ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಆರಂಭ

| Published : Aug 19 2024, 12:48 AM IST

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮಂತ್ರಾಲಯದಲ್ಲಿ ರಾಯರ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಧ್ವವಜಾರೋಹಣ ನೆರವೇರಿಸುವುದರ ಮುಖಾಂತರ ಶ್ರೀರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಕನ್ನಡಪ್ರಡ ವಾರ್ತೆ ರಾಯಚೂರು

ಯತಿಕುಲ ತಿಲಕ, ಕಲಿಯುಗ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರಕಿತು.

ಮಂತ್ರಾಲಯದ ಶ್ರೀರಾಯರ ಮಠದಲ್ಲಿ ಆರಾಧನೆ ನಿಮಿತ್ತ ಆಯೋಜಿಸಿರುವ ಸಪ್ತರಾತ್ರೋತ್ಸವ ಸಮಾರಂಭಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಭಾನುವಾರ ಸಂಜೆ ಚಾಲನೆ ನೀಡಿದರು.

ಸಪ್ತರಾತ್ರೋತ್ಸವದ ಮೊದಲ ದಿನ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಶ್ರೀ ಮಠದ ಮುಂಭಾಗದಲ್ಲಿ ಪೀಠಾಧಿಪತಿಗಳು ಶ್ರೀಮಠದ ಸಂಪ್ರದಾಯಗಳ ಅನುಸಾರವಾಗಿ ಧ್ವವಜಾರೋಹಣ, ಗೋಪೂಜೆ, ಅಶ್ವಪೂಜೆ, ಧ್ವಜಪೂಜೆ, ಲಕ್ಷ್ಮೀ ಪೂಜೆ, ಪ್ರಾರ್ಥನೋತ್ಸವ, ಪ್ರಭಾಉತ್ಸವ, ಧಾನ್ಯೋತ್ಸವಗಳನ್ನು ನೆರವೇರಿಸಿದರು. ಇದೇ ವೇಳೆ ಶ್ರೀಮಠದ ಮುಂಭಾಗದ ಆವರಣದಲ್ಲಿರುವ ಯೋಗೀಂದ್ರ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರವನ್ನು ಉದ್ಘಾಟಿಸಿ ನೆರೆದ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶವನ್ನು ನೀಡಿದ ಶ್ರೀಗಳು ಶ್ರೀ ಗುರುರಾಜರ 353ನೇ ಆರಾಧನಾ ಮಹೋತ್ಸವ ನಿಮಿತ್ತವಾಗಿ ಶ್ರೀಮಠದಲ್ಲಿ ಸಪ್ತರಾತ್ರೋತ್ಸಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಇಂದಿನಿಂದ ಏಳು ದಿನಗಳ ಕಾಲ ನಿರಂತರವಾಗಿ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ರಾಯರ ಭಕ್ತರಿಗೆ ಶ್ರೀಮಠದಿಂದ ಅಗತ್ಯ ಸವಲತ್ತುಗಳನ್ನು ಕಲ್ಪಿಸಲಾಗಿದ್ದು, ಭಕ್ತರು ನಿರ್ಭೀತಿಯಾಗಿ ಸುಕ್ಷೇತ್ರಕ್ಕೆ ಆಗಮಿಸಿ ಹೆಚ್ಚಿನ ಗುರುಗಳಾದ ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರ ಕೃಪೆಗೆ ಪಾತ್ರರಾಗಬೇಕು ಎಂದರು.

ಆರಾಧನಾ ಮಹೋತ್ಸವ ನಿಮಿತ್ತ ಸುಕ್ಷೇತ್ರ ಮಂತ್ರಾಲಯವು ವಿಶೇಷ ಹೂವು ಹಾಗೂ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸಿತು. ಈ ಸಂದಭರ್ದಲ್ಲಿ ಶ್ರೀಮಠದ ಪಂಡಿತ ಕೇಸರಿ ರಾಜಾ ಎಸ್.ಗಿರಿಯಾಚಾರ್, ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಪಂಡಿತರು, ವಿದ್ವಾಂಸರು, ಅಧಿಕಾರಿ, ಸಿಬ್ಬಂದಿ ವರ್ಗದವರು, ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು.