ಢಾಕಾ ಅಂ.ರಾ. ಚಲನಚಿತ್ರೋತ್ಸವದಲ್ಲಿ ‘ಬೇರ್’ ವರ್ಲ್ಡ್ ಪ್ರೀಮಿಯರ್ ಶೋ

| Published : Jan 15 2024, 01:46 AM IST

ಢಾಕಾ ಅಂ.ರಾ. ಚಲನಚಿತ್ರೋತ್ಸವದಲ್ಲಿ ‘ಬೇರ್’ ವರ್ಲ್ಡ್ ಪ್ರೀಮಿಯರ್ ಶೋ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ವಿವಿಧ ವಿಭಾಗಗಳಲ್ಲಿ ಆಯ್ಕೆಗೊಂಡು ಪ್ರಶಸ್ತಿಗಳನ್ನು ಪಡೆದ ಕೊಡವ ಮತ್ತು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ನಿರ್ಮಾಣ, ನಿರ್ದೇಶನದಲ್ಲಿ ‘ಬೇರ್’ ಕೊಡವ ಸಿನಿಮಾ ಮೂಡಿ ಬಂದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

‘ಬೇರ್’ (ದಿ ರೂಟ್) ಕೊಡವ ಸಿನಿಮಾ ಬಾಂಗ್ಲಾ ದೇಶದ ಢಾಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಲ್ಡ್ ಪ್ರೀಮಿಯರ್‌ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿದೆ. ಇದು ಕೊಡವ ಸಿನಿಮಾ ರಂಗದಲ್ಲಿ ಬಹುದೊಡ್ಡ ಸಾಧನೆಯಾಗಿದೆ ಎಂದು ಚಿತ್ರತಂಡ ಹರ್ಷವ್ಯಕ್ತಪಡಿಸಿದೆ.

ಇದಕ್ಕೂ ಮೊದಲು ನಡೆದ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ವಿವಿಧ ವಿಭಾಗಗಳಲ್ಲಿ ಆಯ್ಕೆಗೊಂಡು ಪ್ರಶಸ್ತಿಗಳನ್ನು ಪಡೆದ ಕೊಡವ ಮತ್ತು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ನಿರ್ಮಾಣ, ನಿರ್ದೇಶನದಲ್ಲಿ ‘ಬೇರ್’ ಕೊಡವ ಸಿನಿಮಾ ಮೂಡಿ ಬಂದಿದೆ.

ಬಾಂಗ್ಲಾದೇಶದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಅಂತಾರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಲ್ಡ್ ಪ್ರೀಮಿಯರ್ ಪ್ರದರ್ಶನಕ್ಕೆ ಬೇರ್ ಆಯ್ಕೆಯಾಗುವ ಮೂಲಕ ಕೊಡವ ಸಿನಿಮಾವೊಂದು ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡ ಹೆಮ್ಮೆಗೆ ಪಾತ್ರವಾಗಿದೆ.

ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರ ಪ್ರಪ್ರಥಮ ಇಂಟಲೆಕ್ಚುವಲ್ ಕೊಡವ ಸಿನಿಮಾವಾಗಿದೆ. ಕೆಲವೇ ಪಾತ್ರದಾರಿಗಳ ನಟನೆ ಇದ್ದು, ಯುವ ಪೀಳಿಗೆಗೆ ಸಂದೇಶವನ್ನು ನೀಡುವ ವಿಭಿನ್ನ ಕಥಾಹಂದರವನ್ನು ಹೊಂದಿದೆ.

ಚಿತ್ರದಲ್ಲಿ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಮಂಡೀರ ಪದ್ಮ ಬೋಪಯ್ಯ, ಮೊಣ್ಣಂಡ ನೇಹ ಮೋಟಯ್ಯ, ಉಳುವಂಗಡ ಅಮಿತ್ ಬೋಪಣ್ಣ, ಗುಮ್ಮಟ್ಟಿರ ಕಿಶು ಉತ್ತಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈರಮಂಡ ಹರಿಣಿ ವಿಜಯ್ ಮತ್ತು ಇತಿಹಾಸ ಶಂಕರ್ ಸಹ ನಿರ್ದೇಶಕರಾಗಿ, ಶಿವಕುಮಾರ್ ಅಂಬಲಿ ಹಾಗೂ ಸಂತೋಷ್ ಬಪ್ಪು ಛಾಯಾಗ್ರಾಹಕರಾಗಿ, ಪ್ರದೀಪ್ ಆರ್ಯನ್ ಸಂಕಲನಕಾರರಾಗಿ ಮತ್ತು ವಿಠಲ್ ರಂಗದೊಳ್ ಸಂಗೀತ ನಿರ್ದೇಶಕರಾಗಿ, ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಈರಮಂಡ ವಿಜಯ್ ಉತ್ತಯ್ಯ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.