಲಕ್ಷ ರು. ಹಾಗೂ ಪ್ರಶಸ್ತಿ ಪತ್ರ ದೊರೆಯಲಿದೆ. ಅಲ್ಲದೆ ಈ ತಂಡ ಬಹರೇನ್‌ನ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದೆ.
ತಾರಾ ಮೆರುಗು: ಪಿಲಿನಲಿಕೆಗೆ ಮೆರುಗು ನೀಡಲು ಹೆಸರಾಂತ ನಟರಾದ ರಿಷಬ್ ಶೆಟ್ಟಿ, ಡಾಲಿ ಧನಂಜಯ್, ರಾಜ್ ಶೆಟ್ಟಿ, ಬಾಲಿವುಡ್ ನಟ ಅಹನ್ ಶೆಟ್ಟಿ, ಕ್ರಿಕೆಟ್ ತಾರೆ ಶಿವಂ ದುಬೆ ಮುಂತಾದವರು ಆಗಮಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ನಮ್ಮ ಟಿವಿ ಆಡಳಿತ ನಿರ್ದೇಶಕ ಹಾಗೂ ಪಿಲಿ ನಲಿಕೆ ತಂಡದ ಪ್ರಮುಖರಾದ ಅವಿನಾಶ್, ವಿಕಾಸ್ ಶೆಟ್ಟಿ ಇದ್ದರು.ವಿದ್ಯಾರ್ಥಿ ‘ಪಿಲಿ’ಗಳಿಗೆ ವಿದ್ಯಾನಿಧಿ: ಪಿಲಿ ನಲಿಕೆ ಸ್ಪರ್ಧೆಗೆ ಆಯ್ಕೆಯಾದ ಪ್ರತಿ ತಂಡದಲ್ಲಿ ಒಬ್ಬೊಬ್ಬ ಬಡ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಅವರ ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂಭವರಿಗೆ 25 ಸಾವಿರದಿಂದ 1 ಲಕ್ಷ ರು.ವರೆಗೆ ವಿದ್ಯಾನಿಧಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಮಿಥುನ್ ರೈ ತಿಳಿಸಿದರು.