ಮೇ 19ರಂದು ಮಂಡ್ಯದಲ್ಲಿ ‘ಬಸವಶ್ರೀ’ ಪುರಸ್ಕಾರ ಸಮಾರಂಭ

| Published : May 17 2024, 12:36 AM IST

ಸಾರಾಂಶ

ಜೀವನ ನಿರ್ವಹಣೆಗೆ ಆರಂಭಗೊಂಡ ವೃತ್ತಿಗಳೇ ಜಾತಿಗಳಾಗಿ, ಸಾಮಾಜಿಕ ಪಿಡುಗುಗಳಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಕಾಯಕ ಸಮಾನತೆಯನ್ನು ಸಾರುತ್ತಾ, ಸಮತೆ ಮತ್ತು ಮಮತೆಯ ಸಮಾಜವನ್ನು ಕಟ್ಟಲು ಮುಂದಾದ ಬಸವಣ್ಣ ಅವರ ವಿಚಾರ ಧಾರೆಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊಡನೆ ಬಸವ ಜಯಂತಿಯ ಆಚರಣೆಗೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಮೇ 19ರಂದು ಬೆಳಗ್ಗೆ 10-30ಕ್ಕೆ ನಗರದ ಗಾಂಧಿ ಭವನದಲ್ಲಿ ಬಸವ ಜಯಂತಿ ಆಚರಣೆ ಅಂಗವಾಗಿ ಬಸವ ತತ್ವ ರಕ್ಷಣೆಯಲ್ಲಿ ಸಂವಿಧಾನ ಕುರಿತ ವಿಚಾರ ಚಿಂತನೆ ಮತ್ತು ಬಸವಶ್ರೀ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ತಿಳಿಸಿದ್ದಾರೆ. ಬಸವಣ್ಣನವರ ತತ್ವ, ಸಿದ್ಧಾಂತದ ಪ್ರಭಾವ ಸಂವಿಧಾನದ ಮೇಲಿದ್ದು, ಸಂವಿಧಾನ ರಕ್ಷಣೆಯೇ ಬಸವ ತತ್ವದ ರಕ್ಷಣೆಯಾಗಿರುವುದರಿಂದ ಪ್ರಸ್ತುತ ಕಾಲಮಾನದಲ್ಲಿ ಬಸವಣ್ಣನವರ ವಿಚಾರಗಳನ್ನು ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದ ಈ ಸಮಾರಂಭ ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಜೀವನ ನಿರ್ವಹಣೆಗೆ ಆರಂಭಗೊಂಡ ವೃತ್ತಿಗಳೇ ಜಾತಿಗಳಾಗಿ, ಸಾಮಾಜಿಕ ಪಿಡುಗುಗಳಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಕಾಯಕ ಸಮಾನತೆಯನ್ನು ಸಾರುತ್ತಾ, ಸಮತೆ ಮತ್ತು ಮಮತೆಯ ಸಮಾಜವನ್ನು ಕಟ್ಟಲು ಮುಂದಾದ ಬಸವಣ್ಣ ಅವರ ವಿಚಾರ ಧಾರೆಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊಡನೆ ಬಸವ ಜಯಂತಿಯ ಆಚರಣೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯ ಉದ್ದೇಶದೊಡನೆ ವಿವಿಧ ಸಮುದಾಯದಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಆಯ್ದ 12 ಮಂದಿಗೆ ಬಸವಶ್ರೀ ಪುರಸ್ಕಾರವನ್ನು ನೀಡಲಾಗುವುದು. ಜೊತೆಗೆ ಕಾಯಕಯೋಗಿ ಪ್ರತಿಷ್ಠಾನದ ವತಿಯಿಂದ ಸಾಮಾಜಿಕ ಚಿಂತಕ ರಂಜಾನ್‌ ದರ್ಗಾ ಅವರಿಗೆ ಕಾಯಕಯೋಗಿ ಪುರಸ್ಕಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬಸವಶ್ರೀ ಪುರಸ್ಕೃತರು:

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಕವಿ ಕೆ.ಪಿ.ಮೃತ್ಯುಂಜಯ, ದಸಂಸ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ, ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್, ಶ್ರೀರಂಗಪಟ್ಟಣ ತಾಲೂಕು ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ನಾಗಮಂಗಲ ಸಾವಿತ್ರಮ್ಮ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ. ಶ್ರೀನಿವಾಸ್, ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್. ಚಂದ್ರಶೇಖರ್, ಕುಂಬಾರ ಸಮಾಜದ ಹಿರಿಯ ಮುಖಂಡ ಅರಕೆರೆ ದಾಸಪ್ಪ, ಮಡಿವಾಳ ಸಮುದಾಯದ ಮಹಿಳಾ ಮುಖಂಡರಾದ ಅಕ್ಕಿಹೆಬ್ಬಾಳು ಮಣಿಯಮ್ಮ, ಗೊಲ್ಲ ಸಮುದಾಯದ ಹಿರಿಯ ಮುಖಂಡ ಗಿರಿಯಪ್ಪ ಗೊಲ್ಲರದೊಡ್ಡಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಾಳೆ ಗೊರುಚ ದತ್ತಿನಿಧಿ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮಂಡ್ಯಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಮಂಡ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಮೇ 18 ರಂದು ಗೊರುಚ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ತಿಳಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯುವ ಸಮಾರಂಭದ ದಿವ್ಯ ಸಾನಿಧ್ಯವನ್ನು ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್ ಭಾಗವಹಿಸುವರು. ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ ಹೆಬ್ರಿ ಅಭಿನಂದನಾ ನುಡಿಗಳನ್ನಾಡುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಉಪಸ್ಥಿತರಿರುವರು. 2023 ನೇ ಸಾಲಿನ ಗೊರುಚ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ಡಾ.ಬಸವರಾಜ ಕಲ್ಗುಡಿ (ಶರಣ ಪ್ರಶಸ್ತಿ), ಡಾ.ಸಂಧ್ಯಾರೆಡ್ಡಿ (ಜಾನಪದ ಪ್ರಶಸ್ತಿ), ಡಾ.ಸಿ.ನಾಗಭೂಷಣ (ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ) ಹಾಗೂ ಬಾಲಕೃಷ್ಣ ಜಂಬಗಿ (ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ) ಉಪಸ್ಥಿತರಿರುವರು.