ಸಾರಾಂಶ
ಅಪ್ರಾಪ್ತ ಬಾಲಕನಿಗೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಾಲನೆಗೆ ಅವಕಾಶ ನೀಡಿದ್ದ ವಾಹನ ಮಾಲೀಕರಾದ ಪಾಲಕರಿಗೆ 25 ಸಾವಿರ ರು. ದಂಡ ವಿಧಿಸಿ, ಇನ್ನೊಮ್ಮೆ ಇಂತಹ ಘಟನೆ ಮರುಕಳಿಸದಂತೆ ನ್ಯಾಯಾಲಯ ಎಚ್ಚರಿಸಿದೆ.
ದಾವಣಗರೆ : ಅಪ್ರಾಪ್ತ ಬಾಲಕನಿಗೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಾಲನೆಗೆ ಅವಕಾಶ ನೀಡಿದ್ದ ವಾಹನ ಮಾಲೀಕರಾದ ಪಾಲಕರಿಗೆ 25 ಸಾವಿರ ರು. ದಂಡ ವಿಧಿಸಿ, ಇನ್ನೊಮ್ಮೆ ಇಂತಹ ಘಟನೆ ಮರುಕಳಿಸದಂತೆ ನ್ಯಾಯಾಲಯ ಎಚ್ಚರಿಸಿದೆ.
ನಗರದ ನೂತನ ಕಾಲೇಜು ರಸ್ತೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ನಗರ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ ಮಾರ್ಗದರ್ಶನದಲ್ಲಿ ದಕ್ಷಿಣ ಸಂಚಾರ ಠಾಣೆ ಪಿಎಸ್‌ಐ ಡಿ.ಎಚ್. ನಿರ್ಮಲಾ ನೇತೃತ್ವದಲ್ಲಿ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಅಪ್ರಾಪ್ತನನ್ನು ತಡೆದು, ವಾಹನ ಜಪ್ತಿ ಮಾಡಿದ್ದಾರೆ.
ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಪಿಆರ್‌ಎಲ್ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಬೈಕ್ ಮಾಲೀಕ ಗೋರೂರು ಬಾಲಕೃಷ್ಣ ಮೇಲೆ ದೋಷಾರೋಪಣೆ ಸಲ್ಲಿಸಲಾಗಿತ್ತು. ಆರೋಪಿ ಬೈಕ್ ಮಾಲೀಕ ತನ್ನ ಬೈಕನ್ನು ಅಪ್ರಾಪ್ತ ವಯಸ್ಕ ಮಗನಿಗೆ ಚಾಲನೆಗೆ ನೀಡಿದ್ದಕ್ಕೆ 25 ಸಾವಿರ ರು.ದಂಡ ವಿಧಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆಗೆ ಕೊಡುವ ಪಾಲಕರು, ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ, ಇನ್ನೊಮ್ಮೆ ಇಂತಹದ್ದು ಮರುಕಳಿಸದಂತೆ ಎಚ್ಚರಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದಾರೆ.