ಸಾರಾಂಶ
ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣಮಲಪ್ರಭಾ ಪ್ರವಾಹಕ್ಕೆ ಸ್ಥಳಾಂತರಗೊಂಡ ನರಗುಂದ ಮತಕ್ಷೇತ್ರ ವ್ಯಾಪ್ತಿಯ ತಾಲೂಕಿನ ಬಿ.ಎಸ್. ಬೇಲೇರಿ ನವಗ್ರಾಮದಲ್ಲಿ ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದ್ದು, ಇಲ್ಲಿನ ನಿವಾಸಿಗಳು ಸಮಸ್ಯೆಗಳ ಮಧ್ಯದಲ್ಲಿಯೇ ಬದುಕು ದೂಡುತ್ತಿದ್ದಾರೆ. 2007 ಮತ್ತು 2009ರಲ್ಲಿ ಹಾಗೂ 2019ರಲ್ಲಿ ಸುರಿದ ಕುಂಭದ್ರೋಣ ಮಹಾಮಳೆಗೆ ಮಲಪ್ರಭಾ ನದಿ ಪಾತ್ರದಲ್ಲಿದ್ದ ತಾಲೂಕಿನ ಅಮರಗೋಳ ಗ್ರಾಪಂ ವ್ಯಾಪ್ತಿಯ ಬಿ. ಎಸ್. ಬೇಲೇರಿ ಗ್ರಾಮ ಜಲಾವೃತಗೊಂಡಿತ್ತು. ಹೀಗಾಗಿ ಈ ಗ್ರಾಮವನ್ನು ಸ್ಥಳಾಂತರಿಸಲು ಸರ್ಕಾರ ಮುಂದಾಯಿತು.
389 ಸೂರು ನಿರ್ಮಾಣ:ನೈನಾಪುರ ರಸ್ತೆಗೆ ಹೊಂದಿಕೊಂಡು 45 ಎಕರೆ ಪ್ರದೇಶದಲ್ಲಿ ಮೈಸೂರು ನಾಗರಿಕರ ವೇದಿಕೆ ಪುನರ್ವಸತಿ ಯೋಜನೆ, ಸುತ್ತೂರ ಮಠದ ಜೆಎಸ್ಸೆಸ್ ಮಹಾವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನೆರವಿನಿಂದ 389 ಸೂರು(ಮನೆ) ಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಅದುವೇ ನವಗ್ರಾಮವಾಗಿದೆ.389 ಮನೆಗಳಲ್ಲಿ 1ನೇ ಹಂತದಲ್ಲಿ 211 ಫಲಾನುಭವಿಗಳು, 2ನೇ ಹಂತದಲ್ಲಿ 108 ಫಲಾನುಭವಿಗಳು ಸೇರಿ ಒಟ್ಟು 319 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹೆಚ್ಚುವರಿಯಾಗಿ ಉಳಿದ 70 ಮನೆಗಳ ಹಂಚಿಕೆಯಲ್ಲಿ ಸೃಷ್ಟಿಯಾದ ಗೊಂದಲ ದಶಕಗಳ ಕಾಲ ಮುಂದುವರೆದು, ಅರ್ಹರಿಗೆ ಬಾಕಿ ಉಳಿದ ಮನೆಗಳನ್ನು ಕಲ್ಪಿಸುವಂತೆ ಸಂತ್ರಸ್ತರು ಬೀದಿಗಿಳಿದ ಹೋರಾಟ ನಡೆಸಿದ್ದು ಉಂಟು. 2019ರಲ್ಲಿ ಸುರಿದ ಮಳೆಯಿಂದಾಗಿ ಮತ್ತೆ ಮಲಪ್ರಭಾ ನದಿ ತುಂಬಿ ಹರಿದು ಬಿ.ಎಸ್. ಬೇಲೇರಿ ಜಲಾವೃತಗೊಂಡಿತು. ಈ ವೇಳೆ ಜನತೆ ಮತ್ತೆ ಸಾಕಷ್ಟು ಸಮಸ್ಯೆ ಎದುರಿಸಿದರು. ಆ ಬಳಿಕ ಎಚ್ಚೆತ್ತುಕೊಂಡ ಜನತೆ ನವಗ್ರಾಮದಲ್ಲಿ ವಾಸಿಸಲು ಮುಂದಾದರು.
