ಸಾರಾಂಶ
ಧರ್ಮ-ಧರ್ಮಗಳ ನಡುವೆ ಆಚರಣೆ ಬೇರೆ-ಬೇರೆಯಾದರೂ ಅದು ಹೇಳುವ ನೀತಿ ಮಾನವ ಕಲ್ಯಾಣವೇ ಆಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬೆಳೆಸುವುದೇ ಧರ್ಮದ ಮೂಲ ಉದೇಶ ಎಂದು ಯಳನಾಡು ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಕಸಬಾ ಹೋಬಳಿ ಹಬ್ಬನಘಟ್ಟ ಗ್ರಾಮದ ಶ್ರೀ ರಾಮಮಂದಿರ ದೇವಾಲಯದ ಲೋಕಾರ್ಪಣೆ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಧರ್ಮ-ಧರ್ಮಗಳ ನಡುವೆ ಆಚರಣೆ ಬೇರೆ-ಬೇರೆಯಾದರೂ ಅದು ಹೇಳುವ ನೀತಿ ಮಾನವ ಕಲ್ಯಾಣವೇ ಆಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬೆಳೆಸುವುದೇ ಧರ್ಮದ ಮೂಲ ಉದೇಶ ಎಂದು ಯಳನಾಡು ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಕಸಬಾ ಹೋಬಳಿ ಹಬ್ಬನಘಟ್ಟ ಗ್ರಾಮದ ಶ್ರೀ ರಾಮಮಂದಿರ ದೇವಾಲಯದ ಲೋಕಾರ್ಪಣೆ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಗತ್ತಿನ ಎಲ್ಲ ಧರ್ಮಗಳು ಶಾಂತಿಯನ್ನು ಸಾರಿದ್ದಾವೆಯೇ ಹೊರತು ಸಂಘರ್ಷವನ್ನಲ್ಲ. ಯಾವುದೇ ಧರ್ಮ ಪ್ರಜೋದನೆಯನ್ನು ನೀಡುವುದಿಲ್ಲ ಆದರೆ ಧರ್ಮದ ಹೆಸರಿನಲ್ಲಿ ಹಿಂಸೆ ನೀಡಿ ಆತಂಕವನ್ನು ಸೃಷ್ಠಿ ಮಾಡಬಾರದು, ಇದು ಅನೇಕ ಶರಣರು, ಸಂತರು,ದಾಸರು,ಧರ್ಮಾಚಾರ‍್ಯರ ಅನಿಸಿಕೆಯಾಗಿದೆ ಎಂದರು.
ಮನುಷ್ಯ ಕೊಟ್ಟಿದ್ದು ಮನೆ ತನಕ, ದೇವರು ಕೊಟ್ಟಿದ್ದು ಕೊನೆ ತನಕ. ದೇವರು ಕೊಟ್ಟಿದ್ದು ಸಾಮಾನ್ಯ ಕೊಡುಗೆಯಲ್ಲ. ಬಹುದೊಡ್ಡ ಕೊಡುಗೆ. ಇಷ್ಟೆಲ್ಲ ಕೊಡುಗೆ ನೀಡಿದ ಭಗವಂತನನ್ನು ದಿನದ ೨೪ ಘಂಟೆಗಳಲ್ಲಿ ಒಂದೆರೆಡು ನಿಮಿಷ ಸ್ಮರಣೆ ಮಾಡದಿದ್ದಲ್ಲಿ ಮಾನವನಾಗಿ ಹುಟ್ಟಿ ಬಂದಿದ್ದರೂ ಕೂಡ ಜೀವನ ಸಾರ್ಥಕ ಪಡೆಯುವುದಿಲ್ಲ. ನೀವು ನಂಬಿದ ಯಾವುದೇ ದೈವವಿರಲಿ ಅದಕ್ಕೆ ಅಚಲ ವಿಶ್ವಾಸ ,ಭಯ, ಭಕ್ತಿ ಅರ್ಪಿಸಬೇಕೆಂದು ಹೇಳಿದರು.ತಮ್ಮಡಿಹಳ್ಳಿ ವೀರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿ, ದೇವರು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಜಾತಿ ಬೇಧವಿಲ್ಲ ಎನ್ನುವುದನ್ನು ಮಹಾಕವಿ ಹರಿಹರ ಮಾದಾರ ಚನ್ನಯ್ಯ, ಕೋಳೂರು ಕೊಡಗೂಸಿನ ರಗಳೆಯಲ್ಲಿ ಸಾಬೀತಾಗಿದೆ. ಪೂಜೆ, ಪುನಸ್ಕಾರಗಳ ಜತೆಗೆ ಪಂಚಭೂತಗಳಲ್ಲಿ ದೈವೀ ಸಾಕ್ಷಾತ್ಕಾರ ಕಂಡುಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವೆಂದರೆ ತಪ್ಪಾಗಲಾರದು. ಪಾಲಕರು ಹಾಗೂ ಗುರು,ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಮೂಲಕ ಭವಿಷ್ಯ ರೂಪಿಸುವ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಹೇಳಿದರು.ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಂಬಿರುವ ಜನರು ಸಕಲ ವೈಭೋಗದ ಶ್ರೀಮಂತಿಕೆಯನ್ನು ತೊರೆದು ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಭಾರತದ ಕಡೆಗೆ ಬರುತ್ತಿದ್ದು, ಹರೇ ರಾಮ ಹರೇ ಕೃಷ್ಣ ಎಂದು ಭಗವಂತನ ಧ್ಯಾನವನ್ನು ಮಾಡುತ್ತಿರುವುದು ಕಾಣುತ್ತಿದ್ದೇವೆ. ದೇವನೊಬ್ಬ ನಾಮ ಹಲವು ಎನ್ನುವ ವಿಶಾಲ ಹಾಗೂ ವೈವಿಧ್ಯಮಯ ಸಂಸ್ಕೃತಿಯಲ್ಲಿಯೇ ಎಕತೆಯನ್ನು ಕಾಣುತ್ತಿರುವ ನಮಗೆ ರಾಮಾಯಣ ಹಾಗೂ ಮಹಾಭಾರತ ಮಹಾನ್ ಗ್ರಂಥಗಳೇ ಪ್ರೇರಣೆ ನೀಡುತ್ತಿದ್ದು, ಧರ್ಮದ ಆಚರಣೆಯಿಂದಲ್ಲೇ ಮನುಷ್ಯ ತನ್ನ ಬದುಕಿನಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯ ಎಂದರು.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪುಷ್ಪಗಿರಿ ಮಹಾಸಂಸ್ಥಾನ ಮಠ, ಜಯಚಂದ್ರ ಶೇಖರ ಮಹಾಸ್ವಾಮಿ ಕೇದಿಗೆ ಮಠ ಕೊಳಗುಂದ, ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿ, ವಿಶ್ವಕರ್ಮ ಜಗದ್ಗುರು ಮಠ ಅರೆಮಾದನಹಳ್ಳಿ, ಶ್ರೀ ಶಿವಶಂಕರ ಶಿವಯೋಗಿ ಮಹಾಸ್ವಾಮಿಗಳು ಕಲ್ಮುರುಡೇಶ್ವರ ತಪೋವನ ಕರಡಿಗವಿಮಠ ಹಾಗೂ ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.