ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯದಶಕಗಳ ಹಿಂದೆ ಬೀಳುತ್ತಿದ್ದ ಮಳೆ ಈಗ ನಿರೀಕ್ಷಿತ ಪ್ರಮಾಣದಲ್ಲಿ ಬೀಳುತ್ತಿಲ್ಲ. ಮಳೆಯನ್ನೇ ನಂಬಿ ಬರಡು ಪ್ರದೇಶದ ರೈತರು ಕೃಷಿಯನ್ನೂ ಮಾಡಲಾಗುವುದಿಲ್ಲ. ಅದಕ್ಕಾಗಿ ಕೃಷಿ ಪದ್ಧತಿಯಲ್ಲಿ ಎಲ್ಲರೂ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ರೈತರು ಆರ್ಥಿಕವಾಗಿ ಸದೃಢರಾಗಬೇಕಾದರೆ ಒಗ್ಗೂಡುವ ಮನಸ್ಸು ಮಾಡಬೇಕು. ಒಗ್ಗೂಡಿ ಸಾಮೂಹಿಕ ಕೃಷಿಯಲ್ಲಿ ತೊಡಗಬೇಕು. ಆ ನಿಟ್ಟಿನಲ್ಲಿ ಮಳವಳ್ಳಿ ತಾಲೂಕಿನ ಪೂರಿಗಾಲಿ ಹೋಬಳಿಯ ರೈತರಿಗೆ ಇಂತಹದೊಂದು ಸದಾವಕಾಶ ದೊರಕಿದೆ. ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಅನ್ನದಾತರಿಗೆ ಸಾಥ್ ನೀಡುವುದಕ್ಕೆ ಸಿದ್ಧವಾಗಿದೆ.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಏಳು ವರ್ಷಗಳ ಹಿಂದೆ ಅಂದಿನ ಸರ್ಕಾರದಿಂದ ಮಂಜೂರು ಮಾಡಿಸಿದ ಯೋಜನೆ ಕೃಷಿಯಲ್ಲಿ ಬದಲಾವಣೆಯ ಕ್ರಾಂತಿ ಸೃಷ್ಟಿಸಬಹುದೆಂಬ ನಿರೀಕ್ಷೆಯನ್ನು ಹುಟ್ಟಿಸಿದೆ. ಈಗಾಗಲೇ ಹನಿ-ತುಂತುರು ನೀರಾವರಿ ಯೋಜನೆಯಡಿ ಮಳವಳ್ಳಿ ತಾಲೂಕಿನ ಹಾಲಗಟ್ಟ ಕೊಪ್ಪಲು ಸೇರಿದಂತೆ ಬಿ.ಜಿ.ಪುರ ಹೋಬಳಿಯ ವಿವಿಧೆಡೆ ಸಾಮೂಹಿಕ ಕೃಷಿ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡಿದೆ. ಇದನ್ನು ಹೋಬಳಿಯಾದ್ಯಂತ ವಿಸ್ತರಣೆ ಮಾಡುವುದಕ್ಕೂ ಮುನ್ನ ಸಾಮೂಹಿಕ ಕೃಷಿಯ ಮಹತ್ವ, ಅದರಿಂದ ಹೇಗೆ ಖರ್ಚನ್ನು ಕಡಿಮೆ ಮಾಡಿಕೊಳ್ಳಬಹುದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಮಾರುಕಟ್ಟೆ ಪ್ರವೇಶಿಸುವುದು ಹೇಗೆ, ಆದಾಯ ಸೃಷ್ಟಿಸಿಕೊಳ್ಳುವ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.೨೫ ಸಾವಿರ ಎಕರೆಗೆ ಅಳವಡಿಕೆ:
ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಬಿ.ಜಿ.ಪುರ ಹೋಬಳಿ ವ್ಯಾಪ್ತಿಯ ೨೫ ಸಾವಿರ ಎಕರೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ವಾರ್ಷಿಕ ೨ ಟಿಎಂಸಿ ನೀರನ್ನು ಪಡೆದುಕೊಳ್ಳಲಾಗುತ್ತಿದೆ. ಹನಿ ಮತ್ತು ತುಂತುರು ನೀರಾವರಿಯಲ್ಲಿ ೩ ರಿಂದ ೪ ತಿಂಗಳ ಬೆಳೆ ಬೆಳೆಯಬೇಕಾದರೆ ಒಂದು ಸಾವಿರ ಎಕರೆ ಪ್ರದೇಶಕ್ಕೆ ೮ ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಸಾಮಾನ್ಯ ಕೃಷಿಯಲ್ಲಿ ಈ ಪ್ರದೇಶಕ್ಕೆ ಎರಡು ಪಟ್ಟು ಹೆಚ್ಚು ನೀರಿನ ಅಗತ್ಯ ಬೀಳುತ್ತದೆ. ಇದರಿಂದ ಕಡಿಮೆ ನೀರನ್ನು ಬಳಸಿ ಬೆಳೆ ಬೆಳೆಯುವುದಕ್ಕೆ ಈ ಯೋಜನೆಯಡಿ ವಿಪುಲ ಅವಕಾಶಗಳಿವೆ ಎನ್ನುವುದು ನೀರಾವರಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.ಪ್ರಸ್ತುತ ದಿನಗಳಲ್ಲಿ ದೊಡ್ಡ ಹಿಡುವಳಿದಾರರಿಗಿಂತ ಸಣ್ಣ ಹಿಡುವಳಿದಾರರ ಸಂಖ್ಯೆಯೇ ಹೆಚ್ಚಾಗಿದೆ. ಪ್ರತ್ಯೇಕವಾಗಿ ಕೃಷಿ ಮಾಡುವುದರಿಂದ ಲಾಭಾಂಶ ಕಾಣುವುದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಒಂದು ಸಾವಿರ ಎಕರೆಗೆ ಅನುಗುಣವಾಗಿ ಆ ಪ್ರದೇಶದ ರೈತರು ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚನೆ ಮಾಡಿಕೊಂಡು ಸಾಮೂಹಿಕವಾಗಿ ಕೃಷಿಯಲ್ಲಿ ತೊಡಗಿದರೆ ಅಷ್ಟೂ ಜಮೀನಿನ ರೈತರು ಗುಣಮಟ್ಟದ ಬೆಳೆ ಬೆಳೆದು ಹಣ ಗಳಿಸಬಹುದು.
೨೬ ಸಂಘಗಳ ರಚನೆ:ಬಿ.ಜಿ.ಪುರ ಹೋಬಳಿಯಲ್ಲಿ ಈವರೆಗೆ ೨೬ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚನೆ ಮಾಡಲಾಗಿದೆ. ಒಂದೊಂದು ಸಂಘದಲ್ಲಿ ಕನಿಷ್ಠ ೭೪ ರಿಂದ ೧೭೧ ಜನ ಸದಸ್ಯರಿದ್ದಾರೆ. ಒಟ್ಟು ೨೫೭೦ ರೈತರು ಸದಸ್ಯತ್ವ ಪಡೆದುಕೊಂಡಿದ್ದು, ಪ್ರತಿ ಸಂಘಕ್ಕೆ ೧೧ ಮಂದಿ ನಿರ್ದೇಶಕರನ್ನು ಆರಿಸಲಾಗಿದೆ. ಈ ಜಮೀನಿನ ರೈತರು ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ಹನಿ ಮತ್ತು ತುಂತುರು ನೀರಾವರಿಯನ್ನು ಅಳವಡಿಸಲಾಗಿದೆ. ಬೆಳೆ ಆಯ್ಕೆಯನ್ನು ಆಯಾ ಸೊಸೈಟಿಯಲ್ಲಿರುವ ರೈತರೇ ಆಯ್ಕೆ ಮಾಡಬಹುದು. ಒಂದು ವೇಳೆ ಅವರಲ್ಲಿ ಒಮ್ಮತ ಮೂಡದಿದ್ದಲ್ಲಿ ಸಂಘದ ಸದಸ್ಯರ ಬಹುಮತದ ಆಧಾರದ ಮೇಲೆ ಬೆಳೆ ಆಯ್ಕೆಯನ್ನು ಮಾಡಲಾಗುತ್ತದೆ. ಇದಕ್ಕೆ ಎಲ್ಲರೂ ಬದ್ಧರಾಗಿರುವಂತೆ ನಿಯಮ ರೂಪಿಸಲಾಗಿದೆ.
