ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ರಾಜ್ಯದ ಹಲವೆಡೆ ಕೃತಕ ಗ್ಯಾಸ್ ಅಭಾವ ಸೃಷ್ಟಿಯಾಗಿದೆ. ಇದರಿಂದಾಗಿ ಆಟೋ ಚಾಲಕರು ಇಂಧನಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವಂತಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ರಾಜ್ಯದ ಹಲವೆಡೆ ಕೃತಕ ಗ್ಯಾಸ್ ಅಭಾವ ಸೃಷ್ಟಿಯಾಗಿದೆ. ಇದರಿಂದಾಗಿ ಆಟೋ ಚಾಲಕರು ಇಂಧನಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವಂತಾಗಿದೆ.ಬೆಂಗಳೂರು, ಬಳ್ಳಾರಿ, ಧಾರವಾಡ, ಗದಗ ಸೇರಿ ಹಲವೆಡೆ ತಿಂಗಳ ಹಿಂದೆ ₹54 ಇದ್ದ ಆಟೋ ಎಲ್‌ಪಿಜಿ ದರ ₹100 ರವರೆಗೆ ಏರಿಕೆಯಾಗಿದ್ದು, ಆಟೋ ಚಾಲಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ‘ಆಟೋ ಕಂತು ಕಟ್ಟೋಕೇ ಆಗ್ತಾ ಇಲ್ಲ. ಮನೆ ನಡೆಸೋಕೂ ಆಗ್ತಾ ಇಲ್ಲ. ಜನಕ್ಕೆ ₹10 ಜಾಸ್ತಿ ಕೇಳಿದರೂ ಕೊಡಲ್ಲ ಅಂತಾರೆ. ಆಟೋ ಕಂತು ಕಟ್ಟೋಕೆ ಆಗದೇ ಒದ್ದಾಡ್ತಿದ್ದೇವೆ’ ಎಂದು ಆಟೋ ಚಾಲಕರು ಕಣ್ಣೀರು ಹಾಕುತ್ತಿದ್ದಾರೆ.
ಕಾರವಾರದಲ್ಲಿ ಶಿರವಾಡದಲ್ಲಿರುವ ಆಟೋ ಎಲ್‌ಪಿಜಿ ಗ್ಯಾಸ್ ಬಂಕ್ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿದೆ. ಇದರಿಂದಾಗಿ ರಿಕ್ಷಾ ಚಾಲಕರು ಕಂಗಾಲಾಗಿದ್ದಾರೆ. ಕೆಲವರು ಎಲ್‌ಪಿಜಿ ಬದಲು ಪರ್ಯಾಯವಾಗಿ ಪೆಟ್ರೋಲ್ ಬಳಸುತ್ತಿದ್ದಾರೆ. ಕುಮಟಾದ ಅಳ್ವೆಕೋಡಿಯಲ್ಲಿರುವ ಟೋಟಲ್ ಗ್ಯಾಸ್ ಏಜನ್ಸಿ ಎದುರು ಎರಡು ಕಿ.ಮೀ.ವರೆಗೆ ಆಟೋ ರಿಕ್ಷಾಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಇದೇ ವೇಳೆ, ಸ್ಟಾಕ್ ಇರದ ಹಿನ್ನೆಲೆಯಲ್ಲಿ ಟೋಟಲ್ ಗ್ಯಾಸ್ ವಿತರಕರು ಗ್ಯಾಸ್ ವಿತರಣೆಗೆ ನಿರ್ಬಂಧ ವಿಧಿಸಿದ್ದು, ಒಬ್ಬರಿಗೆ ₹500 ಗ್ಯಾಸ್ ಖರೀದಿಗೆ ಮಾತ್ರ ಅವಕಾಶ ನೀಡಿದ್ದಾರೆ. ಜೊತೆಗೆ, ಮುಂಜಾನೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಗ್ಯಾಸ್ ಮಾರಾಟ ಮಾಡುತ್ತಿದ್ದಾರೆ.ಕೊಪ್ಪಳದಲ್ಲಿ ಹೊಸಪೇಟೆ ರಸ್ತೆಯಲ್ಲಿರುವ ಗ್ಯಾಸ್ ಪ್ಲಸ್ ಆಟೋ ಎಲ್ಪಿಜಿ ಬಂಕ್ ಸೇರಿ ಕಳೆದ ಮೂರು ದಿನಗಳಲ್ಲಿ ಕೊಪ್ಪಳ ನಗರದಲ್ಲಿ ಎರಡು ಆಟೋ ಗ್ಯಾಸ್ ಬಂಕ್‌ಗಳು ಬಂದ್ ಆಗಿವೆ. ಚೆನೈನಿಂದ ಬರಬೇಕಿದ್ದ ಎಲ್ಪಿಜಿ ಬಂದಿಲ್ಲ ಎಂದು ಬಂಕ್ ಮೂಲಗಳು ತಿಳಿಸಿವೆ.
ಕಾಫಿನಾಡು ಚಿಕ್ಕಮಗಳೂರಲ್ಲಿ ಆಟೋ ಎಲ್ಪಿಜಿಗೆ ಚಾಲಕರ ಪರದಾಟ ಮುಂದುವರಿದಿದ್ದು, ಮೂರು ಬಂಕ್‌ಗಳ ಪೈಕಿ, ಎರಡು ಬಂಕ್‌ಗಳು ಬಂದ್ ಆಗಿವೆ.ಹಾವೇರಿಯಲ್ಲಿ ಎಚ್‌ಪಿ ಗ್ಯಾಸ್ ಏಜೆನ್ಸಿ ಬಂದ್ ಆಗಿದ್ದು, ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ. ಇದರಿಂದಾಗಿ ಅಡುಗೆ ಅನಿಲ ಸಿಲಿಂಡರ್ ಸಿಗದೆ ಗ್ರಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ. ‘ಮನೆಲಿ ಬಾಣಂತಿ ಹೆಣ್ಣು ಮಗಳಿದ್ದಾಳೆ, ಅಡುಗೆ ಮಾಡೋಕೆ ಸಿಲಿಂಡರ್ ಇಲ್ಲ. ದನದ ಕೊಟ್ಟಿಗೆಯಲ್ಲಿ ಇಟ್ಟಿಗೆ ಇಟ್ಟು ಅಡುಗೆ ಮಾಡ್ತಿದೇವೆ’ ಎಂದು ವಯೋವೃದ್ದ ಮಲ್ಲೇಶಪ್ಪ ಎಂಬುವರು ತಮ್ಮ ಅಳಲು ತೋಡಿಕೊಂಡರು.----ಶೆಲ್ ಬಂಕ್‌ಗಳಲ್ಲಿ ದರ ಏರಿಕೆ:
ಇದೇ ವೇಳೆ, ಯುದ್ಧ ಸನ್ನಿವೇಶವನ್ನು ಬಳಕೆ ಮಾಡಿಕೊಂಡು ಖಾಸಗಿ ಪೆಟ್ರೋಲ್ ಬಂಕ್‌ಗಳು ಒಳಗೊಳಗೇ ಪೆಟ್ರೋಲ್, ಡೀಸೆಲ್ ದರ ಹೆಚ್ಚು ಮಾಡುತ್ತಿದ್ದಾರೆ. ಶೆಲ್ ಪೆಟ್ರೋಲ್ ಬಂಕ್‌ನವರು ಕಳೆದ 15 ದಿನಗಳಿಂದ ಮೂರು ಬಾರಿ ದರ ಏರಿಕೆ ಮಾಡಿದ್ದು, ಸೋಮವಾರವೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡಿದ್ದಾರೆ.ಕೇಂದ್ರ ಸರ್ಕಾರದ ಅಬಕಾರಿ ಸುಂಕ ಇಳಿಕೆ ನಂತರವೂ ದರ ಏರಿಕೆಯಾಗಿದ್ದು, ಪ್ರಸ್ತುತ ಪೆಟ್ರೋಲ್ ₹111.98 ಹಾಗೂ ₹121.98 ಗಳಲ್ಲಿ ಮಾರಾಟವಾಗುತ್ತಿದೆ. ಡೀಸೆಲ್ ₹98.15 ಹಾಗೂ ₹108.15ಕ್ಕೆ ಮಾರಾಟವಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.ಸಿಲಿಂಡರ್‌ಗೆ ₹1500; ಹೋಟೆಲ್, ಬೇಕರಿ ಮಾಲೀಕರ ಆಮಿಷ:
ಮಂಡ್ಯದಲ್ಲಿ ಗೃಹ ಬಳಕೆ ಅಡುಗೆ ಅನಿಲಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳ ಪೂರೈಕೆಗೆ ನಿಯಂತ್ರಣ ವಿಧಿಸಿರುವುದರಿಂದ ಹೆಚ್ಚಿನ ದರ ಕೊಟ್ಟು ಗೃಹ ಬಳಕೆ ಸಿಲಿಂಡರ್‌ಗಳನ್ನು ಖರೀದಿಸಲು ಹೋಟೆಲ್, ಬೇಕರಿ, ಟೀ-ಕಾಫಿ ಅಂಗಡಿ ಮಾಲೀಕರು ಮುಗಿಬಿದ್ದಿದ್ದಾರೆ. ಗ್ರಾಹಕರು ₹917 ಅಡುಗೆ ಅನಿಲ ಸಿಲಿಂಡರನ್ನು ಹೋಟೆಲ್, ಬೇಕರಿ ಅಥವಾ ಇನ್ನಿತರ ವಾಣಿಜ್ಯ ಉದ್ದೇಶದವರಿಗೆ ನೀಡಿ ಅವರಿಂದ ₹1200 ರಿಂದ ₹1300 ವರೆಗೆ ಹಣ ಪಡೆದು, ಲಾಭ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಆ ಮೂಲಕ ಅಕ್ರಮ ಮಾರ್ಗದಲ್ಲಿ ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆ ಸಿಲಿಂಡರ್ ಮಾರಾಟವಾಗುತ್ತಿದೆ.ಕೋಟ್:
ಕಾರವಾರದಲ್ಲಿ ಆಟೋಗಳಿಗೆ ಗ್ಯಾಸ್ ಒದಗಿಸದೆ ಇದ್ದಲ್ಲಿ ಗ್ಯಾಸ್ ಬಂಕ್ ಎದುರು ಪ್ರತಿಭಟನೆ ನಡೆಸಿ ಗ್ಯಾಸ್ ಪೂರೈಕೆ ಮಾಡುವಂತೆ ಜನಪ್ರತಿನಿಧಿಗಳನ್ನು ಒತ್ತಾಯಿಸಲಾಗುವುದು.-ವಿಶ್ವನಾಥ ಗೌಡ ಅಧ್ಯಕ್ಷ, ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕರ ಮಾಲಿಕರ ಕ್ಷೇಮಾಭಿವೃದ್ಧಿ ಸಂಘ.