ಹೊಳೆನರಸೀಪುರದ 23 ವಾರ್ಡ್‌ಗಳಲ್ಲೂ ಬೀದಿನಾಯಿಗಳ ಹಾವಳಿ

| Published : Jan 08 2025, 12:16 AM IST

ಹೊಳೆನರಸೀಪುರದ 23 ವಾರ್ಡ್‌ಗಳಲ್ಲೂ ಬೀದಿನಾಯಿಗಳ ಹಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ೨೩ ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು, ವಯೋವೃದ್ಧರು ವಾಯುವಿಹಾರಕ್ಕೆ ತೆರಳುವ ನಾಗರಿಕರು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಧನುರ್ಮಾಸ ವ್ರತಾಚಾರಣೆ ಮಾಡುವ ಭಕ್ತರು, ಸಾರ್ವಜನಿಕರು ತಿರುಗಾಡಲು ಹಾಗೂ ದ್ವಿಚಕ್ರ ವಾಹನಗಳ ಸವಾರರು ಜೀವ ಭಯದ ಸಂಕಷ್ಟದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂರನಹಳ್ಳಿಯಲ್ಲಿ ಬಾಲಾಜಿ ಎಂಬುವರ ಮನೆಯ ಕೊಟ್ಟಿಗೆಯಲ್ಲಿದ್ದ ಕುರಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿದೆ ಮತ್ತು ಆಶ್ರಯ ಬಡಾವಣೆಯಲ್ಲಿ ಬಾಲಕನೋರ್ವನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕ ರಕ್ಷಣೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ೨೩ ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು, ವಯೋವೃದ್ಧರು ವಾಯುವಿಹಾರಕ್ಕೆ ತೆರಳುವ ನಾಗರಿಕರು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಧನುರ್ಮಾಸ ವ್ರತಾಚಾರಣೆ ಮಾಡುವ ಭಕ್ತರು, ಸಾರ್ವಜನಿಕರು ತಿರುಗಾಡಲು ಹಾಗೂ ದ್ವಿಚಕ್ರ ವಾಹನಗಳ ಸವಾರರು ಜೀವ ಭಯದ ಸಂಕಷ್ಟದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಪೇಟೆ ಮುಖ್ಯ ರಸ್ತೆ, ಸೀತವಿಲಾಸ ರಸ್ತೆ, ಕೋಟೆ ರಥ ಬೀದಿ, ಆರ್‍ಯ ಈಡಿಗರ ಬೀದಿ, ಚಿಟ್ಟನಹಳ್ಳಿ ಬಡಾವಣೆ, ಅರಕಲಗೂಡು ರಸ್ತೆಯ ಹೆದ್ದಾರಿ, ಹೇಮಾವತಿ ಬಡಾವಣೆ, ರಿವರ್ ಬ್ಯಾಂಕ್ ರಸ್ತೆ, ಶಿಯಾ ಹಾಗೂ ಸುನ್ನಿ ಮೊಹಲ್ಲಾ, ಗಾಂಧಿನಗರ, ದಾಸಗೌಡರ ಬೀದಿ, ಡಾ. ಅಂಬೇಡ್ಕರ್ ನಗರ, ಆಶ್ರಯ ಬಡಾವಣೆ, ನರಸಿಂಹನಾಯಕನಗರ, ಗಾಂಧಿನಗರ ಹಾಗೂ ಇತರೆ ಬಡಾವಣೆಗಳು, ಪಟ್ಟಣದ ನೇಕಾರ ದೇವಾಂಗಶೆಟ್ಟಿ ಜನಾಂಗದವರು, ಕುರುಹಿನಶೆಟ್ಟಿ ಜನಾಂಗದವರು ಹಾಗೂ ಮಡಿವಾಳ ಜನಾಂಗದವರ ಶ್ರೀ ರಾಮಮಂದಿರದ ಭಜನಾ ಮಂಡಳಿ ಸದಸ್ಯರು ಹಾಗೂ ಭಕ್ತರು ಧನುರ್ಮಾಸದ ವ್ರತಾಚರಣೆ ಅಂಗವಾಗಿ ಸಂಪ್ರದಾಯದ ಪಾಲನೆ ಹಾಗೂ ಪೂರ್ವಿಕರ ಆಚರಣೆಯಂತೆ ಪ್ರತಿನಿತ್ಯ ಭಜನೆ ಮಾಡುತ್ತಾ ರಸ್ತೆಗಳಲ್ಲಿ ಸಾಗುತ್ತಾರೆ ಮತ್ತು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ನದಿಯಲ್ಲಿ ಸ್ನಾನಕ್ಕೆ ತೆರಳಿ ದೇವಾಲಯದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ, ಇತರೆ ದೇವಾಲಯಗಳಿಗೆ ಸಾಗುತ್ತಾರೆ. ಆ ಸಂದರ್ಭದಲ್ಲಿ ನಾಯಿಗಳು ಮಾಡುವ ಗಲೀಜು(ಮಲ ಮೂತ್ರಿ ವಿಸರ್ಜನೆ) ಬರಿಗಾಲಿನಲ್ಲಿ ವ್ರತಾಚಾರಣೆ ಮಾಡುವ ಭಕ್ತರಿಗೆ ಮಾನಸಿಕ ಹಿಂಸೆ ನೀಡುತ್ತಿದೆ ಹಾಗೂ ಶ್ವಾನಗಳ ಹಾವಳಿ ಮಿತಿಮೀರಿದ್ದು, ಶಾಲಾ ಮಕ್ಕಳು ರಸ್ತೆಯಲ್ಲಿ ಭಯದಲ್ಲೇ ಓಡಾಡಬೇಕಿದೆ.