ಮನೆ ಹಂಚಿಕೆ ವಿಚಾರದಲ್ಲಿ 2020 ಫೆಬ್ರವರಿಯಲ್ಲಿ ದಲಿತರು, ಸವರ್ಣಿಯರ ಮಧ್ಯೆ ಗಲಾಟೆ ನಡೆದು ಪೊಲೀಸ್ ಠಾಣೆವರೆಗೆ ಹೋಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಮನೆ ಹಂಚಿಕೆ ಸಮಸ್ಯೆಯನ್ನು ಕೊಂಚ ಮಟ್ಟಿಗೆ ಪರಿಹರಿಸಿತು. 76 ದಲಿತ ಕುಟುಂಬಗಳಿಗೆ ಒಂದೆಡೆ ನೆಲೆಸುವಂತೆ ವ್ಯವಸ್ಥೆ ಕಲ್ಪಿಸಲಾಯಿತು . ಇದರಿಂದ ದಲಿತ ಕುಟುಂಬಗಳ ಸಮಸ್ಯೆ ಇತ್ಯರ್ಥವಾಯಿತು. ಆದರೆ ಸವರ್ಣಿಯರಲ್ಲಿ ಹಕ್ಕುಪತ್ರ ವಿತರಣೆ ಹಾಗೂ ಮನೆಗಳ ಹಂಚಿಕೆಯಲ್ಲಿ ಈಗಲೂ ಗೊಂದಲ ಮುಂದುವರೆದಿದೆ. ಇದರಿಂದಾಗಿ ಶೇ. 25ರಷ್ಟು ಕುಟುಂಬಗಳು ಮೂಲಗ್ರಾಮದಲ್ಲಿವೆ. ಶೇ. 75ರಷ್ಟು ಕುಟುಂಬ ನವಗ್ರಾಮದಲ್ಲಿವೆ.ಸಮಸ್ಯೆಗಳ ಆಗರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ 2 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕಿತ್ತೊದ ರಸ್ತೆಗಳು, ಚರಂಡಿ ಇಲ್ಲ, ವಿದ್ಯುತ್ ವ್ಯವಸ್ಥೆಯಿಲ್ಲ. ಮಹಿಳೆಯರಿಗೆ ಶೌಚಾಲಯವಿಲ್ಲ. ಆಸರೆ ಮನೆಗಳಲ್ಲಿ ನಿರ್ಮಿಸಿದ ಶೌಚಾಲಯಗಳು ಬಿದ್ದು ಹೋಗಿವೆ. ಸ್ನಾನಗೃಹಗಳಿಲ್ಲ. ಜಾಲಿಕಂಟಿಗಳು ಬೆಳೆದಿದ್ದು ಹಾವು, ಚೇಳುಗಳ ಹೆಚ್ಚಾಗಿವೆ.
10ಕ್ಕೂ ಹೆಚ್ಚಿರುವ ರಸ್ತೆಗಳ ಪೈಕಿ ಕೇವಲ ಒಂದು ರಸ್ತೆಗೆ ಮಾತ್ರ 100 ಮೀಟರ್ ಸಿ.ಸಿ. ರಸ್ತೆ ಮಾಡಲಾಗಿದ್ದು, ಉಳಿದ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ. ಒಂದೂ ರಸ್ತೆಯ ಬದಿಗೂ ಚರಂಡಿ ನಿರ್ಮಿಸಿಲ್ಲ. ಇದರಿಂದ ಮನೆಗಳ ಗಲೀಜು ನೀರು ಹರಿಯದೆ ಒಂದಡೆ ನಿಲ್ಲುತ್ತಿದ್ದು, ಗಬ್ಬು ವಾಸನೆ, ಸೊಳ್ಳೆಕಾಟ ವಿಪರೀತವಾಗಿವೆ.ಪ್ರೌಢಶಾಲೆಗೆ ಕೊಠಡಿ ಕೊರತೆ:2011-12ರಲ್ಲಿ ಐ.ಡಿ.ಎಫ್ ಯೋಜನೆಯಡಿ ₹ 50 ಲಕ್ಷ ವೆಚ್ಚದಲ್ಲಿ 5 ಕೊಠಡಿಗಳುಳ್ಳ ಪ್ರೌಢಶಾಲಾ ಕಟ್ಟಡ ನಿರ್ಮಿಸಲಾಗಿದೆ. ಮೂಲ ಗ್ರಾಮದದಲ್ಲಿದ್ದ ಪ್ರೌಢಶಾಲೆಯನ್ನು 2020ರಲ್ಲಿ ನವಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ಶಾಲೆಯಲ್ಲಿ 117 ವಿದ್ಯಾರ್ಥಿಗಳಿದ್ದಾರೆ. ಶಾಲೆ ಕಾಂಪೌಂಡ್ ಇಲ್ಲ, ಸುತ್ತಲೂ ತಿಪ್ಪೆಗುಂಡಿಗಳನ್ನು ಹಾಕಲಾಗಿದೆ. ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲ. 5 ಲಕ್ಷ ರು. ವೆಚ್ಚದಲ್ಲಿ ಪಿಂಕ್ ಶೌಚಾಲಯ ನಿರ್ಮಿಸುತ್ತಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ತೀವ್ರ ಸಮಸ್ಯೆಯಾಗಿದೆ.
