ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಕನ್ನಡ ನಾಡಿನಲ್ಲಿ ಕನ್ನಡದ ಜಾಗೃತಿ ಮೂಡಿಸುವ ಅನಿವಾರ್ಯತೆ ಒದಗಿರುವುದು ವಿಷಾದನೀಯ ಎಂದು ಅಥಣಿಯ ವಿಶ್ರಾಂತ ಉಪನ್ಯಾಸಕ ಹಾಗೂ ಸಾಹಿತಿ ಬಾಳಾಸಾಹೇಬ ಲೋಕಾಪೂರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಸುಕ್ಷೇತ್ರ ಗಚ್ಚಿನ ಮಠದಲ್ಲಿ ಆಯೋಜಿಸಿದ್ದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕ್ರತಿಕ ಸಂಭ್ರಮ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ಬೇಡವಾದ ಗಡಿ ಮತ್ತು ಭಾಷಾ ವಿವಾದ ಕೆಲವರ ಹಿತಾಸಕ್ತಿಯಿಂದ ಜೀವಂತವಾಗಿಡಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಅಂತ್ಯ ಹಾಡಲು ಪ್ರತಿಯೊಬ್ಬರಲ್ಲಿ ಅಖಂಡ ಕರ್ನಾಟಕದ ಪರಿಕಲ್ಪನೆ ಮೂಡಬೇಕು ಎಂದರು.
ಕರ್ನಾಟಕದ ಗಡಿ ಭಾಗದ ಸುಮಾರು 17 ಜಿಲ್ಲೆಗಳ ಜನರು ಗಡಿ, ಭಾಷಾ ವಿವಾದಗಳಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತ ಜೀವನ ನಡೆಸಬೇಕಿದೆ. ಮಹಾರಾಷ್ಟ್ರ, ಆಂಧ್ರ, ಕೇರಳ, ಗೋವಾದಲ್ಲಿ ಸಿಕ್ಕ ಬಹುತೇಕ ಶಾಸನಗಳು ಕನ್ನಡದಲ್ಲಿವೆ. ಇವುಗಳನ್ನು ಗಮನಿಸಿದಾಗ ಆ ಸ್ಥಳಗಳು ಮೂಲತಃ ಕರ್ನಾಟಕದ್ದಾಗಿದ್ದವು. ಗಡಿ ನಾಡಿನಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡ ಅಭಿವೃದ್ಧಿ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಗಳು ಶ್ರಮಿಸಬೇಕಿದೆ. ಗಡಿ ನಾಡನಲ್ಲಿ ಗಡಿನಾಡು ಸಾಂಸ್ಕೃತಿಕ ಪ್ರಾಧಿಕಾರ ರಚನೆ, ಕೈಗಾರಿಕೆಗಳ ಸ್ಥಾಪನೆ ಮಾಡುವ ಮೂಲಕ ಗಡಿ ಕನ್ನಡಿಗರ ಆರ್ಥಿಕ ಸಭಲತೆಗೆ ಸಹಕರಿಸಬೇಕು ಹಾಗೂ ಪ್ರತಿ ಸರ್ಕಾರಿ ನೌಕರರು ಕನಿಷ್ಠ ಮೂರು ವರ್ಷ ಗಡಿ ಭಾಗದಲ್ಲಿ ಸೇವೆ ಸಲ್ಲಿಸುವುದನ್ನು ಸರ್ಕಾರ ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿದರು.ಸಮಾರಂಭದ ಅತಿಥಿ ಡಾ.ಮಲ್ಲಿಕಾರ್ಜುನ ಹಂಜಿ, ಅರವಿಂದರಾವ್ ದೇಶಪಾಂಡೆ, ಗಜಾನನ ಮಂಗಸೂಳಿ ಮಾತನಾಡಿದರು. ಸಾನ್ನಿಧ್ಯವನ್ನು ಅಥಣಿ ಗಚ್ಚಿನಮಠ ಮನಿಪ್ರ ಶಿವಬಸವ ಸ್ವಾಮಿಗಳು ವಹಿಸಿದ್ದರು. ಕವಿವ ಸಂಘದ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಸಂಘ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಗೆ ಗಡಿ ನಾಡಿನ ಜನರ ಸಹಕಾರ ಶ್ಲಾಘನೀಯವಾಗಿದೆ ಎಂದುರು.ಸುಕ್ಷೇತ್ರ ಗಚ್ಚಿನಮಠ, ಮೋಟಗಿಮಠ, ವಿಮೋಚನಾ ಸಂಸ್ಥೆ, ಕಸಾಪ ಹಾಗೂ ಸಾಹಿತ್ಯ ಸಂಸ್ಕೃತಿಕ ಸಂಘ ಅಥಣಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕವಿವಿ ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ಶಿವಾನಂದ ಭಾವಿಕಟ್ಟಿ, ಡಾ. ಸಂಜೀವ ಕುಲಕರ್ಣಿ, ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು, ಶಿವಾನಂದ ಟವಳಿ ನಿರೂಪಿಸಿದರು, ವೀರಣ್ಣ ವಡ್ಡಿನ ವಂದಿಸಿದರು.