ಸಾರಾಂಶ
ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಎಬಿವಿಪಿ ವಿಜಯಪುರ ಘಟಕ ಖೇಲೋ ಭಾರತ ಅಡಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ವಿಜಯಪುರಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಥ್ರೋಬಾಲ್ ವಿವೇಕ್ ಟ್ರೊಫಿ-೨೦೨೪ ಪಂದ್ಯಾವಳಿ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಎಬಿವಿಪಿ ವಿಜಯಪುರ ಘಟಕ ಖೇಲೋ ಭಾರತ ಅಡಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ನಗರದ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಿ.ಎಲ್.ಡಿ.ಇ, ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಬಿ.ಎಲ್.ಡಿ.ಇ ಸಂಸ್ಥೆಯ ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ವಿರುದ್ಧ ಜಯಗಳಿಸಿ ರಾಜ್ಯ ಮಟ್ಟದ ಪಂದ್ಯಾವಳಿಗೆ ಪ್ರವೇಶ ಪಡೆಯಿತು. ಪಂದ್ಯಾವಳಿಯ ನಂತರ ನಡೆದ ಕಾರ್ಯಕ್ರಮದಲ್ಲಿ ವಿಜಯಪುರದ ಬೆನಕಟ್ಟಿ ಪಿಯು ಕಾಲೇಜಿನ ಕಾರ್ಯಾಧ್ಯಕ್ಷೆ ಹೇಮಲತಾ ಬೆನಕಟ್ಟಿ ಮತ್ತು ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಎಸ್. ಹಿರೇಮಠ ಪ್ರಶಸ್ತಿ ಪಶಸ್ತಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಸ್. ಹಿರೇಮಠ, ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ, ಆಟೋಟಗಳಲ್ಲಿ ಸ್ಪರ್ಧಾ ಮನೋಭಾವದಿಂಧ ಭಾಗವಹಿಸಬೇಕು, ಸೋಲಿನಿಂದ ಹತಾಶರಾಗಬಾರದು. ಗೆಲುವಿನಿಂದ ಹಿಗ್ಗಬಾರದು ಎಂದರು. ವಿಜೇತ ತಂಡದ ನಾಯಕಿ ರಶ್ಮಿ ಇಂಚಗೇರಿ, ಉಪನಾಯಕಿ ಪೂಜಾ ಬಿರಾದಾರ, ತರಬೇತುದಾರ ಹಣಮಂತ ಪವಾರ, ಆಟಗಾರ ನೇತ್ರಾವತಿ, ಸನಾ, ಸೌಮ್ಯ, ಪಾರ್ವತಿ, ಪ್ರಿಯೇಶಾ, ಅಶ್ವಿನಿ ಪ್ರಶಸ್ತಿ ಸ್ವೀಕರಿಸಿದರು.