ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅನ್ನೋ ಕಾರಣಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಯೋಜನೆಗಳಿಗೆ ಹಣಕಾಸು ಅನುದಾನ ಹಾಗೂ ತೆರಿಗೆ ಪಾಲು ಹಣ ನೀಡುತ್ತಿಲ್ಲ ಎಂದು ರಾಜ್ಯ ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ರಾಯಚೂರು ಸಂಸದ ಜಿ. ಕುಮಾರನಾಯಕ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ರಾಜ್ಯಕ್ಕೆ ತೆರಿಗೆ ಪಾಲು ಬರುತ್ತಿಲ್ಲ, ಕೇಂದ್ರ ದುಡ್ಡು ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇದೆಯೆಂದು ದ್ವೇಷ ಮಾಡುತ್ತಿದೆ ಎಂದು ದೂರಿದ ಸಚಿವ ದರ್ಶನಾಪುರ, ರಾಜ್ಯದಲ್ಲಿ ಜನರು ಬಿಜೆಪಿಗೆ ಓಟ್ ಹಾಕಿಲ್ಲವೇ? ಬಿಜೆಪಿ ಪಕ್ಷದ ಸಂಸದರು, ಶಾಸಕರು ಇಲ್ಲಿಲ್ಲವೇ ? ರಾಜ್ಯಕ್ಕೆ ನೆರವು ನೀಡುವ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.ಬಿಜೆಪಿ ಎಂದಿಗೂ ಕೂಲಿ ಕಾರ್ಮಿಕರ, ಬಡವರ ಹಾಗೂ ರೈತಪರ ಇಲ್ಲ. ಕೇಂದ್ರ ಸರ್ಕಾರ ಅಂಬಾನಿ, ಅದಾನಿ, ಚೋಕ್ಸಿಯಂತಹ ಉದ್ಯಮಿಗಳ ಪರ ಇದ್ದಾರೆ. ಅಂತಹ ಉದ್ಯಮಿಗಳ ಸಾಲಮನ್ನಾ ಮಾಡುವ ಕೇಂದ್ರ ಸರ್ಕಾರ, ರೈತರ ಮೇಲೆ ಕಾಳಜಿ ಇದ್ದರೆ ಸಾಲಮನ್ನಾ ಮಾಡಲಿ ನೋಡೋಣ ಎಂದರು. ಕೇವಲ ಭಾಷಣ ಮಾಡಿ ಜನರನ್ನು ಮರುಳು ಮಾಡುವುದಷ್ಟೇ ಅವರ ಕೆಲಸ ಎಂದು ಪ್ರಧಾನಿ ವಿರುದ್ಧ ಸಚಿವ ದರ್ಶನಾಪುರ ಟೀಕಿಸಿದರು.
ಬಿಜೆಪಿಗೆ ಪಾಠ ಕಲಿಸಿದ್ದಾರೆ:ಚುನಾವಣೆಯಲ್ಲಿ ಕರ್ನಾಟಕದ ಜನತೆ ಬಿಜೆಪಿಗೆ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಒಂದೇ ಸೀಟ್ ಇತ್ತು. ಬಿಜೆಪಿಯ ಇಬ್ಬರೂ ಮಾಜಿ ಸಿಎಂ ಮಕ್ಕಳನ್ನು ಸೋಲಿಸಿದ್ದಾರೆ. ಶಿಗ್ಗಾವಿ, ಚೆನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ದುಡ್ಡಿನ ಹೊಳೆ ಹರಿಸಿದರೂ ಜನ ಮಾತ್ರ ಗ್ಯಾರಂಟಿಗಳಿಗೆ ಮಣೆ ಹಾಕಿದ್ದಾರೆ. ಜನರು ಎಲ್ಲವನ್ನೂ ಅರಿತುಕೊಂಡಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಎಲ್ಲ ಸಮಾಜದವರಿಗೆ ಬಡತನ ರೇಖೆ ಹಾಗೂ ಅದಕ್ಕಿಂತ ಕೆಳಗಿರುವ ಜನರ ಕುಟುಂಬಗಳಿಗೆ ಯೋಜನೆಗಳ ಕೊಟ್ಟಿದ್ದೇವೆ. ಇದೇ ಕಾರಣಕ್ಕೆ ಬಿಜೆಪಿಯ ಇಬ್ಬರೂ ಮಾಜಿ ಸಿಎಂಗಳ ಮಕ್ಕಳಿಗೆ ಜನ ಪಾಠ ಕಲಿಸಿದ್ದಾರೆಂದರು.
ಗ್ಯಾರಂಟಿ ಬಗ್ಗೆ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ. ಗ್ಯಾರಂಟಿ ಯೋಜನೆ ವಾಪಸ್ ಪಡೆಯುವುದಿಲ್ಲ ಎಂದು ಖುದ್ದು ಸಿಎಂ ಅವರೇ ಹೇಳಿದ್ದಾರೆ. ಈ ಬಗ್ಗೆ ಯಾರ ಮಾತು- ಉಹಾಪೋಹಗಳಿಗೆ ಜನರು ಕಿವಿಗೊಡಬಾರದು ಎಂದು ಸಿಎಂ ಹೇಳಿದ್ದಾರೆ ಎಂದ ಸಚಿವ ದರ್ಶನಾಪುರ, ರಾಜ್ಯ ಸರ್ಕಾರದ ಈ ಗ್ಯಾರಂಟಿ ಯೋಜನೆಗಳಿಂದಾಗಿ ಪ್ರತಿವರ್ಷ ನೇರವಾಗಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದಂತೆ 62 ಸಾವಿರ ಕೋಟಿ ರು. ಯೋಜನೆಗಳು ಬಡಜನರಿಗೆ ತಲುಪುತ್ತಿವೆ ಎಂದರು.ಬಡವರ ಪರ ಇಂತಹ ಯೋಜನೆಗಳ ಕುರಿತು ಪ್ರಧಾನಿ ಟೀಕೆ ಮಾಡುತ್ತಾರೆ. ಆದರೆ, ಇದೇ ಬಿಜೆಪಿ ಪಕ್ಷ ತಮ್ಮ ಸರ್ಕಾರದಲ್ಲಿ ಇಂತಹ ಘೋಷಣೆಗಳನ್ನು ಮಾಡುತ್ತಾರೆ. ಬಿಜೆಪಿ ಮಹಾರಾಷ್ಟ್ರದಲ್ಲಿ ಮಾಡಿಲ್ಲವೇ ಎಂದು ಪ್ರಶ್ನಿಸಿದ ದರ್ಶನಾಪುರ, ದುಡ್ಡು ಮೇಲಿಂದ ಬೀಳುತ್ತದೆಯೇ ? ತೆರಿಗೆ ಹಣದಿಂದಲೇ ಅಲ್ಲವೇ ದುಡ್ಡು ಬಂದು ಯೋಜನೆಗಳ ರೂಪಿಸುವುದು ಎಂದರು.
-----30ವೈಡಿಆರ್10 : ಸಚಿವ ದರ್ಶನಾಪುರ ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
---000---