‘ಸಮೀಕ್ಷೆ ಹೆಸರಲ್ಲಿ ಸಿಎಂ ಚಂದ್ರಲೋಕ ನೋಡಿ ಹೋದ್ರು’

| Published : Oct 05 2025, 01:00 AM IST

‘ಸಮೀಕ್ಷೆ ಹೆಸರಲ್ಲಿ ಸಿಎಂ ಚಂದ್ರಲೋಕ ನೋಡಿ ಹೋದ್ರು’
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗ ಶನಿವಾರ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಭೀಮಾನದಿಯ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿತು.

ಕನ್ನಡಪ್ರಭ ವಾರ್ತೆ ಇಂಡಿ

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗ ಶನಿವಾರ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಭೀಮಾನದಿಯ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿತು.

ಭೀಮಾನದಿಯ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಇಂಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ, ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಚಿವರು ವೈಮಾನಿಕ ಸಮೀಕ್ಷೆ ಹೆಸರಿನಲ್ಲಿ ಆಕಾಶದಲ್ಲಿ ಹಾರಾಡಿ ಚಂದ್ರಲೋಕ ನೋಡಿದ್ದಾರೆಯೇ ವಿನಃ, ರೈತರ ಭೂಮಿ ಹಾಳಾಗಿದ್ದನ್ನು ನೋಡಿಲ್ಲ. ಸಿದ್ದರಾಮಯ್ಯನವರಿಗೆ ನೀರಿನಲ್ಲಿ ಇಳಿಯಲು ಆಗಲ್ಲ. ಆಕಾಶದಿಂದ ಬಂದು, ಆಕಾಶದಲ್ಲಿಯೇ ಹೋಗಿದ್ದಾರೆ. ಪರಿಹಾರವು ಅಷ್ಟೇ ಆಕಾಶದಿಂದಲೇ ನೀಡುತ್ತಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಏಕೆ ಬಂದಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲರು ಹೇಳುವುದನ್ನು ನೋಡಿದರೆ ಕಾಂಗ್ರೆಸ್‌ನವರು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗಿದೆ. ನಾವು ಪರಿಹಾರ ನೀಡಲು ಸಣ್ಣ ಸರ್ವೇ ನಡೆಸಿದ್ದೇವೆ ಎಂದು ಹೇಳಿದರು.

ರೈತರಿಗೆ ಬೆಳೆ ಪರಿಹಾರಕ್ಕಾಗಿ ನೀಡಬೇಕಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದಾರೆ. ರೈತರ ಶಾಪ ಕಾಂಗ್ರೆಸ್‌ನವರಿಗೆ ತಟ್ಟುತ್ತದೆ. ಪ್ರವಾಹ, ಮಳೆಯಿಂದ ಹಾನಿಯಾದ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷದ ಸಭೆ ಕರೆಯಬೇಕಿತ್ತು. ಏಕೆ ಕರೆದಿಲ್ಲ?. ಕೇಂದ್ರಕ್ಕೆ ಒಂದು ಮನವಿ ಸಹ ಸಲ್ಲಿಸಿಲ್ಲ. ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಹಾಗೂ ಮನಮೋಹನ್‌ ಸಿಂಗ್ ಅವಧಿಯಲ್ಲಿ ರಾಜ್ಯಕ್ಕೆ ಪ್ರವಾಹ ಅನುದಾನ ಎಷ್ಟು ಬಿಡುಗಡೆ ಮಾಡಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲೆಸೆದರು.

ಸಿದ್ದರಾಮಯ್ಯನವರು ಸಿಎಂ ಬದಲಾವಣೆ, ಮಂತ್ರಿಮಂಡಲದ ಬದಲಾವಣೆಯಲ್ಲಿಯೇ ಬ್ಯುಸಿಯಾಗಿದ್ದಾರೆ. ಹೋದಲ್ಲೆಲ್ಲ ಜನರು ಘೇರಾವ್‌ ಹಾಕುತ್ತಾರೆಂದು ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ರೈತರಲ್ಲ, ಸಮಾಜವಾದಿ ಬಿಟ್ಟು, ಈಗ ಮಜಾವಾದಿ ಆಗಿದ್ದಾರೆ. ನಮ್ಮ ತಂಡ ಇಲ್ಲಿ ರಾಜಕಾರಣ ಮಾಡಲು‌ ಬಂದಿಲ್ಲ. ರೈತರ ಕಷ್ಟ ಕೇಳಲು ಬಂದಿದ್ದೇವೆ. ಸಿದ್ದರಾಮಯ್ಯನವರ ಗುಂಪು ಬೆಂಗಳೂರಲ್ಲಿ, ಡಿ.ಕೆ.ಶಿವಕುಮಾರ ಗುಂಪು ಮಂಡ್ಯದಲ್ಲಿ, ಜಾರಕಿಹೊಳಿ ಅವರ ಗುಂಪು ಬೆಳಗಾವಿಯಲ್ಲಿ, ಪರಮೇಶ್ವರ ಗುಂಪು ತುಮಕೂರಿನಲ್ಲಿದೆ. ಈ ಗದ್ದಲದಲ್ಲಿ ಅವರು ರಾಜ್ಯದ ಜನತೆಯ ಕಷ್ಟವನ್ನು ಹೇಗೆ ಕೇಳುತ್ತಾರೆ?. ರಾಜ್ಯದಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಹೆಕ್ಟೇರಿಗೆ ₹ 25 ಸಾವಿರ, ಮನೆ ಬಿದ್ದವರಿಗೆ ₹5 ಲಕ್ಷ ನೀಡಿದ್ದೇವೆ. ನಾವು ಇದಕ್ಕಿಂತ ಹೆಚ್ಚಿಗೆ ನೀಡಿದ್ದೇವೆ ಎಂದು ಸಿಎಂ ಧೈರ್ಯದಿಂದ ಹೇಳಲಿ ಎಂದು ಸವಾಲು ಹಾಕಿದರು.

ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಧ್ವನಿ ಮೊಳಗಿಸಿ ಸರ್ಕಾರದ ಕಣ್ಣು ತೆರೆಸುತ್ತೇವೆ. ರೈತರಿಗೆ, ಮನೆ ಕಳೆದುಕೊಂಡವರಿಗೆ ನ್ಯಾಯ ಒದಗಿಸುತ್ತೇವೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ನಿಯೋಗದಲ್ಲಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಹೆಕ್ಟೇರಿಗೆ ₹25 ಸಾವಿರ, ಮನೆ ಬಿದ್ದವರಿಗೆ ₹5 ಲಕ್ಷ ನೀಡಿದ್ದೇವೆ. ನಾವು ಇದಕ್ಕಿಂತ ಹೆಚ್ಚಿಗೆ ನೀಡಿದ್ದೇವೆ ಎಂದು ಸಿಎಂ ಧೈರ್ಯದಿಂದ ಹೇಳಲಿ.

-ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ.