ಸಾರಾಂಶ
ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೆ ತಂದು ರಾಜ್ಯಾದ್ಯಂತ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಸಹಕಾರ ಕುರಿ ಮತ್ತು ಉಣ್ಣೆ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂಚೆ ಘೋಷಣೆ ಮಾಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದರಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೆ ತಂದು ರಾಜ್ಯಾದ್ಯಂತ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ. ರಾಜ್ಯದ ಪ್ರಮುಖ ದೇವರ ದರ್ಶನ ಪಡೆದು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂದು ಹಾರೈಸುತ್ತಿದ್ದಾರೆ. ಅಲ್ಲದೇ ಪ್ರಮುಖ ಪೂಜ್ಯರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಸರ್ಕಾರ ಒಳ್ಳೆಯ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.