ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಚುನಾವಣೆ ವೇಳೆ ಮತ ಕೇಳಲು ಬಂದಿದ ದಿನ ಬಿಟ್ಟರೆ ಸಂಸದರು ಮತ್ತೆ ಇತ್ತ ಕಡೆ ಇವತ್ತೆ ತಿರುಗಿ ನೋಡಿರುವುದು ಎಂದು ನಗರದ ಬಿ.ಎಂ. ರಸ್ತೆ ಬಳಿ ಇರುವ ಎಪಿಎಂಸಿ ಮಾರುಕಟ್ಟೆಗೆ ಸಂಸದ ಶ್ರೇಯಸ್. ಎಂ. ಪಟೇಲ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ತರಕಾರಿ ವರ್ತಕಿ ಓರ್ವ ಮಹಿಳೆ ಜೋರಾಗಿ ಮಾತನಾಡಿ ಗಮನಸೆಳೆದ ಪ್ರಸಂಗ ಶುಕ್ರವಾರ ಬೆಳಿಗ್ಗೆ ಸಂಭವಿಸಿತು.ಎಪಿಎಂಸಿ ಮಾರುಕಟ್ಟೆಗೆ ಸಂಸದರು ಭೇಟಿ ನೀಡಿದ ಮೊದಲು ಶ್ರೀ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಪಾದಯಾತ್ರೆ ಮೂಲಕ ಮಾರುಕಟ್ಟೆ ಸುತ್ತಿದರು. ಈ ವೇಳೆ ಅನೇಕ ವರ್ತಕರು ಇಲ್ಲಿನ ಸಮಸ್ಯೆಗಳು ಹಾಗೂ ಆಗಬೇಕಾಗಿರುವ ಅಭಿವೃದ್ಧಿ ಕೆಲಸದ ಬಗ್ಗೆ ತಿಳಿಸಿ ಮನವಿ ಮಾಡಿದರು. ಕೆಲ ವರ್ತಕರು ಇಲ್ಲಿನ ಮಳಿಗೆಯನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದಾರೆ. ಇನ್ನು ಅರ್ಹರಿಗೆ ಮಳಿಗೆ ಸಿಗುತ್ತಿಲ್ಲ ಎಂದು ದೂರಿದರು. ಎಲ್ಲವನ್ನು ಆಲಿಸಿ ನಂತರ ಎಪಿಎಂಸಿ ಕಚೇರಿಯಲ್ಲಿ ವರ್ತಕರ ಜೊತೆ ಸಭೆ ನಡೆಸಿ ಸಲಹೆ ಸೂಚನೆ ಮತ್ತು ಆಗಬೇಕಾಗಿರುವ ಅಭಿವೃದ್ಧಿ ಕೆಲಸದ ಬಗ್ಗೆ ತಿಳಿಸಿದರು.
ಇದೇ ವೇಳೆ ಸಂಸದ ಶ್ರೇಯಸ್ ಪಟೇಲ್ ಮಾಧ್ಯಮದೊಂದಿಗೆ ಮಾತನಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಲ್ಪ ನ್ಯೂನ್ಯತೆಗಳಿದ್ದು, ಇಲ್ಲಿ ಸಮಸ್ಯೆಗಳು ಇದ್ದುದರಿಂದ ಇಲ್ಲಿಗೆ ತಹಸೀಲ್ದಾರ್ ಶ್ವೇತ, ಕಾರ್ಯದರ್ಶಿ ಎಲ್ಲರೊಂದಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಾಗಿದೆ. ಸಮಸ್ಯೆಗಳು ಇರುವುದು ನಿಜ. ಇಡೀ ಜಿಲ್ಲೆಯಿಂದ ಮುಖ್ಯ ವ್ಯಾಪಾರ ಸ್ಥಳವಾದ ಈ ಸ್ಥಳಕ್ಕೆ ಬರುತ್ತಾರೆ. ಇಲ್ಲಿ ಜಾಗ ಕಿರಿದಾಗಿದೆ. ಮಳಿಗೆಗಳ ಸಮಸ್ಯೆಯಿದೆ. ಈ ಬಗ್ಗೆ ಪರಿಶೀಲಿಸಿ ಮುಂದೆ ಏನೇನು ಕ್ರಮ ತೆಗೆದುಕೊಳ್ಳಬಹುದು ಚರ್ಚಿಸಲಾಗಿದ್ದು, ಮುಂದೆ ಹಂತಹಂತವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಸ್ವಚ್ಛತೆಗೆ ಒತ್ತುಕೊಡಿ:
