ಬಡ ಮಕ್ಕಳಿಗೆ ‘ಅನ್ನ’ ನೀಡಿ ಹಸಿವು ನೀಗಿಸಿದ ಶ್ರೀಅನ್ನದಾನೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ, ‘ಅಕ್ಷರ’ವನ್ನೂ ನೀಡಿ ಸಾವಿರಾರು ಮಕ್ಕಳ ಬದುಕಿಗೆ ಬೆಳಕಾಗಿದೆ. ಈಗ ಹೊಸ ಮೆರುಗಿನೊಂದಿಗೆ ಮತ್ತಷ್ಟು ಮಕ್ಕಳ ಕನಸುಗಳಿಗೆ ಗಟ್ಟಿಯಾದ ಅಡಿಪಾಯ ಹಾಕಲು ಸಜ್ಜಾಗಿದೆ.

ದಾವೂದ್‌ಸಾಬ್‌ ನದಾಫ್‌

ಹನಮಸಾಗರ (ಕೊಪ್ಪಳ ಜಿಲ್ಲೆ):

ಗ್ರಾಮೀಣ ಮಕ್ಕಳ ಬದುಕಿಗೆ ನಾಲ್ಕು ದಶಕಗಳಿಂದ ಶಿಕ್ಷಣದ ಬೆಳಕು ನೀಡುತ್ತಿರುವ ಶ್ರೀಅನ್ನದಾನೇಶ್ವರ ವಿದ್ಯಾವರ್ಧಕ ಸಂಘ (ಶಿಕ್ಷಣ)ದ ಶಾಲೆಗೆ ಇದೀಗ ಹೊಸ ಮೆರುಗು ಬಂದಿದೆ. ಗದಗ ಜಿಲ್ಲೆಯ ನರೇಗಲ್ ತಾಲೂಕಿನ ಹಾಲಕೆರೆ ಸಂಸ್ಥಾನ ಮಠದ ಶಾಖೆಯಾದ ಹನಮಸಾಗರದ ಶ್ರೀ ಅನ್ನದಾನೇಶ್ವರ ಮಠವು 1985ರಲ್ಲಿ ಪುಟ್ಟ ಪಾಠಶಾಲೆಯಾಗಿ ಆರಂಭವಾಗಿ, ಇಂದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.

ಈ ಭಾಗದ ಗ್ರಾಮೀಣ ಹಾಗೂ ರೈತ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆ ವಿಶಿಷ್ಟ ಗುರುತನ್ನು ಗಳಿಸಿದೆ. ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿಯೂ ಶಿಕ್ಷಣ ನೀಡುತ್ತಾ, ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.

ಶಾಲೆ ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ‘ಶಿಕ್ಷಣದ ಜೊತೆಗೆ ಸಂಸ್ಕಾರ’ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕ ಮೌಲ್ಯಗಳು, ಸೇವಾ ಮನೋಭಾವ, ಮಾನವೀಯತೆ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಉತ್ತಮ ತರಗತಿ ಕೊಠಡಿಗಳು, ಗ್ರಂಥಾಲಯ, ವಿಶಾಲ ಕ್ರೀಡಾಂಗಣ ಸೇರಿದಂತೆ ಕಲಿಕೆಗೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ.

