ಅಂಬೇಡ್ಕರ ಭವನಗಳು ಈಗ ಗ್ರಂಥಾಲಯಗಳು

| Published : Jan 16 2024, 01:45 AM IST

ಸಾರಾಂಶ

ಚಡಚಣ ತಾಲೂಕಿನ ಎಲ್ಲ 42 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಪ್ರತಿ ಗ್ರಾಮದಲ್ಲಿನ ಅಂಬೇಡ್ಕರ ಭವನಗಳನ್ನು ಬಳಕೆ ಮಾಡಿಕೊಂಡು ಅವುಗಳನ್ನು ಗ್ರಂಥಾಲಯ ರೂಪಕ್ಕೆ ಪರಿವರ್ತನೆ ಮಾಡಿ, ಪ್ರತಿ ಗ್ರಂಥಾಲಯಕ್ಕೆ ವಿಶ್ವಜ್ಞಾನಿ ಡಾ.ಬಿ.ಆರ್‌.ಅಂಬೇಡ್ಕರ ಸಾರ್ವಜನಿಕ ಗ್ರಂಥಾಲಯ ಎಂಬ ಹೆಸರು ಇಡಲಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಅಂಬೇಡ್ಕರ ಭವದಲ್ಲಿ ಗ್ರಂಥಾಲಯಗ್ರಾಮೀಣ ಪ್ರದೇಶದಲ್ಲಿನ ಯುವ ಸಮೂಹಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯವಾಗುವ, ಹಾಗೂ ರಾಷ್ಟ್ರ ನಾಯಕರ ಜೀವನ ಚರಿತ್ರೆಯ ಪುಸ್ತಕಗಳು ಓದುವುದರ ಮೂಲಕ ಬದುಕು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚಡಚಣ ತಾಲೂಕಿನ ಪ್ರತಿ ಗ್ರಾಮದಲ್ಲಿನ ಅಂಬೇಡ್ಕರ ಭವನಗಳು ಗ್ರಂಥಾಲಯಗಳಾಗಿ ಪರಿವರ್ತೆಯಾಗಿವೆ.

ಮಕ್ಕಳನ್ನು ಹಾಗೂ ಯುವ ಸಮುದಾಯ, ಶಾಲೆ, ಕಾಲೇಜು ವಿದ್ಯಾರ್ಥಿಗಳನ್ನು ಓದಿನತ್ತ ಕರೆತರಲು ಗ್ರಂಥಾಲಯಗಳ ಪಾತ್ರ ಬಹುಮುಖ್ಯ ಎನ್ನುವ ಸದಾಶೆಯೊಂದಿಗೆ ಚಡಚಣ ತಾಲೂಕಿನ ಎಲ್ಲ 42 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಪ್ರತಿ ಗ್ರಾಮದಲ್ಲಿನ ಅಂಬೇಡ್ಕರ ಭವನಗಳನ್ನು ಬಳಕೆ ಮಾಡಿಕೊಂಡು ಅವುಗಳನ್ನು ಗ್ರಂಥಾಲಯ ರೂಪಕ್ಕೆ ಪರಿವರ್ತನೆ ಮಾಡಿ, ಪ್ರತಿ ಗ್ರಂಥಾಲಯಕ್ಕೆ ವಿಶ್ವಜ್ಞಾನಿ ಡಾ.ಬಿ.ಆರ್‌.ಅಂಬೇಡ್ಕರ ಸಾರ್ವಜನಿಕ ಗ್ರಂಥಾಲಯ ಎಂಬ ಹೆಸರು ಇಡಲಾಗಿದೆ. ಚಡಚಣ ತಾಲೂಕು 13 ಗ್ರಾಮ ಪಂಚಾಯಿತಿಗಳನ್ನು ಹೊಂದಿದ್ದು, 42 ಗ್ರಾಮಗಳನ್ನು ಒಳಗೊಂಡಿದೆ. ಕಳೆದ ವರ್ಷ 13 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಿದರೆ, ಪ್ರಸಕ್ತ ವರ್ಷದಲ್ಲಿ 29 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಲು ಕ್ರೀಯಾಯೋಜನೆ ರೂಪಿಸಲಾಗಿದ್ದು, ಪ್ರತಿ ಗ್ರಂಥಾಲಯಕ್ಕೆ ಖುರ್ಚಿ, ಟೆಬಲ್‌, ಸ್ಪಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ರಾಷ್ಟ್ರ ನಾಯಕರ ಜೀವನ ಚರಿತ್ರೆ, ಮಕ್ಕಳ ಪುಸ್ತಕ, ಕಥೆ, ಕಾದಂಬರಿಗಳನ್ನು ಒದಗಿಸಲಾಗಿದೆ. ಪ್ರತಿ ಗ್ರಂಥಾಲಯಕ್ಕೆ 2 ಲಕ್ಷ ಅನುದಾನದ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. 2022-23 ನೇ ಸಾಲಿನ ಅಭಿವೃದ್ಧಿ ಅನುದಾನದಲ್ಲಿ ಈ ಯೋಜನೆ ಹಾಕಿಕೊಂಡಿದ್ದು, ಪಜಾ, ಪಪಂ ದ ಜನರ ಅನುದಾನ ಸದ್ಭಳಕೆಯಾಗಬೇಕು ಎಂಬ ಉದ್ದೇಶದಿಂದ ವಿಶ್ವಜ್ಞಾನಿ ಡಾ.ಬಿ.ಆರ್‌.ಅಂಬೇಡ್ಕರ ಸಾರ್ವಜನಿಕ ಗ್ರಂಥಾಲಯ ಆರಂಭಿಸಿ,ಯುವ ಸಮೂಹಕ್ಕೆ ಜ್ಞಾನದ ಸುಧೆ ಉಣಬಡಿಸಲು ಶ್ರಮಿಸಿದ್ದು,ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಂಬೇಡ್ಕರ ಭವನಗಳು ಉಪಯೋಗಕ್ಕೆ ಬಾರದೆ, ಹಾಳಾಗುತ್ತಿರುವುದನ್ನು ತಡೆಯುವ ಉದ್ದೇಶದಿಂದ ಅವುಗಳನ್ನು ಗ್ರಂಥಾಲಯಕ್ಕೆ ಆಯ್ಕೆ ಮಾಡಿಕೊಂಡಿದ್ದು, ಇದರಿಂದ ಅಂಬೇಡ್ಕರ ಭವನಗಳಿಗೆ ಮೆರಗು ಬಂದಿದೆ. ಸಾಹಿತಿಗಳು,ಶರಣರು,ಸಂತರ ಸಂದೇಶಗಳು, ವಚನಗಳು, ವಿಜ್ಞಾನ, ತಂತ್ರಜ್ಞಾನ, ಸಾಂಸ್ಕೃತಿಕ ಸೌರಭ, ನಾಡಿನ ಹಿರಿಮೆ ತಿಳಿಸುವ ಪುಸ್ತಕಗಳು ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ.

