ಕೈಗಾರಿಕಾ ಕಾರಿಡಾರ್ ಜಾರಿಗೆ ಚಿಂತನೆ

| Published : Nov 16 2025, 01:15 AM IST

ಸಾರಾಂಶ

ಕೈಗಾರಿಕಾ ಕ್ಷೇತ್ರದಲ್ಲಿ ಮುಂಚಣಿಯಲ್ಲಿರುವ ಕರ್ನಾಟಕ ರಾಜ್ಯದಾದ್ಯಂತ ಸೂಕ್ತ ಕೈಗಾರಿಕಾ ಕಾರಿಡಾರ್ ಯೋಜನೆ ಚೌಕಟ್ಟಿನಡಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವುದರಿಂದ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದಂತೆ ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಸಾಗಾಣಿಕೆ ಮೂಲ ಸೌಕರ್ಯ ಬಲಪಡಿಸುವುದು, ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗಲಿದೆ

ಕನ್ನಡಪ್ರಭ ವಾರ್ತೆ ಕೋಲಾರರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಯೋಜನೆ (ಎನ್‌ಐಸಿಡಿಪಿ) ಅನುಷ್ಠಾನಗೊಳಿಸಲು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಶ್ ಗೋಯಲ್‌ರೊಂದಿಗೆ ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ವಾಣಿಜ್ಯ ಸಚಿವಾಲಯದ ಕಚೇರಿಯಲ್ಲಿ ಕುಮಾರಣ್ಣ ಸಚಿವ ಗೋಯಲ್‌ರನ್ನು ಭೇಟಿಯಾಗಿ ಮೈಸೂರು, ಚಾಮರಾಜ ನಗರ, ಮಂಡ್ಯ, ಕೋಲಾರ, ಮಂಗಳೂರು, ಹುಬ್ಬಳಿ, ಧಾರವಾಡ, ರಾಯಚೂರು, ಬೀದರ್ ಒಳಗೊಂಡ ಬಹುವ್ಯಾಪ್ತಿಯ ಎನ್.ಐ.ಸಿ.ಡಿ.ಪಿಯನ್ನು ಅನುಷ್ಟಾನಗೊಳಿಸುವುದರಿಂದ ರಾಜ್ಯ ಹಾಗೂ ವಿಷೇಶವಾಗಿ ಕೋಲಾರ ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಮಹತ್ವದ ಕೊಡುಗೆ ನೀಡಿದಂತಾಗುವುದು ಎಂದು ಹೇಳಿದರು. ಕೈಗಾರಿಕಾ ಪಾರ್ಕ್‌ ಸ್ಥಾಪನೆ

ಕೈಗಾರಿಕಾ ಕ್ಷೇತ್ರದಲ್ಲಿ ಮುಂಚಣಿಯಲ್ಲಿರುವ ಕರ್ನಾಟಕ ರಾಜ್ಯದಾದ್ಯಂತ ಸೂಕ್ತ ಕೈಗಾರಿಕಾ ಕಾರಿಡಾರ್ ಯೋಜನೆ ಚೌಕಟ್ಟಿನಡಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವುದರಿಂದ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದಂತೆ ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಸಾಗಾಣಿಕೆ ಮೂಲ ಸೌಕರ್ಯ ಬಲಪಡಿಸುವುದು, ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವುದು ಸೇರಿದಂತೆ ಹಲವು ಆಶಯಗಳಿಗೆ ಈ ಯೋಜನೆ ನೆರವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.ಈ ಯೋಜನೆ ಅನುಷಾನದಿಂದ ಸಾಗಣಿಕೆ ಸುಲಭವಾಗುವ ಮೂಲಕ ಕೈಗಾರಿಕಾಭಿವೃದ್ದಿ ವೇಗ-ಗತಿಯಲ್ಲಿ ಸಾಗುತ್ತದೆ. ಈ ಯೋಜನೆಯ ಅನುಷ್ಠಾನದಿಂದ ನಮ್ಮ ಜಿಲ್ಲೆಯೂ ಸೇರಿದಂತೆ ರಾಜ್ಯಕ್ಕೆ ಸಮಾಗ್ರವಾದ ಅಭಿವೃದ್ದಿಗೆ ಪೂರಕವಾಗಲಿದೆ. ಮುಖ್ಯವಾಗಿ ಸಾಮೂಹಿಕವಾಗಿ ಕೈಗಾರಿಕಾ ಅಭಿವೃದ್ದಿ ಜೂತೆಗೆ ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ. ಇದರಿಂದ ಕೋಲಾರ ಜಿಲ್ಲೆಯು ಅಭಿವೃದ್ದಿಯ ಪಥದತ್ತ ಸಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ನಿರುದ್ಯೋಗ ಸಮಸ್ಯೆಗೆ ಪರಿಹಾರ

ಕೇಂದ್ರ ಸರ್ಕಾರವು ಉತ್ಪಾದನೆ ಮತ್ತು ಕೈಗಾರಿಕಾ ಸ್ವರ್ಧಾತ್ಮಕತೆ ಬಲಪಡಿಸುವ ವಿಶಾಲ ದೃಷ್ಠಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿ ಕೊಳ್ಳುವ ಭರವಸೆ ನೀಡಲಾಗಿದೆ. ಕೈಗಾರಿಕಾ ಪಾರ್ಕ್‌ಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಹೊಂದಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸುವುದು. ಪ್ರಾದೇಶಿಕ ಪೂರೈಕೆ ಸರಪಳಿಯ ಸಂರ್ಪಕಗಳನ್ನು ಮತ್ತಷ್ಟು ಬಲ ಪಡಿಸುವುದು. ಇದರಿಂದ ಮೌಲ್ಯವರ್ದಿತ ವಲಯಗಳ ವಿಸ್ತರಣೆ ಸೇರಿದಂತೆ ವಿಶೇಷ ಕೈಗಾರಿಕಾ ಸಮುಹಗಳಿಗೆ ಉತ್ತೇಜನ ದೊರಕುತ್ತದೆ ಎಂದು ಸಂಸದ ಎಂ.ಮಲ್ಲೇಶ್‌ಬಾಬು ವಿವರಿಸಿದರು.