ಮಂಗಳವಾರ ಬೆಳಗ್ಗೆ ವಾರ್ಡ್ ಒಂದಕ್ಕೆ ಸೇರಿದ ಸೂರನಹಳ್ಳಿಯಲ್ಲಿ ಬಾಲಾಜಿ ಎಂಬುವರ ಮನೆಯ ಕೊಟ್ಟಿಗೆಯಲ್ಲಿದ್ದ ಕುರಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿದೆ ಮತ್ತು ಆಶ್ರಯ ಬಡಾವಣೆಯಲ್ಲಿ ಬಾಲಕನೋರ್ವನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕ ರಕ್ಷಣೆ ಮಾಡಲಾಗಿತ್ತು. ಪುರಸಭೆ ವ್ಯಾಪ್ತಿಯಲ್ಲಿ ನಾಯಿಗಳು ಕಚ್ಚುವುದು ಮತ್ತು ಚಿಕಿತ್ಸೆ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ, ಜತೆಗೆ ಬೀದಿ ನಾಯಿಗಳು ದಾಳಿ ನಡೆಸಲು ಪ್ರಾರಂಭಿಸಿದ್ದು, ಇದು ನಾಗರಿಕರನ್ನು ಜೀವ ಭಯದಲ್ಲಿ ಸಿಲುಕಿಸಿದೆ. ಬೀದಿ ನಾಯಿಗಳ ಹಾವಳಿ ಹಾಗೂ ಸಮಸ್ಯೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಣಿದಯ ಸಂಘದವರ ವಿಶೇಷ ಕಾಳಜಿ ಹಾಗೂ ಕಾನೂನಿನ ನೆಪ ಹೇಳಿ ನುಣಚಿಕೊಳ್ಳಲು ಯತ್ನಿಸುವ ಜನಪ್ರತಿನಿಧಿಗಳು ಬೀದಿ ನಾಯಿಗಳ ಸಮಸ್ಯೆಯಿಂದ ಪಾರು ಮಾಡುವಂತೆ ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ. *ಹೇಳಿಕೆ-1

ಪಟ್ಟಣದಲ್ಲಿ ನಾಯಿಗಳ ಹಾವಳಿಯಿಂದ ನೆಮ್ಮದಿ ಇಲ್ಲದಂತಾಗಿದ್ದು, ಶಾಲೆಗಳಿಗೆ ಹೋಗಲು ಹಾಗೂ ಅಂಗಡಿಗಳಿಂದ ಪದಾರ್ಥಗಳನ್ನು ತರಲು ಮಕ್ಕಳು ಹೆದರಿಕೆಯಿಂದ ಹೋಗಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡು, ನಾಯಿಗಳ ಹಾವಳಿಯಿಂದ ನಮ್ಮನ್ನು ಪಾರಮಾಡಬೇಕು. ಎಚ್.ಟಿ.ರವಿ, ವರ್ತಕ (7ಎಚ್ಎಸ್ಎನ್5ಬಿ)ಹೇಳಿಕೆ-2

ಪಟ್ಟಣದಲ್ಲಿ ಪ್ರತಿದಿನ ಪತ್ರಿಕೆಗಳನ್ನು ವಿತರಿಸಲು ಬಹಳ ಕಷ್ಟವಾಗುತ್ತಿದೆ. ಯಾವುದೇ ಬಡಾವಣೆಗೆ ಹೋದರೂ ಮುಂಜಾನೆ ನಾಯಿಗಳದೇ ಕಾಟ, ನಾಯಿ ರಸ್ತೆಗೆ ಒಮ್ಮೆಗೇ ಅಡ್ಡ ಬಂದಾಗ ಕೆಳಗೆ ಬಿದ್ದು, ಚಿಕಿತ್ಸೆ ಪಡೆದಿದ್ದೇನೆ. ನಮಗೆ(ವಿತರಕರಿಗೆ) ಪ್ರತಿನಿತ್ಯ ಪ್ರತಿಯೊಂದು ರಸ್ತೆಗಳಲ್ಲೂ ನಾಯಿಗಳ ಸಮಸ್ಯೆ ಕಾಡುತ್ತಿದೆ. ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಂಡು ಸುಲಲಿತವಾಗಿ ನಾವುಗಳು ಪತ್ರಿಕೆ ವಿತರಣೆಗೆ ಅವಕಾಶ ಕಲ್ಪಿಸಬೇಕೆಂದು ವಿನಂತಿಸುತ್ತೇವೆ. ಮೋಹನ್ ಕುಮಾರ್, ಪತ್ರಿಕೆ ಏಜೆಂಟ್ ಹಾಗೂ ವಿತರಕ (7ಎಚ್ಎಸ್ಎನ್5ಸಿ)