ಇಲ್ಲಿ ಸ್ವಚ್ಛತೆ ಬಗ್ಗೆ ನನಗೂ ಕೂಡ ತೃಪ್ತಿಕರವಾಗಿಲ್ಲ. ಇನ್ನು ಸ್ವಚ್ಛತೆಗೆ ಒತ್ತು ಕೊಡುವಂತೆ ಹೇಳಲಾಗಿದೆ. ಇನ್ನೊಂದು ತಿಂಗಳಲ್ಲಿ ಇದೇ ರೀತಿ ಆದರೆ ಮುಂದೆ ಯಾವ ಕ್ರಮ ತೆಗೆದುಕೊಳ್ಳಬಹುದು ಅದಕ್ಕೆ ಕೈಹಾಕಲಾಗುವುದು ಎಂದು ಎಚ್ಚರಿಸಿದರು. ಹೆಚ್ಚುವರಿ ಮಳಿಗೆಗಳಿಗೆ ಜಾಗದ ಸಮಸ್ಯೆಯಿದೆ. ಮಾರುಕಟ್ಟೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆಗಮಿಸುತ್ತಾರೆ. ಆದುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಭದ್ರತೆ ಜೊತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.ಇನ್ನು ಅಭಿವೃದ್ಧಿ ಕೆಲಸ ಅವರು ಇವರು ಮಾಡಿದ್ದಾರೆ ಎಂದು ಇದರ ಶ್ರೇಯಸ್ ಯಾರಿಗೋ ಸಿಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ನನಗೆ ಆತ್ಮ ತೃಪ್ತಿ ಇದ್ದು, ನನಗೆ ಹೆಸರು ಬರುವುದಾಗಲಿ, ನಾನು ಕೆಲಸ ಮಾಡಿದೆ ಎನ್ನುವುದಾಗಲಿ ಮುಖ್ಯವಲ್ಲ. ಈ ಜಿಲ್ಲೆಯಲ್ಲಿ ನನಗೆ ಮತ ಕೊಟ್ಟಿರುವವರು, ನನ್ನ ಕ್ಷೇತ್ರ ಉದ್ಧಾರವಾಗಬೇಕೆ ಹೊರತು ಯಾವುದೇ ಹೆಸರಿಗಾಗಿ ಮಾಡುವುದಿಲ್ಲ. ಆತ್ಮತೃಪ್ತಿಗಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದು ಆತ್ಮತೃಪ್ತಿಯಿದೆ. ಕ್ರೆಡಿಟ್ ಹಿಂದೆ ನಾನು ಹೋಗದೇ ಕೆಲಸದ ಹಿಂದೆ ಹೋಗುತ್ತೇನೆ ಎಂದು ತಿಳಿಸಿದರು.
ಇನ್ನು ಕೂಲಿ ಕಾರ್ಮಿಕ ಅಮಾಲಿಗಳು ವಸತಿ ಕೊಡುವಂತೆ ಸಂಸದರ ಮುಂದೆ ಬೇಡಿಕೆ ಇಟ್ಟಾಗ ಮಾತನಾಡಿದ ಸಂಸದರು, ಹಾಸನ ಸುತ್ತಮುತ್ತ ಎಲ್ಲಾದರೂ ಎರಡು ಎಕರೆ ಭೂಮಿ ನೋಡಿ ಅಲ್ಲಿ ಅಪಾರ್ಟ್‌ಮೆಂಟ್ ರೀತಿ ಕಟ್ಟಿಸಿ ಮನೆಗಳ ನೀಡೋಣ ಎಂದು ವಿಶ್ವಾಸವ್ಯಕ್ತಪಡಿಸಿದರು. ಎಪಿಎಂಸಿ ಒಳಗೆ ಕೆಲ ವರ್ತಕರು ಅಂಗಡಿ ಪಡೆದು ಬಾಡಿಗೆ ಕೊಡುತ್ತಿರುವ ಬಗ್ಗೆ ವರ್ತಕರು ಗಮನಸೆಳೆದಾಗ ಮಾತನಾಡಿ, ಈ ವೇಳೆ ಅಂತವರು ಯಾರಿದ್ದಾರೆ ಗುರುತಿಸಿ ಅಂತವರ ಮಳಿಗೆ ರದ್ದು ಮಾಡುವಂತೆ ಸೂಚಿಸಿದರು.ಇದೇ ವೇಳೆ ತಹಸೀಲ್ದಾರ್ ಶ್ವೇತ, ಎಪಿಎಂಸಿ ಕಾರ್ಯದರ್ಶಿ ಮಧು, ಕಾಂಗ್ರೆಸ್ ಜಿಲ್ಲಾ ವಕ್ತಾರ ದೇವರಾಜೇಗೌಡ, ವರ್ತಕರ ಸಂಘ ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಅಬ್ದೂಲ್ ಕಯಿಂ, ಅಶ್ರು, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು, ರವಿಕುಮಾರ್, ಪ್ರಕಾಶ್, ಮಾಧ್ಯಮ ವಕ್ತಾರ ಸ್ವರೂಪ್, ಅಪ್ಪು ಸೇರಿದಂತೆ ಇತರರು ಉಪಸ್ಥಿತರಿದ್ದರು.