ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಕೊಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲವೆಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಅಧ್ಯಕ್ಷ ಜಗಳೂರು ಯಾದವರೆಡ್ಡಿ ಆರೋಪಿಸಿದರು.ಬಗರ್ ಹುಕುಂ ಭೂಮಿಗಳ ಸಮಸ್ಯೆ ಬಗೆಹರಿಸಿ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಗರ್ ಹುಕುಂ ಸಮಸ್ಯೆ ಇಡಿ ದೇಶದಲ್ಲಿದೆ. ರಾಜಕಾರಣಿಗಳಿಗೆ ಪ್ರಬಲ ಇಚ್ಛಾಶಕ್ತಿಯಿಲ್ಲದ ಕಾರಣ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಇನ್ನು ಹಕ್ಕುಪತ್ರಗಳು ಸಿಕ್ಕಿಲ್ಲ. ನ್ಯಾಯಾಲಯ ಕೂಡ ಈ ಹಿಂದೆ ಮಧ್ಯ ಪ್ರವೇಶಿಸಿ ನ್ಯಾಯ ಕೊಡುವಂತೆ ಆದೇಶಿಸಿದ್ದರೂ ಸರ್ಕಾರ ಅನುಷ್ಟಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ 45 ಲಕ್ಷ ಬಗರ್ ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೇವಲ 14 ಲಕ್ಷ ರೈತರಿಗೆ ಮಾತ್ರ ಸಾಗುವಳಿ ಪತ್ರಕ್ಕೆ ಅನುಮೋದನೆ ನೀಡಿದೆ. ಇದು ಅತ್ಯಂತ ಅನ್ಯಾಯದ ಸಂಗತಿಯಾಗಿದೆ. ಶೋಷಿತರ ಪರವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ತಕ್ಷಣವೇ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಬಗರೆಹರಿಸಬೇಕೆಂದು ಒತ್ತಾಯಿಸಿದರು.ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ್ನದಾತ ರೈತನಿಗೆ ಸೌಲಭ್ಯಗಳನ್ನು ಕೊಡುವಲ್ಲಿ ಸೋತಿವೆ. ರೈತರಿಗೆ ಭೂಮಿ ಜನ್ಮಸಿದ್ದ ಹಕ್ಕು. ಯಾವುದೇ ಕಾರಣಕ್ಕೂ ಅಕ್ರಮ ಎನ್ನುವ ಪದ ಬಳಸುವಂತಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಲು ಆಳುವ ಸರ್ಕಾರಗಳಿಗೆ ಆಗುತ್ತಿಲ್ಲ. ಕೃಷಿ ಎನ್ನುವುದು ಜೂಜಾಟವಾದಂತಿದೆ ಎಂದರು.
ಹದ ಮಳೆ ಬಂದರೆ ಮಾತ್ರ ರೈತನ ಕೈಗೆ ಬೆಳೆಗಳು ಸಿಗುತ್ತವೆ. ಅತಿಯಾಗಿ ಮಳೆ ಬಂದರೆ ಬೆಳೆ ನಾಶವಾಗುತ್ತದೆ. ಇನ್ನೊಂದು ವಾರ ಮಳೆ ಬರದಿದ್ದರೆ ದನ-ಕರುಗಳ ಮೇವಿಗೂ ಕಷ್ಟವಾಗುತ್ತದೆ. ಬಿಸಿಲಿಗೆ ರಾಗಿ ತೆನೆಗಳು ಬಾಡುತ್ತಿವೆ. ಕೃಷಿಗಾಗಿ ಭೂಮಿಗೆ ಸುರಿದ ಬಂಡವಾಳ ಕೂಡ ಕೈಗೆ ಸಿಗುತ್ತಿಲ್ಲ. ದೇಶಕ್ಕೆ ಆಹಾರ ಕೊಡುತ್ತಿರುವ ರೈತರನ್ನು ಸರ್ಕಾರಗಳು ಕಡೆಗಣಿಸಬಾರದು. ಸಾಲ ಸೂಲ ಮಾಡಿ ಒಕ್ಕಲುತನದಲ್ಲಿ ತೊಡಗಿರುವ ರೈತರು ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ರಿಯಾಯಿತಿ ದರದಲ್ಲಿ ಗೊಬ್ಬರ ಕೊಡಬೇಕಾಗಿರುವ ಸರ್ಕಾರ ಒಂದು ಬ್ಯಾಗ್ ಗೊಬ್ಬರಕ್ಕೆ ನಾಲ್ಕು ನೂರುಕ್ಕೂ ಹೆಚ್ಚಿಗೆ ಪಡೆಯುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು?ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ, ಸರ್ಕಾರ ಕಾನೂನು ಬದಿಗಿಟ್ಟು ಸಾಮಾಜಿಕ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಬೇಕೆ ವಿನಃ ಎಲ್ಲದಕ್ಕೂ ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ಭೂಮಿ ಸಾಗುವಳಿದಾರರಿಗೆ ಅನ್ಯಾಯ ಮಾಡಬಾರದು ಎಂದರು.
ಗೊಂದಲ್ಲದಲ್ಲಿರುವ ಅರಣ್ಯ-ಕಂದಾಯ ಇಲಾಖೆ ಭೂಮಿಗಳ ಜಂಟಿ ಸರ್ವೇ ನಡೆಸಿ ಭೂ ಮಂಜೂರಾತಿಗೆ ಅಡ್ಡಿಯಾಗಿರುವ ಕಾನೂನು ತಿದ್ದುಪಡಿ ಮಾಡಬೇಕು. ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ನೀಡುವಾಗ ಕಾನೂನು ಬದಲಾಯಿಸುವ ಸರ್ಕಾರಗಳು ಬಡವರಿಗೆ ಭೂಮಿ ನೀಡುವಾಗ ಏಕೆ ಇಲ್ಲದ ಸಲ್ಲದ ಕಾನೂನುಗಳನ್ನು ಅಡ್ಡ ತರುತ್ತವೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯದಲ್ಲಿ ಮರಗಳನ್ನು ಕಡಿಯುವ ಇಲಾಖೆಗೆ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ತಕರಾರು ಮಾಡುವುದು ಏಕೆ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಹನುಮಂತಪ್ಪ ಗೋನೂರು, ನಾಗರಾಜಪ್ಪ ನೆಲಗೇತಲಹಟ್ಟಿ, ರಾಜಪ್ಪ, ಅಂಜನಪ್ಪ, ಮಂಜಣ್ಣ, ಲಕ್ಷ್ಮಿದೇವಿ, ಪ್ರವೀಣ, ಜ್ಯೋತಿ, ತಿಮ್ಮಯ್ಯ, ಕರಿಯಮ್ಮ, ಶಿವಮೂರ್ತಿ, ತಿಪ್ಪೇಶ, ಮನ್ಸೂರ್, ಕಾಂತರಾಜ್, ರಾಮಚಂದ್ರ, ಹನುಮಂತಪ್ಪ ದುರ್ಗಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.