ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಅಕ್ಷರ ಓದಲು, ಬರೆಯಲು ಕಲಿಯುವುದಷ್ಟೇ ಶಿಕ್ಷಣವಲ್ಲ. ಅವುಗಳ ಜೊತೆಗೆ ಶಿಸ್ತು ಮತ್ತು ಸಂಸ್ಕಾರ ಕಲಿಯುವುದು ನಿಜವಾದ ಶಿಕ್ಷಣ ಎಂದು ಖ್ಯಾತ ವೈದ್ಯ ಡಾ.ಆನಂದ ಮುತಾಲಿಕ ಹೇಳಿದರು.ಶುಕ್ರವಾರ ಐನಾಪುರ ಪಟ್ಟಣದ ಶಾಂತಿಸಾಗರ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯ 37ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಅಕ್ಷರ ಕಲಿತವರು ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ಆದರೆ, ಶಿಸ್ತು ಮತ್ತು ಸಂಸ್ಕಾರ ಕಲಿತವರು ತಮ್ಮ ಭವಿಷ್ಯದ ಜೊತೆ ಇತರರಿಗೆ ಆದರ್ಶರಾಗುತ್ತಾರೆ. ನಾವು ಕಲಿತ ವಿದ್ಯೆ ಮತ್ತು ಸಂಸ್ಕಾರ ಮಾತ್ರ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ. ಅಕ್ಷರ ಜ್ಞಾನದ ಜೊತೆಗೆ ಶಿಸ್ತು-ಸಂಸ್ಕಾರ ಕಲಿಸುತ್ತಿರುವ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯ ಶ್ಲಾಘನೀಯ ಎಂದರು.
ಕಳೆದ ಹಲವು ವರ್ಷಗಳಿಂದ ನಾನು ಗಮನಿಸಿದಂತೆ ಈ ಶಾಲೆಯ ವಿದ್ಯಾರ್ಥಿಗಳು ಪ್ರತಿವರ್ಷ ಎಸ್.ಎಸ್.ಎಲ್.ಸಿಯಲ್ಲಿ ಶೇ.99 ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತರುತ್ತಿದ್ದಾರೆ. ಅದೇ ರೀತಿ ಈ ವರ್ಷವೂ ವಿದ್ಯಾರ್ಥಿಗಳು ಚನ್ನಾಗಿ ಅಧ್ಯಯನ ಮಾಡಿ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಮಾತನಾಡಿ, ಈ ಶಾಲೆಯ ವಿದ್ಯಾರ್ಥಿಗಳು ಕಳೆದ ಬಾರಿ ಎಸ್.ಎಸ್.ಎಲ್.ಸಿ ಯಲ್ಲಿ ಶೇ.99 ರಷ್ಟು ಸಾಧನೆ ಮಾಡಿ ಜಿಲ್ಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಈ ವರ್ಷ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ತಾಲೂಕಿನ ಕೀರ್ತಿ ಹೆಚ್ಚಿಸಲಿ. ಶಾಂತಿ ಸಾಗರ ಶಾಲೆಯಲ್ಲಿ ಶಿಕ್ಷಣ ಇಂಗ್ಲಿಷನಲ್ಲಿ ಕಲಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿ ಕಲಿಸುತ್ತಿರುವುದು ಹೆಮ್ಮೆಯ ಸಂಗತಿ .ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಎಂಜಿನಿಯರಗಳು, ಡಾಕ್ಟರಗಳು ಆಗಿದ್ದಾರೆ. ಎಂಜಿನಿಯರ್, ಡಾಕ್ಟರ್ ಆಗುವುದು ಬಲು ಸುಲಭ. ಆದರೆ, ಉತ್ತಮ ಶಿಕ್ಷಕರಾಗುವುದು ಬಹಳಷ್ಟು ಕಷ್ಟದ ಕೆಲಸವಾಗಿದೆ ಎಂದರು.
ಸಂಸ್ಥೆ ಅಧ್ಯಕ್ಷ ಅರುಣ ಗಾಣಿಗೇರ ಸಂಸ್ಥೆ ಬೆಳೆದು ಬಂದ ದಾರಿ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಬಿಸಿಊಟ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಡಾ.ಆನಂದ ಕಟ್ಟಿ ಆಡಳಿತ ಮಂಡಳಿಯ ಸದಸ್ಯರಾದ ಪಾಯಪ್ಪ ಕುಡವಕ್ಕಲಗಿ, ಅನುಪ ಶೆಟ್ಟಿ, ಸುರೇಶ ಗಾಣಿಗೇರ, ಅಪ್ಪಾಸಾಬ ಚೌಗುಲಾ, ಕಾಳಪ್ಪ ಬಡಿಗೇರ, ಶಿವಾನಂದ ಕಮತಗಿ, ರಾಮು ಪಾವಲಿ, ಸಿದ್ದು ಖಟಾಂವಿ, ಮುಖ್ಯಗುರು ಬಿ.ಜಿ.ಮೊಳೇಕರ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.