ಸಾರಾಂಶ
ಹಿಂದಿನಿಂದಲೂ ಕಳಪೆ ಗುಣಮಟ್ಟದ ಬೇವಿನ ಹಿಂಡಿ, ಗೊಬ್ಬರ, ಕ್ರಿಮಿನಾಶಕ ಬಗ್ಗೆ ರೈತರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಅಂತಹ ದೂರು, ಆರೋಪಗಳು ಪುನರಾವರ್ತನೆ ಆಗದಂತೆ, ಗುಣಮಟ್ಟದ ವಸ್ತುಗಳ ಪೂರೈಸುವ ಕೆಲಸ ಗುತ್ತಿಗೆ ಪಡೆದ ಸಂಸ್ಥೆ, ಮಾಲೀಕರು ಮಾಡಬೇಕು.
ವಿಚಾರ ಸಂಕಿರಣದಲ್ಲಿ ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆತೆಂಗು ಬೆಳೆಗಾರರಿಗೆ ಕಳಪೆ ಮಟ್ಟದ ಕ್ರಿಮಿನಾಶಕ, ಬೇವಿನ ಹಿಂಡಿ, ಮೈಕ್ರೋ ಗೊಬ್ಬರ ಪೂರೈಸಿದ್ದು ನನ್ನ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಸಿದ್ದಾರೆ.
ನಗರದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸೋಮವಾರ 2023-24ನೇ ಸಾಲಿನ ತೆಂಗು ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತ ತರಬೇತಿ, ವಿಚಾರ ಸಂಕಿರಣದಲ್ಲಿ ಮಾತನಾಡಿ ರಾಜ್ಯದಲ್ಲಿ ತೆಂಗು ಇಳುವರಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ತೆಂಗು ಬೆಳೆಯುವ ರೈತರ ಒಂದು ಎಕರೆಗೆ 17 ಸಾವಿರ ರು. ವೆಚ್ಚದ ಕ್ರಿಮಿನಾಶಕ, ಬೇವಿನ ಹಿಂಡಿ, ಗೊಬ್ಬರ ಪೂರೈಸುವ ಗುತ್ತಿಗೆ ನೀಡಿದೆ. ಹಿಂದಿನಿಂದಲೂ ಕಳಪೆ ಗುಣಮಟ್ಟದ ಬೇವಿನ ಹಿಂಡಿ, ಗೊಬ್ಬರ, ಕ್ರಿಮಿನಾಶಕ ಬಗ್ಗೆ ರೈತರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಅಂತಹ ದೂರು, ಆರೋಪಗಳು ಪುನರಾವರ್ತನೆ ಆಗದಂತೆ, ಗುಣಮಟ್ಟದ ವಸ್ತುಗಳ ಪೂರೈಸುವ ಕೆಲಸ ಗುತ್ತಿಗೆ ಪಡೆದ ಸಂಸ್ಥೆ, ಮಾಲೀಕರು ಮಾಡಬೇಕು ಎಂದು ಸೂಚಿಸಿದರು.ದಾವಣಗೆರೆ ತಾಲೂಕಿನ ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಅಧಿಕಾರಿಗಳೂ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು. ಜಮೀನಿನ ಬದುಗಳಲ್ಲಿ, ಒಂದೋ, ಎರಡೋ ಎಕರೆ ಜಮೀನುಗಳಲ್ಲಿ ತೆಂಗು ಬೆಳೆದು, ಬೇರೆ ಬೇರೆ ಬೆಳೆಗಳ ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಲಾಭ ಪಡೆಯಬಹುದು ಎಂದು ತಿಳಿಸಿದರು.
ಜಮೀನಿನ ಬದುಗಳಲ್ಲಿ ಕಲ್ಪವೃಕ್ಷವಾದ ತೆಂಗು ಬೆಳೆದು ರೈತರು ಆರ್ಥಿಕವಾಗಿ ಸಬಲರಾಗಬೇಕು. ಜನರ ಆರೋಗ್ಯಕ್ಕೂ ತೆಂಗು ಉಪಕಾರಿ. ಅನಾರೋಗ್ಯಕ್ಕೆ ತುತ್ತಾದವರು, ಉತ್ತಮ ಆರೋಗ್ಯ ಹೊಂದಲಿಚ್ಛಿಸುವವರು ಇಂದಿಗೂ ತೆಂಗನ್ನು ಅವಲಂಬಿಸಿದ್ದಾರೆಯೇ ಹೊರತು, ಬಾಟಲುಗಳಲ್ಲಿ ಬರುವ ಬಣ್ಣ ಬಣ್ಣದ ತಂಪು ಪಾನೀಯಗಳನ್ನಲ್ಲ. ಪ್ರಕೃತಿಯ ಕೊಡುಗೆಯಾದ ಎಳನೀರು ಪ್ರತ್ಯಕ್ಷ ಅಮೃತವಿದ್ದಂತೆ ಎಂದು ಕೆ.ಎಸ್.ಬಸವಂತಪ್ಪ ಹೇಳಿದರು.ತೋಟಗಾರಿಕೆ ಉಪ ನಿರ್ದೇಶಕಿ ರೇಷ್ಮಾ ಪರ್ವೀನ್, ಇಲಾಖೆ ಅಧಿಕಾರಿಗಳು, ಮಾಯಕೊಂಡ ಕ್ಷೇ್ತರದ ರೈತರು, ತೆಂಗು ಬೆಳೆಗಾರರು ಇದ್ದರು. ಇದೇ ವೇಳೆ ಅರ್ಹ ರೈತರಿಗೆ ಬೇವಿನ ಹಿಂಡಿ, ಮೈಕ್ರೋ ಗೊಬ್ಬರ, ಕ್ರಿಮಿನಾಶಕವನ್ನು ತೋಟಗಾರಿಕೆ ಇಲಾಖೆಯಿಂದ ಶಾಸಕ ಕೆ.ಎಸ್.ಬಸವಂತಪ್ಪ ವಿತರಿಸಿದರು.