ಅಂಬೇಡ್ಕರ್ ಭವನಗಳಿಗೆ ಗ್ರಂಥಾಲಯದ ರೂಪ ಕೊಟ್ಟವರು ಚಡಚಣ ತಾಪಂ ಪ್ರಭಾರ ಇಒ ಹಾಗೂ ಇಂಡಿ ತಾಪಂ ನರೇಗಾ ಸಹಾಯಕ ನಿರ್ದೇಶಕ ಸಂಜಯ ಖಡಗೆಕರ. ಇವರು ಚಡಚಣ ತಾಲೂಕಿನ ಪ್ರತಿ ಗ್ರಾಮದಲ್ಲಿನ ಅಂಬೇಡ್ಕರ ಭವನಗಳನ್ನು ಗ್ರಂಥಾಲಯಗಳಾಗಿ ಪರಿವರ್ತನೆ ಮಾಡುವುದರ ಮೂಲಕ ಜಿಲ್ಲೆಗೆ ಮಾದರಿ ಎನಿಸಿಕೊಂಡಿದ್ದು, ಜನಸ್ನೇಹಿ ಗ್ರಂಥಾಲಯಗಳನ್ನು ಆರಂಭಿಸಿದ್ದಾರೆ.

ಕೊಟ್‌:ಹಿರಿಯ ಅಧಿಕಾರಿಗಳು ಹಾಗೂ ತಾಪಂ ಸಹದ್ಯೋಗಿಗಳ ಸಹಕಾರ, ಮಾರ್ಗದರ್ಶನದಲ್ಲಿ ಚಡಚಣ ತಾಲೂಕಿನ 42 ಗ್ರಾಮಗಳಲ್ಲಿನ ಅಂಬೇಡ್ಕರ ಭವನಗಳನ್ನು ಗ್ರಂಥಾಲಯಕ್ಕೆ ಬಳಕೆ ಮಾಡಿಕೊಂಡು, ಓದುಗರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ಮಾಡಲಾಗಿದೆ. ಪ್ರತಿ ಗ್ರಂಥಾಲಯಕ್ಕೆ 2 ಲಕ್ಷ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಗ್ರಂಥಾಲಯಗಳಿಗೆ ಮಕ್ಕಳು ಕುಳಿತುಕೊಳ್ಳುವ ಖುರ್ಚಿ, ಹಾಗೂ ಯುವಕರಿಗಾಗಿ ಖುರ್ಚಿ, ಟೆಬಲ್‌, ಪುಸ್ತಕಗಳನ್ನು ಇಡುವ ಸ್ಟ್ಯಾಂಡ್‌, ದಿನಪತ್ರಿಕೆಗಳನ್ನು ಇರಿಸುವ ಟೆಬಲ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆಲ್ಲ ಮೇಲಾಧಿಕಾರಿಗಳ ಸಹಕಾರ ಮುಖ್ಯವಾಗಿದೆ.

ಸಂಜಯ ಖಡಗೇಕರ, ತಾಪಂ ಪ್ರಭಾರ, ಇಒ,ಚಡಚಣ.ಹಾಗೂ ತಾಪಂ ನರೇಗಾ ಎಡಿ.