ಜಮೀನು ಯಾರ ಹೆಸರಿನಲ್ಲಿರುತ್ತದೋ ಅವರು ಸಂಘದ ಸದಸ್ಯರಾಗಿರುವುದಕ್ಕೆ ಅರ್ಹರಾಗಿರುತ್ತಾರೆ. ಪೌತಿ ಖಾತೆ ಮಾಡಿಸಿಕೊಂಡಿಲ್ಲದವರು ಅರ್ಜಿ ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಂಡರೆ ಸದಸ್ಯರಾಗುವುದಕ್ಕೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವೈವಿಧ್ಯಮಯ ಬೆಳೆ:
ಮಳವಳ್ಳಿ ತಾಲೂಕಿನ ಹಾಲಗಟ್ಟೆ ಕೊಪ್ಪಲು ಎಂಬ ಗ್ರಾಮದಲ್ಲಿ ಸಾಮೂಹಿಕ ಕೃಷಿ ಪದ್ಧತಿಯಡಿ ಟಮ್ಯಾಟೋ, ದಪ್ಪ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಹೂಕೋಸು, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗಿದೆ. ಈಗಾಗಲೇ ರಾಗಿಯನ್ನು ಕೊಯ್ಲು ಮಾಡಲಾಗಿದೆ. ಬೇರೆ ಬೇರೆ ಬೆಳೆಗಳು ಕೊಯ್ಲಿನ ಹಂತ ತಲುಪಿವೆ. ಆಧುನಿಕ ಕೃಷಿ ಪದ್ಧತಿಗೆ ಹಲವು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಮುಂದಿನ ದಿನಗಳಲ್ಲಿ ಒಲವು ತೋರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ನೂ ಕೆಲವೆಡೆ ಸಾಮೂಹಿಕ ಕೃಷಿಯ ಕುರಿತಂತೆ ರೈತ ಸಮುದಾಯದಲ್ಲಿ ಚರ್ಚೆಗಳು ಶುರುವಾಗಿವೆ.೧೦ ಹೆಕ್ಟೇರ್‌ಗೆ ೪ ಹೈಡ್ರಾಲಿಕ್ ವಾಲ್:
ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆಯಲ್ಲಿ ಪ್ರತಿ ೧೦ ಹೆಕ್ಟೇರ್‌ನ ಒಂದು ಬ್ಲಾಕ್‌ಗೆ ೪ ಹೈಡ್ರಾಲಿಕ್ ವಾಲ್‌ಗಳನ್ನು ಅಳವಡಿಸಲಾಗುವುದು. ಒಂದು ಹೈಡ್ರಾಲಿಕ್ ವಾಲ್ ಮೂಲಕ ೬ ಎಕರೆಗೆ ನೀರು ಪೂರೈಸಬಹುದು. ನೀರು ಎಲ್ಲಿಯೂ ವ್ಯರ್ಥವಾಗದೆ ಬೆಳೆಯ ಬುಡಕ್ಕೆ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಹನಿ ನೀರಾವರಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ತುಂತುರು ನೀರಾವರಿಗೆ ಸಣ್ಣ ಪೈಪ್‌ಗಳನ್ನು ಜೋಡಣೆ ಮಾಡಿದ್ದು, ಅವುಗಳಿಗೆ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿ ಬೆಳೆಗಳಿಗೆ ನೀರನ್ನು ಒದಗಿಸಲಾಗುತ್ತದೆ.ರೈತರ ಒಗ್ಗೂಡಿದರಷ್ಟೇ ಯೋಜನೆ ಸಾಫಲ್ಯ:
ಈ ವ್ಯವಸ್ಥೆಯಡಿ ೩ ತಿಂಗಳು, ೬ ತಿಂಗಳು, ೧೦ ತಿಂಗಳ ಬೆಳೆಗಳನ್ನು ಬೆಳೆಯಬಹುದು. ಅರಣ್ಯ ಕೃಷಿ ಮಾಡುವುದಕ್ಕೆ ಇಷ್ಟವಿದ್ದರೆ ಅದಕ್ಕೂ ಈ ಯೋಜನೆಯಡಿ ಅವಕಾಶಗಳಿವೆ. ಇದರ ಜೊತೆಗೆ ಗ್ರಾಮದ ಅಕ್ಕ-ಪಕ್ಕದ ಕೆರೆ-ಕಟ್ಟೆಗಳಿಗೂ ನೀರು ತುಂಬಿಸುವುದು. ಬೆಳೆಗಳಿಗೆ ನಿರಂತರವಾಗಿ ನೀರು ಒದಗಿಸುವ ಹನಿ-ತುಂತುರು ನೀರಾವರಿ ಯೋಜನೆ ಸಾಫಲ್ಯಕ್ಕೆ ಬಿ.ಜಿ.ಪುರ ಹೋಬಳಿಯ ರೈತರಲ್ಲರೂ ಒಗ್ಗೂಡಿ ಸಾಮೂಹಿಕ ಕೃಷಿಯಲ್ಲಿ ತೊಡಗಬೇಕಿದೆ.ನಿರ್ದಿಷ್ಟ ಪ್ರದೇಶದಲ್ಲಿ ಒಂದು ಸಾವಿರ ಎಕರೆಗೆ ಒಂದೊಂದು ರೀತಿಯ ಮೌಲ್ಯವರ್ಧಿತ ಬೆಳೆ ಬೆಳೆಯುವುದರಿಂದ ಸಂಸ್ಕರಣಾ ಘಟಕಗಳು ತೆರೆದುಕೊಳ್ಳುತ್ತವೆ. ಇದರಿಂದ ಉತ್ಪನ್ನಗಳ ಮೌಲ್ಯ ವೃದ್ಧಿಯಾಗುತ್ತದೆ. ನೇರವಾಗಿ ರೈತರೇ ಮಾರುಕಟ್ಟೆ ಪ್ರವೇಶಿಸಬಹುದು. ಇದರಿಂದ ಆದಾಯವೂ ಹೆಚ್ಚಳವಾಗುತ್ತದೆ. ಸ್ಥಳೀಯವಾಗಿ ಉದ್ಯೋಗಗಳೂ ಸೃಷ್ಟಿಯಾಗುತ್ತವೆ ಎಂಬುದು ಯೋಜನೆಯ ಹಿಂದಿರುವ ಕನಸಾಗಿದೆ.ಹನಿ-ತುಂತುರು ನೀರಾವರಿ ಯೋಜನೆಯಲ್ಲಿ ರಾಗಿ ಬೆಳೆದಿದ್ದೆವು. ಅದನ್ನು ಕೊಯ್ಲು ಮಾಡಿದ್ದೇವೆ. ರಾಗಿಯನ್ನು ಮನೆಗೆ ಸೇರಿಸಿಕೊಂಡಿದ್ದೇವೆ. ಸಾಮೂಹಿಕ ಕೃಷಿ ಹೊಸದಾಗಿದ್ದರೂ ಉತ್ತಮವಾಗಿದೆ. ಇದರಲ್ಲಿ ಎಲ್ಲರಿಗೂ ಆದಾಯವಿದೆ. ಲಾಭವನ್ನೂ ಕಾಣಬಹುದು. ಹೊಸ ಕೃಷಿ ವ್ಯವಸ್ಥೆಯಾಗಿರುವುದರಿಂದ ರೈತರು ನಿಧಾನವಾಗಿ ಒಲವು ತೋರಲಿದ್ದಾರೆ. ನಾವಂತೂ ಇದೇ ಕೃಷಿ ವ್ಯವಸ್ಥೆಯಲ್ಲಿ ಮುಂದುವರೆಯುತ್ತೇವೆ.
- ಚಿಕ್ಕಮಾದಯ್ಯ, ಹಾಲಘಟ್ಟಕೊಪ್ಪಲು, ಮಳವಳ್ಳಿ ತಾ.ಹನಿ-ತುಂತುರು ನೀರಾವರಿ ಯೋಜನೆಯನ್ನು ನೀರನ್ನೇ ಕಾಣದ ಸಂಕಷ್ಟದಲ್ಲಿರುವ ರೈತರಿಗಾಗಿ ತಂದಿದ್ದೇನೆ. ಇದರಲ್ಲಿ ರಾಜಕೀಯ ಬೆರೆಸಬೇಡಿ. ಇಂದಿನ ಕಾಲಘಟ್ಟದಲ್ಲಿ ಎಲ್ಲರೂ ಸಾಮೂಹಿಕ ಕೃಷಿಯಲ್ಲಿ ತೊಡಗಬೇಕು. ಅದರಿಂದ ಮಾತ್ರ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯ. ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಿಕೊಂಡು ವೈವಿಧ್ಯಮಯ ಬೆಳೆ ಬೆಳೆದು ಮೌಲ್ಯ ವೃದ್ಧಿಸಿಕೊಳ್ಳಬಹುದು. ಇದಕ್ಕೆ ರೈತರ ಸಂಪೂರ್ಣ ಸಹಕಾರ ಅತ್ಯಗತ್ಯವಾಗಿದೆ.
- ಪಿ.ಎಂ.ನರೇಂದ್ರಸ್ವಾಮಿ, ಶಾಸಕರು, ಮಳವಳ್ಳಿ