ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮರ್ಪಕವಾಗಿ ಯೋಜನೆ ಮಾಡದೇ ಅನೇಕ ನಿರ್ಬಂಧ ವಿಧಿಸಿದೆ.
ವಿಜಯಪುರ: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ನಿರ್ವಹಣೆಗಾಗಿ ಸಮಿತಿ ರಚಿಸಿ ಅದಕ್ಕೆ ಸಾರ್ವಜನಿಕರ ತೆರಿಗೆ ಹಣದ ಕೋಟ್ಯಂತರ ರೂ. ಖರ್ಚು ಮಾಡಲು ಮುಂದಾಗಿರುವುದು ಅವೈಜ್ಞಾನಿಕ ಎಂದು ಬಿಜೆಪಿ ಯುವ ಮುಖಂಡ ರವಿ ಖಾನಾಪೂರ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮರ್ಪಕವಾಗಿ ಯೋಜನೆ ಮಾಡದೇ ಅನೇಕ ನಿರ್ಬಂಧ ವಿಧಿಸಿದೆ. ಏತನ್ಮಧ್ಯೆ ಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಮತ್ತೊಂದು ಸಮಿತಿ ರಚನೆ ಮಾಡಿ ಕೋಟ್ಯಂತರ ರೂ. ಅನುದಾನ ಬಳಕೆ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಸಮಿತಿ ರಚನೆ ಮಾಡಿ ಗ್ಯಾರಂಟಿ ಅನುಷ್ಠಾನವಾಗಬೇಕಾದರೆ ಗ್ಯಾರಂಟಿ ಹೆಸರಿನಲ್ಲಿ ಗೆದ್ದ ನಿಮ್ಮ ಶಾಸಕರಗಳ ಕೆಲಸವೇನು? ಲೋಕಸಭಾ ಚುನಾವಣೆಯ ಸೋಲುವ ಭಯದಿಂದ ನಿಮ್ಮ ಕುರ್ಚಿ ಭದ್ರಮಾಡಿಕೊಳ್ಳಲು ರಾಜ್ಯದ ಜನರ ತೆರಿಗೆ ಹಣ ಈ ರೀತಿಯ ನಿಮ್ಮ ರಾಜಕೀಯ ಶೋಕಿಗೆ ಖರ್ಚುಮಾಡಲು ಹೊರಟಿರುವ ಮುಖ್ಯಮಂತ್ರಿಗಳ ನಡೆ ಖಂಡನೀಯ ಎಂದರು.