ಶಾಲೆಗಳಲ್ಲಿ ಸ್ವಚ್ಚತೆ ಕಾಪಾಡದಿದ್ದರೆ ಕ್ರಮ

| Published : Feb 10 2024, 01:49 AM IST

ಶಾಲೆಗಳಲ್ಲಿ ಸ್ವಚ್ಚತೆ ಕಾಪಾಡದಿದ್ದರೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ನಗರವಲಯದಲ್ಲಿ ಶೌಚಾಲಯಗಳು ಅವಶ್ಯಕತೆ ಇರುವ ಶಾಲೆಗಳನ್ನು ಪಟ್ಟಿಮಾಡಬೇಕು. ಪ್ರತಿ ಶಾಲೆ ವಿದ್ಯುತ್‌ ಸೌಕರ್ಯ ಹೊಂದಿರಬೇಕು.

ಕನ್ನಡಪ್ರಭ ವಾರ್ತೆ ಬೆಳಗಾವಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಹಾಗೂ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಲಾಗುವುದು. ಈ ಸಂದರ್ಭದಲ್ಲಿ ಶೌಚಾಲಯ ಹಾಗೂ ಮೂತ್ರಾಲಗಳಲ್ಲಿ ಅಸ್ವಚ್ಛತೆ ಕಂಡುಬಂದಲ್ಲಿ ಸಂಬಂಧಿಸಿದ ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಎಚ್ಚರಿಕೆ ನೀಡಿದರು.

ನಗರದ ಡಿಡಿಪಿಐ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ನಗರವಲಯದಲ್ಲಿ ಶೌಚಾಲಯಗಳು ಅವಶ್ಯಕತೆ ಇರುವ ಶಾಲೆಗಳನ್ನು ಪಟ್ಟಿಮಾಡಬೇಕು. ಪ್ರತಿ ಶಾಲೆ ವಿದ್ಯುತ್‌ ಸೌಕರ್ಯ ಹೊಂದಿರಬೇಕು. ವಿದ್ಯುತ್‌ ಸೌಲಭ್ಯವಿಲ್ಲದಿದ್ದಲ್ಲಿ ಅಂತಹ ಶಾಲೆಗಳ ಪಟ್ಟಿ ತಯಾರಿಸಿ ಹೆಸ್ಕಾಂ ಅಧಿಕಾರಿಗಳಿಗೆ ನೀಡಬೇಕು ಎಂದು ಸೂಚಿಸಿದರು.

ಶಾಲೆಗಳಲ್ಲಿರುವ ಡೆಸ್ಕಗಳ ಸಂಖ್ಯೆ ಪರಿಶೀಲಿಸಿ ಹೆಚ್ಚಾಗಿರುವ ಶಾಲೆಗಳಿಂದ ಅವಶ್ಯಕತೆ ಇರುವ ಶಾಲೆಗಳಿಗೆ ಹಸ್ತಾಂತರಿಸುವ ಕಾರ್ಯವನ್ನು ಬಿ.ಆರ್.ಸಿ.ಗಳು ಒಳಗೊಂಡ ತಂಡ ರಚಿಸಿಕೊಂಡು ಅಭಿಯಾನ ನಡೆಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪೂರ್ವತ ಯಾರಿ ನಡೆಸಬೇಕು. ಕಡಿಮೆ ಫಲಿತಾಂಶ ಬಂದ ವಿಷಯಕ್ಕೆ ಹೆಚ್ಚುಒತ್ತು ನೀಡಿ, ಮಕ್ಕಳ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಪದವಿ ಪೂರ್ವ ಉಪನಿರ್ದೇಶಕ ಕಾಂಬಳೆ, ಬೆಳಗಾವಿ ಹಾಗೂ ಚಿಕ್ಕೋಡಿಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ, ಡಿಡಿಪಿಐ ಎಸ್. ಡಿ, ಗಾಂಜಿ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಬಿ.ಎಚ್.ಮಿಲ್ಲಾನಟ್ಟಿ ಹಾಗೂ ಬೆಳಗಾವಿ ,ಚಿಕ್ಕೋಡಿಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.