ಈ ಶಾಲೆಯ ನಿಜವಾದ ಶಕ್ತಿ ಅದರ ಅನುಭವಿ ಶಿಕ್ಷಕ ವೃಂದ. ಸೇವೆಯನ್ನೇ ಧರ್ಮವೆಂದು ನಂಬಿರುವ ಶಿಕ್ಷಕರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಅರಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳ ಎದೆಯಲ್ಲಿ ''''''''''''''''ಅಕ್ಷರ'''''''''''''''' ಎಂಬ ಬೀಜ ಬಿತ್ತಿ, ಅದನ್ನು ಉತ್ತಮ ವ್ಯಕ್ತಿತ್ವವಾಗಿ ರೂಪಿಸುವ ಶಿಲ್ಪಿಗಳಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇದೀಗ ಶಾಲೆಗೆ ಮತ್ತೊಂದು ಹೆಮ್ಮೆಯ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಜುಲೈ 2ರಂದು ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಮಠದ ಆವರಣದಲ್ಲಿ ನಿರ್ಮಿಸಲಾದ ಮಹಾತಪಸ್ವಿ ಶ್ರೀಅನ್ನದಾನೇಶ್ವರ ಶಿಲಾ ಮಂಟಪದ ಗೋಪುರ ಕಳಸಾರೋಹಣ ಮತ್ತು ಲೋಕಾರ್ಪಣೆ ಕಾರ್ಯಕ್ರಮ ವೈಭವದಿಂದ ನಡೆಯಲಿದೆ.

ಅಂದು ಬೆಳಿಗ್ಗೆ ಶಿವಪೂಜೆ, ಗುರುಪೂಜೆ, ಕಳಸಾರೋಹಣ ಸೇರಿದಂತೆ ವಿವಿಧ ವೈದಿಕ ಹಾಗೂ ವೀರಶೈವ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಗುವುದು.

ವಣಬಳ್ಳಾರಿಯ ಸಿದ್ಧಲಿಂಗಯ್ಯ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮಿಜಿ ಸೇರಿದಂತೆ ವಿವಿಧ ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ಆಶೀರ್ವಚನ ನಡೆಯಲಿದ್ದು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಇದಕ್ಕೂ ಮೊದಲು ಜು.1ರಂದು ದಾನಿಗಳಾದ ಸಂಗಯ್ಯ ವಸ್ತ್ರದ ಅವರ ಮನೆಯಿಂದ ಕಳಸ ಮತ್ತು ವಿಶ್ವನಾಥ ಕನ್ನೂರ ಅವರ ಮನೆಯಿಂದ ಶ್ರೀಗಳ ಮೂರ್ತಿಯನ್ನು ಸಮಾಜ ಮುಖಂಡರು, ವಿವಿಧ ಭಜನಾ ಮಂಡಳಿಗಳೊಂದಿಗೆ ಪಟ್ಟಣದ ಶ್ರೀಕರಿಸಿದ್ದೇಶ್ವರ ಮಠದ ಮೂಲಕ ಶ್ರೀ ಅನ್ನದಾನೇಶ್ವರ ಮಠಕ್ಕೆ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಿದೆ.ಮಹಾತಪಸ್ವಿ ಶ್ರೀಅನ್ನದಾನೇಶ್ವರ ಶಿಲಾ ಮಂಟಪವು ಭಕ್ತರ ಆಧ್ಯಾತ್ಮಿಕ ಚಿಂತನೆಗೆ ಹಾಗೂ ಮಠದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಲಿದೆ. ಅಲ್ಲದೇ, ನೂತನ ಶಾಲಾ ಕೊಠಡಿಗಳು ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಶೈಕ್ಷಣಿಕ ವಾತಾವರಣವನ್ನು ಒದಗಿಸಲಿವೆ.

-ಸಂಗಯ್ಯ ಚಂದಯ್ಯ ವಸ್ತ್ರದ, ಅಧ್ಯಕ್ಷರು, ಶ್ರೀಅನ್ನದಾನೇಶ್ವರ ವಿದ್ಯಾವರ್ಧಕ ಸಂಘ

ಶ್ರೀಅನ್ನದಾನೇಶ್ವರ ವಿದ್ಯಾವರ್ಧಕ ಸಂಘವು ಕೇವಲ ಅಂಕಗಳ ಶಿಕ್ಷಣವನ್ನಲ್ಲ, ಬಡ ರೈತರ ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಮೂಲಕ ಈ ಭಾಗದ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ.

- ಮಹೇಶ್ ಮಠಪತಿ, ಕೃಷ್ಣಮೂರ್ತಿ ಕುಲಕರ್ಣಿ, ಹಿರಿಯ ಶಿಕ್ಷಕರು