ಹೆಚ್ಚುವರಿ ಕೊಠಡಿ ನಿರ್ಮಿಸಬೇಕು. ಆಟದ ಮೈದಾನ ಅಭಿವೃದ್ಧಿಪಡಿಸಿ ಸುತ್ತಲೂ ಕಂಪೌಂಡ್ ನಿರ್ಮಿಸಬೇಕು. ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಒದಗಿಸಬೇಕು. ಹೆಣ್ಣು ಮಕ್ಕಳಿಗಾಗಿ ನಿರ್ಮಿಸಿದ ಪಿಂಕ್ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.ಬಾಡಿಗೆ ಮನೆಗಳಲ್ಲಿ ವಾಸ: ಹಕ್ಕುಪತ್ರ ಹಂಚಿಕೆ ಪೂರ್ಣಗೊಂಡಿಲ್ಲ. ಒಂದು ಕುಟುಂಬಕ್ಕೆ3 ಅಥವಾ 4 ಮನೆಗಳನ್ನು ವಿತರಿಸಲಾಗಿದೆ. ಇದರಿಂದ ಅರ್ಹರಿಗೆ ಈಗಲೂ ಮನೆಗಳು ಸಿಕ್ಕಿಲ್ಲ. ಈ ಪೈಕಿ ಕೆಲ ಕುಟುಂಬಗಳು ನವಗ್ರಾಮದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಮನೆ ಕೊಡದಿದ್ದರೂ ಕನಿಷ್ಠ ಪಕ್ಷ ಖಾಲಿ ನಿವೇಶನಗಳನ್ನಾದರೂ ಕೊಟ್ಟಲ್ಲಿ ಗುಡಿಸಲು ಹಾಕಿಕೊಂಡಾದರೂ ಜೀವನ ಸಾಗಿಸುತ್ತೇವೆ ಎನ್ನುತ್ತಿದ್ದಾರೆ ಆಸರೆ ಸೂರು ವಂಚಿತ ಕುಟುಂಬಗಳು.
ಶೌಚಾಲಯಗಳದ್ದೇ ಸಮಸ್ಯೆ: ಮನೆ ನಿರ್ಮಾಣ ಸಂದರ್ಭದಲ್ಲಿ ಮನೆಗೊಂದು ಶೌಚಾಲಯವನ್ನೇನು ನಿರ್ಮಿಸಲಾಗಿದ್ದು, ಆದರೆ ಅವುಗಳ ಬಳಕೆಗೆ ಬಾರದಂತಿವೆ. ದಶಕಗಳ ಕಾಲ ಬಳಕೆ ಇಲ್ಲದ್ದರಿಂದ ಬಹುತೇಕ ಶೌಚಾಲಯಗಳು ಕುಸಿದಿವೆ. ಶೌಚಾಲಯ ಸಮಸ್ಯೆಯಿಂದಾಗಿ ನವಗ್ರಾಮ ನಿವಾಸಿಗಳಿಗೆ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ.