ಪಾರ್ವತಮ್ಮ ಕಾನ್ವೆಂಟ್ ವತಿಯಿಂದ ಆಯೋಜಿಸಿದ್ದ 30ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಕ್ಕಳ ಮನಸ್ಸು ಬಿಳಿ ಹಾಳೆಯಂತಿದ್ದು, ಪೋಷಕರು ನೀಡುವ ಮಾತು ನಡವಳಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳಿದರು. ಒಂದು ವರ್ಷದ ನಂತರ ಮಕ್ಕಳಿಗೆ ಮನೆಯ ಆಹಾರವನ್ನೇ ನೀಡಬೇಕು, ಅತಿಯಾದ ಖಾದ್ಯ ತಿನಿಸುಗಳಿಂದ ದೂರವಿಡಬೇಕು ಎಂದು ಸೂಚಿಸಿದರು. ಮಕ್ಕಳಲ್ಲಿ ಸಹಜವಾಗಿ ಇರುವ ಕುತೂಹಲವನ್ನು ಉತ್ತೇಜಿಸಬೇಕು, ಅವರು ಕೇಳುವ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವುದರಿಂದ ಜ್ಞಾನಾರ್ಜನೆ ಸಾಧ್ಯವಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಕ್ಕಳ ಮನಸ್ಸಿನ ಮೇಲೆ ಪೋಷಕರ ಮಾತುಗಳು ಆಳವಾದ ಪರಿಣಾಮ ಬೀರುತ್ತವೆ; ಆದ್ದರಿಂದ ಮಕ್ಕಳ ಎದುರು ಮಾತನಾಡುವಾಗ ಪೋಷಕರು ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ವೈದ್ಯೆ ಡಾ. ನಳಿನಿ ಸಲಹೆ ನೀಡಿದರು.ನಗರದ ವೀರಶೈವ ಸಮುದಾಯ ಭವನದಲ್ಲಿ ಪಾರ್ವತಮ್ಮ ಕಾನ್ವೆಂಟ್ ವತಿಯಿಂದ ಆಯೋಜಿಸಿದ್ದ 30ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಕ್ಕಳ ಮನಸ್ಸು ಬಿಳಿ ಹಾಳೆಯಂತಿದ್ದು, ಪೋಷಕರು ನೀಡುವ ಮಾತು ನಡವಳಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳಿದರು. ಒಂದು ವರ್ಷದ ನಂತರ ಮಕ್ಕಳಿಗೆ ಮನೆಯ ಆಹಾರವನ್ನೇ ನೀಡಬೇಕು, ಅತಿಯಾದ ಖಾದ್ಯ ತಿನಿಸುಗಳಿಂದ ದೂರವಿಡಬೇಕು ಎಂದು ಸೂಚಿಸಿದರು. ಮಕ್ಕಳಲ್ಲಿ ಸಹಜವಾಗಿ ಇರುವ ಕುತೂಹಲವನ್ನು ಉತ್ತೇಜಿಸಬೇಕು, ಅವರು ಕೇಳುವ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವುದರಿಂದ ಜ್ಞಾನಾರ್ಜನೆ ಸಾಧ್ಯವಾಗುತ್ತದೆ ಎಂದರು.
ಮಕ್ಕಳನ್ನು ಅತಿಯಾದ ಟಿವಿ ಹಾಗೂ ಮೊಬೈಲ್ ಬಳಕೆಯಿಂದ ದೂರವಿಡಬೇಕು, ಅವರಲ್ಲಿ ಆತ್ಮಸ್ಥೈರ್ಯ ಬೆಳೆಸಬೇಕು ಹಾಗೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಡಾ. ನಳಿನಿ ಸಲಹೆ ನೀಡಿದರು. ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದರು. ಕಳೆದ 30 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವ ಪಾರ್ವತಮ್ಮ ಕಾನ್ವೆಂಟ್‌ಗೆ ಅವರು ಶುಭಾಶಯಗಳನ್ನು ಸಲ್ಲಿಸಿದರು.ಉಪನ್ಯಾಸಕ ನಯಾಜ್ ಅಹಮದ್ ಮಾತನಾಡಿ, ಈ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತು, ಮಾನವೀಯ ಮೌಲ್ಯಗಳು ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಪುತ್ರಿಯೂ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಮಕ್ಕಳಿಗೆ ದೃಢವಾದ ಶೈಕ್ಷಣಿಕ ಅಡಿಪಾಯವನ್ನು ಈ ಶಾಲೆ ಹಾಕಿಕೊಡುತ್ತಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಹಾಗೂ ಸಂಸ್ಥೆಯ ಅಧ್ಯಕ್ಷ ಕೊಟ್ರಯ್ಯ ಮಾತನಾಡಿ, ಪೋಷಕರ ಹಾಗೂ ಸಮಾಜದ ಸಹಕಾರದಿಂದ ಶಾಲೆ ಮೂರು ದಶಕಗಳಿಂದ ಶಿಕ್ಷಣ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು. ಮಕ್ಕಳ ಪ್ರತಿಭೆ ಹೊರತರುವತ್ತ ವಿಶೇಷ ಗಮನ ನೀಡಲಾಗುತ್ತಿದ್ದು, ಉತ್ತಮ ಭವಿಷ್ಯಕ್ಕೆ ಇಲ್ಲಿ ಭದ್ರ ಅಡಿಪಾಯವನ್ನು ಹಾಕಲಾಗುತ್ತಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಕೆ.ಪಿ. ಮಂಜುಳಾ ವಾರ್ಷಿಕ ವರದಿಯನ್ನು ಮಂಡಿಸಿ, ಶಾಲೆಯ ಪ್ರಗತಿ ಹಾಗೂ ಮಕ್ಕಳ ಶೈಕ್ಷಣಿಕ-ಸಾಂಸ್ಕೃತಿಕ ಚಟುವಟಿಕೆಗಳ ವಿವರಗಳನ್ನು ನೀಡಿದರು. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದ ಅಂಗವಾಗಿ ಚಿಣ್ಣರು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಆಕರ್ಷಿಸಿ ಮೆಚ್ಚುಗೆ ಗಳಿಸಿದವು.