ಯುವ ವಕೀಲರು ನಿರಂತರ ಅಧ್ಯಯನ ಮಾಡಬೇಕು

| Published : Jan 30 2025, 12:31 AM IST

ಸಾರಾಂಶ

ವಕೀಲರ ದಿನಾಚರಣೆ ನೆಪದಲ್ಲಿಯಾದರೂ ವಕೀಲರು ವೃತ್ತಿಯ ಪಾವಿತ್ರ್ಯತೆ ಕಾಪಾಡಲು ಪ್ರತಿಜ್ಞೆ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸಲು ಪ್ರತಿಯೊಬ್ಬರಲ್ಲೂ ಬದ್ಧತೆ ಮುಖ್ಯ. ಎಲ್ಲ ಕೆಲಸಗಳಿಗೆ ವಕೀಲರು ಬೇಕು. ಇದನ್ನು ಮನಗಂಡು ಯುವ ವಕೀಲರು ತಮ್ಮ ವೃತ್ತಿಯಲ್ಲಿ ಶ್ರದ್ಧೆಯನ್ನು ಉಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಕಲಿಕೆಗೆ ಸಾಕಷ್ಟು ಅವಕಾಶಗಳಿವೆ. ಯುವ ವಕೀಲರು ನಿರಂತರ ಅಧ್ಯಯನಶೀಲರಾದಾಗ ಮಾತ್ರವೇ ಉತ್ತಮ ನ್ಯಾಯವಾದಿಯಾಗಲು ಸಾಧ್ಯ. ಓದು, ಸಮಯ ಪಾಲನೆ, ಸಮರ್ಥ ವಾದ ಮಂಡನೆ ಮೂಲಕ ಕಕ್ಷಿದಾರರ ನಂಬಿಕೆ ಉಳಿಸಿಕೊಂಡಾಗ ಮಾತ್ರವೇ ವೃತ್ತಿಯ ಘನತೆ ಉಳಿಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರ ಭವಾನಿ ತಿಳಿಸಿದರು.

ವಕೀಲರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ದಿನಾಚರಣೆ ನೆಪದಲ್ಲಿಯಾದರೂ ವಕೀಲರು ವೃತ್ತಿಯ ಪಾವಿತ್ರ್ಯತೆ ಕಾಪಾಡಲು ಪ್ರತಿಜ್ಞೆ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸಲು ಪ್ರತಿಯೊಬ್ಬರಲ್ಲೂ ಬದ್ಧತೆ ಮುಖ್ಯ ಎಂದರು.

ಸಂಚಾರಿ ನಿಯಮ ಪಾಲಿಸಿ

ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ನಮ್ಮ ಬಳಿ ನ್ಯಾಯದಾನ ಕೋರಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸುವ ನಾವು ಧಾವಂತದಲ್ಲಿ ವೈಯಕ್ತಿಕ ಬದುಕು ಮತ್ತು ಜೀವನವನ್ನು ಮರೆಯುತ್ತಿದ್ದೇವೆ. ಎಲ್ಲರಿಗೂ ನ್ಯಾಯ ಕೊಡಿಸುವ ನಾವೇ ಅಪಘಾತಗಳಿಗೆ ಸಿಕ್ಕು ಪ್ರಾಣ ಕಳೆದುಕೊಂಡರೆ ನಮ್ಮ ಕುಟುಂಬ ಅನಾಥವಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕಾದರೆ ಸಮಯ ಪಾಲನೆಗೆ ಒತ್ತು ನೀಡಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಜೋಪಾನವಾಗಿ ವಾಹನ ಚಲಾಯಿಸಬೇಕಿದೆ ಎಂದರು.

ಹಿರಿಯ ವಕೀಲರಿಗೆ ಸನ್ಮಾನ

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಬಿ.ವಿ.ಶ್ರೀನಿವಾಸ್ ಮಾತನಾಡಿ, ಎಲ್ಲ ಕೆಲಸಗಳಿಗೆ ವಕೀಲರು ಬೇಕು. ಇದನ್ನು ಮನಗಂಡು ಯುವ ವಕೀಲರು ತಮ್ಮ ವೃತ್ತಿಯಲ್ಲಿ ಶ್ರದ್ಧೆಯನ್ನು ಉಳಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಸೇರಿದಂತೆ ಎಲ್ಲಾ ನ್ಯಾಯಾಧೀಶರು, ವಕೀಲರ ಸಂಘದ ನೂತನ ಆಡಳಿತ ಮಂಡಳಿ, ರಾಜ್ಯ ವಕೀಲರ ಪರಿಷತ್ ಸದಸ್ಯ ಹರೀಶ್, ಮತ್ತಿತರರು ಇದ್ದರು.