ಭಾರತ ಜೋಡೋ ನ್ಯಾಯ ಯಾತ್ರೆಗೆ ತಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

| Published : Jan 24 2024, 02:02 AM IST

ಭಾರತ ಜೋಡೋ ನ್ಯಾಯ ಯಾತ್ರೆಗೆ ತಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿ, ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿ, ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಮೈಲಾರ ಮಹಾದೇವ ವೃತ್ತದಿಂದ ಆರಂಭಗೊಂಡ ಪ್ರತಿಭಟನೆ ಮೆರವಣಿಗೆ ಜೆ.ಪಿ. ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿತು. ಅಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ರಾಹುಲ್ ಗಾಂಧಿ ಅವರು ಈ ಹಿಂದೆ ಭಾರತ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಈಗ ಭಾರತ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ್ದಾರೆ. ಇದರಿಂದ ಅಂಜಿಕೊಂಡಿರುವ ಬಿಜೆಪಿ ಬಲಪ್ರಯೋಗದ ಮೂಲಕ ಯಾತ್ರೆಗೆ ಅಡ್ಡಿ ಪಡಿಸುವ ಕೆಲಸ ಮಾಡುತ್ತಿದೆ. ಇಂತಹ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ ಕೈ ಬಿಡಬೇಕು. ರಾಹುಲ್ ಗಾಂಧಿ ಅವರು ಈ ಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂದರು.

ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ದಮನಕಾರಿ ಆಡಳಿತ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ಪ್ರವೇಶ ನಿರಾಕರಿಸಿ ಹಲ್ಲೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕು. ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿ, ರಾಹುಲ್ ಗಾಂಧಿ ಅವರು ದೇಶದ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಭಾರತ ಜೋಡೋ ನ್ಯಾಯ ಯಾತ್ರೆ ಆರಂಭಿಸಿದ್ದಾರೆ. ಯಾತ್ರೆಯ ಮೂಲಕ ದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸದ ಕೇಂದ್ರ ಸರ್ಕಾರ ಯಾತ್ರೆ ತಡೆಯಲು ಮುಂದಾಗಿರುವುದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಈರಪ್ಪ ಲಮಾಣಿ, ನಗರಸಭೆ ಸದಸ್ಯ ಲಿಂಗರಾಜ ಶಿವಣ್ಣನವರ, ವಿಶಾಲಾಕ್ಷಿ ಆನವಟ್ಟಿ, ಜಮೀರ್‌ಅಹ್ಮದ್ ಜಿಗರಿ, ಗೀತಾ ಪ್ರಕಾಶ ಇತರರು ಪಾಲ್ಗೊಂಡಿದ್ದರು.