ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಗ್ರಾಮೀಣ ಪ್ರದೇಶದಲ್ಲಿರುವ ನಾನಾ ಸಮಸ್ಯೆಗಳ ಅರಿವು ಮೂಡಿಸುವ ಕೆಲಸ ಸಮುದಾಯ ವಾಸ್ತವ್ಯ ಶಿಬಿರಗಳಿಂದ ಆಗಬೇಕಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಹಾನುಬಾಳು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಾನುಬಾಳು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಿಂದ ೩ ದಿನ ನಡೆದ ಸಮುದಾಯ ವಾಸ್ತವ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಕಾರ ಹಾಗೂ ಸಮಾಜ ಸೇವೆಯೆಂಬುದು ಪ್ರತಿಯೊಬ್ಬರ ಯಶಸ್ಸಿನ ದಾರಿಯಷ್ಟೇ ಅಲ್ಲದೆ ಶಿಕ್ಷಣದೊಂದಿಗೆ ಸಂಸ್ಕಾರ ಬಹುಮುಖ್ಯ. ಪ್ರತಿಯೊಬ್ಬ ವ್ಯಕ್ತಿಯೂ ಸೇವೆಯಲ್ಲಿ ಭಗವಂತನನ್ನು ಕಾಣುವಂತಾದಾಗ ಮಾತ್ರ ಆತ್ಮತೃಪ್ತಿ ಸಿಗುತ್ತದೆ. ಅಂತಹ ಆತ್ಮ ತೃಪ್ತಿಯನ್ನು ಕಂಡುಕೊಳ್ಳಲು ನಿಮಗೆ ಈ ಮೂರು ದಿನಗಳ ಶಿಬಿರ ಸಹಕಾರಿಯಾಗಲಿದೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕೆನ್ನುವ ಮನೋಭಾವದಿಂದ ಹೊರಬಂದು ನಮ್ಮಿಂದ ಸಮಾಜಕ್ಕೆ ಕೊಡುಗೆ ಏನೆಂಬುದನ್ನು ಪ್ರತಿಕ್ಷಣ ಆಲೋಚಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಾನುಬಾಳು ಗ್ರಾಮ ಪಂಚಾಯತಿ ಪಿಡಿಒ ಹರೀಶ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಸೇವೆಯ ಮೂಲಕ ಸಮಾಜಕ್ಕೆ ತನ್ನದೇ ಕೊಡುಗೆಗಳನ್ನು ನೀಡಬೇಕು. ಪ್ರಶಿಕ್ಷಣಾರ್ಥಿಗಳಾದ ತಾವು ಕಾಲೇಜಿನಲ್ಲಿ ಒಂದೆಡೆ ಕುಳಿತರೆ ಜ್ಞಾನಾರ್ಜನೆ ಆಗುವುದಿಲ್ಲ. ಅದರ ಬದಲಾಗಿ ಎಲ್ಲ ಪ್ರಶಿಕ್ಷಾಣಾರ್ಥಿಗಳು ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸುವ ಇಂತಹ ಶಿಬಿರಗಳಲ್ಲಿ ಭಾಗವಹಿಸಿ, ಆ ಪ್ರದೇಶದ ಜನರ, ನೋವು ನಲಿವುಗಳ ಕುರಿತು ಚಿಂತನೆ ನಡೆಸಿದಾಗ, ಏಕಾಗ್ರತೆ ಜತೆಗೆ ಜಾಗೃತಿ ಮೂಡಲಿದೆ ಎಂದರು. ಶಿಬಿರಾಧಿಕಾರಿಗಳಾದ ಜೆಎಸ್‌ಎಸ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಮಾತನಾಡಿ, ಮಹಾತ್ಮಗಾಂಧಿ ಹಾಗೂ ಡಾ. ಬಿ.ಆರ್ ಅಂಬೇಡ್ಕರ್‌ರವರ ಅಪೇಕ್ಷೆಯಂತೆ ಗ್ರಾಮ ರಾಜ್ಯದಿಂದ ರಾಮರಾಜ್ಯ ನಿರ್ಮಾಣ ಪರಿಕಲ್ಪನೆ ಯುವಪೀಳಿಗೆಯಿಂದ ಸಾಧ ಹಾಗೂ ಅದೆಲ್ಲದಕ್ಕೂ ಮುಖ್ಯ ಗ್ರಾಮದ ಸ್ವಚ್ಛತೆ. ಹಾಗಾಗಿ ನಾವೆಲ್ಲರೂ ಮೂರು ದಿನದ ಈ ಶಿಬಿರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಶಿಬಿರವನ್ನು ಯಶಸ್ವಿಯಾಗಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾನುಬಾಳು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ.ಆರ್. ಸಂತೋಷ್, ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಂಜುಂಡಪ್ಪ, ಮಾಜಿ ಗ್ರಾ.ಪಂ ಸದಸ್ಯರಾದ ಕುಸುಮ ಭೂಪಾಲ, ಗ್ರಾಮ ಪಂಚಾಯತಿ ಸದಸ್ಯರಾದ ಸೋಮಶೇಖರ್, ಮೋಹನ್ ಕುಮಾರ್, ಪ್ರತಿಮಾ, ಗ್ರಾಮದ ಮುಖಂಡ ಅರುಣ್ ಹಾಗೂ ಜೆಎಸ್‌ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಕ್ರಮ್ ಸಿ.ಬಿ, ಡಾ. ಪ್ರಭುಸ್ವಾಮಿ, ಕಂಪ್ಯೂಟರ್ ನಿರ್ವಾಹಕರಾದ ತಮ್ಮಯ್ಯ, ಟೆಕ್ನಿಷೀಯನ್ ಮಹೇಶ್ ಹಾಜರಿದ್ದರು.