ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಮುಂಗಾರು ಹಾಗೂ ಹಿಂಗಾರು ಎರಡೂ ಹಂಗಾಮಿನಲ್ಲಿ ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಆಡಳಿತ ವ್ಯವಸ್ಥೆ ಬರಗಾಲದ ಪರಿಹಾರದಲ್ಲಿ ನಿರೀಕ್ಷಿತ ಕಾರ್ಯ ಮಾಡುತ್ತಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.ಹಿಂದೆಂದೂ ಕಾಣದಷ್ಟು ಭೀಕರ ಬರಗಾಲ ರಾಜ್ಯದಲ್ಲಿ ಎದುರಾಗಿದೆ. ಈ ಸಮಯದಲ್ಲಿ ರೈತರ ಕಣ್ಣೊರೆಸುವ ಕೆಲಸ ಮಾಡಬೇಕಿದ್ದ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಶಾಸಕರು, ಸಚಿವರು ಬರ ಪ್ರದೇಶಕ್ಕೆ ಹೋಗಿ ರೈತರನ್ನು ಭೇಟಿಯಾಗುತ್ತಿಲ್ಲ ಎಂದ ಅವರು, ಬರ ತಾಲೂಕುಗಳಿಗೆ ತಲಾ ₹10 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 234 ತಾಲೂಕುಗಳಲ್ಲಿ ಬರ ಎದುರಾಗಿದೆ. ಈ ಎಲ್ಲ ತಾಲೂಕುಗಳಲ್ಲಿನ ಜನ ಗುಳೆ ಹೋಗುವುದನ್ನು ತಡೆದು ಮೇವು ಬ್ಯಾಂಕ್ ಆರಂಭ, ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಸಬೇಕಿತ್ತು. ಆದರೆ ಈ ಕಾರ್ಯ ಮಾಡದ ಸರ್ಕಾರ ರಾಜಕಾರಣದಲ್ಲೇ ಕಾಲ ಹರಣ ಮಾಡುತ್ತಿದೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಜಿಲ್ಲೆಯ 68 ಕೆರೆಗಳನ್ನು ತುಂಬಿಸಬೇಕು. ಕೂಡಲೇ ಸರ್ಕಾರ ಇದನ್ನು ಗಮನಿಸಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು. ಇದರಿಂದ ರೈತರಿಗೆ ಕೊಂಚ ಅನುಕೂಲವಾಗಲಿದೆ. ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಸಾಮಾಜಿಕ ನ್ಯಾಯ ನೆನಪಾಗುತ್ತಿಲ್ಲವೇ ಎಂದು ಪ್ರಶ್ನಿಸಿದ ಕಾರಜೋಳ, ಗಿಮಿಕ್ ಮಾಡುತ್ತಲೇ ಆಡಳಿತ ನಡೆಸುತ್ತಿದ್ದಾರೆ ಎಂದರು.
ಸಚಿವರು, ಶಾಸಕರು ತಮ್ಮ ಭಾಗದ ಬರ ವೀಕ್ಷಣೆ ಮಾಡುವಂತೆ ಮುಖ್ಯಮಂತ್ರಿ ಹೇಳುವಂತಹ ಸ್ಥಿತಿ ಬಂದಿದೆ. ನಾವು ರಾಜ್ಯದ ಎಲ್ಲ ತಾಲೂಕುಗಳಲ್ಲಿ ಬರ ವೀಕ್ಷಣೆ ಮಾಡಿದ ಬಳಿಕ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ನಮ್ಮ ವರದಿಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ನಾಗರಾಜ ಛಬ್ಬಿ, ಮುಖಂಡರಾದ ಬಸವರಾಜ ಕುಂದಗೊಳಮಠ, ಷಣ್ಮುಖ ಗುರಿಕಾರ, ಮೋಹನ ರಾಮದುರ್ಗ ಇತರರು ಇದ್ದರು.