ಸ್ವಚ್ಚ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ದೇವಾಲಯಗಳು, ಪ್ರವಾಸಿ ಸ್ಥಳಗಳು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ನಿತಿನ್ ಚಕ್ಕಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ವಚ್ಚ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ದೇವಾಲಯಗಳು, ಪ್ರವಾಸಿ ಸ್ಥಳಗಳು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ನಿತಿನ್ ಚಕ್ಕಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಸೋಮವಾರ ಜಿಲ್ಲೆಯಾದ್ಯಂತ ಎಲ್ಲ ಪ್ರವಾಸಿ ಸ್ಥಳ ಹಾಗೂ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಶುಚಿತ್ವಕ್ಕೆ ಒತ್ತು ನೀಡಲು ತೀರ್ಮಾನಿಸಲಾಯಿತು. 16 ರಂದು ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ, ಭಾಗಮಂಡಲ, ಪ್ರವಾಸಿ ಸ್ಥಳಗಳಾದ ಮಡಿಕೇರಿ ತಾಲ್ಲೂಕಿನ ಅಬ್ಬಿ ಜಲಪಾತ, ನಾಲ್ಕುನಾಡು ಅರಮನೆ, ರಾಜರ ಗದ್ದುಗೆ, ರಾಜಾಸೀಟು, ಕೋಟೆ, ಅಬ್ಬಿ ಜಲಪಾತ, ಚೇಲಾವರ ಜಲಪಾತ, ಕುಶಾಲನಗರ ತಾಲೂಕಿನ ದುಬಾರೆ ರಿವರ್ ರ‍್ಯಾಫ್ಟಿಂಗ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಹಾರಂಗಿ ಉದ್ಯಾನವನ ಆನೆ ಶಿಬಿರ ಮತ್ತು ಹಿನ್ನೀರಿನ ಸಾಹಸ ಕ್ರೀಡೆ ಸ್ಥಳಗಳು, ಚಿಕ್ಲಿ ಹೊಳೆ, ಸೋಮವಾರಪೇಟೆ ತಾಲೂಕಿನ ಹೊನ್ನಮ್ಮ ಕೆರೆ, ಮಕ್ಕಳ ಗುಡಿ ಬೆಟ್ಟ, ಕೋಟೆ ಬೆಟ್ಟ, ಸೂರ್ಲಬ್ಬಿ ಜಲಪಾತ ಮತ್ತು ಮಲ್ಲಳ್ಳಿ ಜಲಪಾತ, ಪೊನ್ನಂಪೇಟೆ ತಾಲೂಕಿನ ಬರ್ಪುಹೊಳೆ ರಿವರ್ ರ‍್ಯಾಫ್ಟಿಂಗ್ ಮತ್ತು ಇರ್ಪು ಜಲಪಾತ ಸುತ್ತಮುತ್ತ ಸ್ವಚ್ಛತಾ ಅಭಿಯಾನ ನಡೆಯಲಿದೆ.

ಮಡಿಕೇರಿ ನಗರದಲ್ಲಿ ವಿರಾಜಪೇಟೆ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ(ಮಂಗಳೂರು ರಸ್ತೆ), ಮಡಿಕೇರಿ-ಸಿದ್ದಾಪುರ ರಸ್ತೆ ಮತ್ತು ಮಡಿಕೇರಿ-ಮೈಸೂರು ರಸ್ತೆ ಈ ವ್ಯಾಪ್ತಿಯ 2 ಕಿ,.ಮೀ ವರೆಗೆ ಸ್ವಚ್ಛತಾ ಅಭಿಯಾನ ನಡೆಯಲಿದೆ. ಕುಶಾಲನಗರದಲ್ಲಿ ಕೊಪ್ಪ ಗೇಟಿನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ, ಸೋಮೇಶ್ವರ ದೇವಸ್ಥಾನದಿಂದ ಕೋಣಮಾರಮ್ಮ ದೇವಸ್ಥಾನ ವೃತ್ತದ ಮುಖಾಂತರ ಐಬಿ ರಸ್ತೆಯಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ, ತಾವರೆಕೆರೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಕೆಎಸ್‌ಆರ್‌ಸಿ ಬಸ್ ನಿಲ್ದಾಣದವರೆಗೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಯಿತು. ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ನಿತಿನ್ ಚಕ್ಕಿ ಮಾತನಾಡಿ ಸ್ವಚ್ಚ ಹಾಗೂ ಸುಂದರ ಕೊಡಗು ಹೆಸರಿನಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಜನರು ಮಾರುಕಟ್ಟೆಗೆ ಹೋಗುವಾಗ ಸ್ವತಃ ಮನೆಯಿಂದ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕೇಬೇಕಿದೆ ಎಂದು ಉಪ ವಿಭಾಗಾಧಿಕಾರಿ ಮನವಿ ಮಾಡಿದರು.

ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ ಮಾತನಾಡಿ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛ ಕೊಡಗು ಮತ್ತು ಸುಂದರ ಕೊಡಗು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ಮೋಂತಿ ಗಣೇಶ್ ಅವರು ಮಾತನಾಡಿ ಮಡಿಕೇರಿ ನಗರದ ಹಲವು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲಾಗುತ್ತದೆ ಎಂದರು. ಟೂರ್ ಅಂಡ್ ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷ ವಸಂತ ಮಾತನಾಡಿ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಚೇಂಬರ್ ಆಪ್ ಕಾಮರ್ಸ್ ಜಿಲ್ಲಾ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಮಾತನಾಡಿದರು. ತಹಸೀಲ್ದಾರ್ ಶ್ರೀಧರ, ಎಫ್‌ಎಂಸಿ ಕಾಲೇಜಿನ ಪ್ರಾಂಶುಪಾಲರಾದ ರಾಘವ, ದುಬಾರೆ ರಿವರ್ ರ‍್ಯಾಫ್ಟಿಂಗ್ ಅಸೋಷಿಯೇಷನ್ ಅಧ್ಯಕ್ಷರಾದ ಉತ್ತಪ್ಪ, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಕಾಲೇಜಿನ ಪ್ರಾಂಶುಪಾಲರು, ವಿವಿಧ ದೇವಾಲಯಗಳ ಕಾರ್ಯ ನಿರ್ವಹಣಾಧಿಕಾರಿಗಳು ಇತರರು ಇದ್ದರು.