ವಿವೇಕಾನಂದರು ಪ್ರಪಂಚದ ಆಧ್ಯಾತ್ಮಿಕ ಗುರು

| Published : Jan 13 2024, 01:36 AM IST

ಸಾರಾಂಶ

ವಿವೇಕಾನಂದರು ಯುವಕರ ಸಾಮರ್ಥ್ಯ ಮತ್ತು ಶಕ್ತಿ ದೃಢವಾಗಿ ನಂಬಿದ್ದರು. ಯುವಕರು ಸಮಾಜದ ಪರಿವರ್ತನೆಗೆ ಪ್ರೇರಕ ಶಕ್ತಿ ಎಂದು ತಿಳಿದು, ಯುವ ಮನಸ್ಸುಗಳ ಸುಪ್ತ ಶಕ್ತಿ ಮತ್ತು ಪ್ರತಿಭೆ ಜಾಗೃತಗೊಳಿಸುವಲ್ಲಿ ವಿವೇಕಾನಂದರ ಪಾತ್ರ ಅನನ್ಯ

ಕನ್ನಡಪ್ರಭ ವಾರ್ತೆ ತಾಂಬಾ

ವಿವೇಕಾನಂದರ ಪ್ರಯತ್ನಗಳು ಭಾರತೀಯರಲ್ಲಿ ಹೆಮ್ಮೆ ಮತ್ತು ಆತ್ಮ ವಿಶ್ವಾಸ ತುಂಬಿವೆ. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆ ಪುನರುಜ್ಜೀವನಕ್ಕೆ ದಾರಿ ಮಾಡಿವೆ ಎಂದು ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಹೇಳಿದರು.ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿವೇಕಾನಂದರು ಯುವಕರ ಸಾಮರ್ಥ್ಯ ಮತ್ತು ಶಕ್ತಿ ದೃಢವಾಗಿ ನಂಬಿದ್ದರು. ಯುವಕರು ಸಮಾಜದ ಪರಿವರ್ತನೆಗೆ ಪ್ರೇರಕ ಶಕ್ತಿ ಎಂದು ತಿಳಿದು, ಯುವ ಮನಸ್ಸುಗಳ ಸುಪ್ತ ಶಕ್ತಿ ಮತ್ತು ಪ್ರತಿಭೆ ಜಾಗೃತಗೊಳಿಸುವಲ್ಲಿ ವಿವೇಕಾನಂದರ ಪಾತ್ರ ಅನನ್ಯ ಎಂದು ಹೇಳಿದರು.

ಶಿಕ್ಷಕಿ ರೂಪಾ ಶಹಾಪುರ ಮಾತನಾಡಿ, ಭಾರತ ಅಷ್ಟೇ ಅಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ವಿವೇಕರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿ ಆದರ್ಶವಾಗಿದೆ. ಅವರು ಪ್ರಪಂಚದ ಆಧ್ಯಾತ್ಮಿಕ ಗುರು, ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ಯುವಜನತೆಗೆ ನೀಡಿದ ಅವರ ಕರೆ ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬುದು ಸರ್ವಕಾಲಕ್ಕೂ ನೆನೆಯುವ, ಯುವಕರನ್ನು ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರ ಮಾಡುವ ವಾಕ್ಯವಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕ ಎಂ.ಎಸ್ ಪಾಪನಾಳಮಠ, ಭೀಮಾಶಂಕರ ಕೋರೆ, ವೀರೇಶ ಹುಣಶ್ಯಾಳ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ಲಕ್ಷ್ಮೀ ಮೇತ್ರಿ, ರೇಣುಕಾ ಭಜಂತ್ರಿ ಸೇರಿ ಅನೇಕರು ಇದ್ದರು.